More

    ಪೂರ್ತಿಗೊಂಡಿಲ್ಲ ಬಂದರು ಕಾಮಗಾರಿ

    ವಿಜಯವಾಣಿ ಸುದ್ದಿಜಾಲ ಕಾಸರಗೋಡು
    ಜಿಲ್ಲೆಯ ಮೀನುಗಾರರ ಕನಸಿನ ಕೂಸಾಗಿರುವ ಎರಡು ಮೀನುಗಾರಿಕಾ ಕಿರುಬಂದರುಗಳ ಕಾರ್ಯಾರಂಭಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ. ಏಳೆಂಟು ವರ್ಷಗಳಿಂದ ಎರಡೂ ಮೀನುಗಾರಿಕಾ ಬಂದರುಗಳ ಕಾಮಗಾರಿ ನಡೆಯುತ್ತಿದ್ದರೂ ಇದುವರೆಗೆ ಕೆಲಸ ಪೂರ್ತಿಗೊಂಡಿಲ್ಲ.
    ಎರಡೂ ಬಂದರು ಕಾಮಗಾರಿಗಾಗಿ 75 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. ಕಾಸರಗೋಡು ಕಸಬಾ ಕಡಪ್ಪುರದಲ್ಲಿ 6 ಸಾವಿರ ಮೀನುಗಾರರಿಗೆ ಪ್ರಯೋಜನವಾಗುವ ರೀತಿಯಲ್ಲಿ ಮೀನುಗಾರಿಕಾ ಬಂದರು ಸ್ಥಾಪನೆಗೆ ಮುಂದಾಗಿದ್ದರೂ ಇದರ ಪ್ರಯೋಜನಕ್ಕಿಂತ ಸಮಸ್ಯೆಯೇ ಹೆಚ್ಚಾಗಿರುವುದಾಗಿ ಇಲ್ಲಿನ ಮೀನುಗಾರರು ಅಳಲು ತೋಡಿಕೊಳ್ಳುತ್ತಾರೆ.

    1996ರಲ್ಲಿ ಇಲ್ಲಿ ಬಂದರು ನಿರ್ಮಾಣದ ಬಗ್ಗೆ ರೂಪುರೇಷೆ ತಯಾರಿಸಲಾಗಿದ್ದು, 2010ರಲ್ಲಿ ಅಂದಿನ ಬಂದರು ಖಾತೆ ಸಚಿವ ಎಸ್.ಶರ್ಮ ಶಿಲಾನ್ಯಾಸ ನಡೆಸಿದ್ದರು. ಇಲ್ಲಿ ದಕ್ಷಿಣ ಭಾಗಕ್ಕೆ ಸಮುದ್ರದಲ್ಲಿ 570 ಮೀ. ಹಾಗೂ ಉತ್ತರ ಭಾಗಕ್ಕೆ 530 ಮೀ. ಉದ್ದದ ಬ್ರೇಕ್‌ವಾಟರ್ ತಡೆಗೋಡೆ ನಿರ್ಮಿಸಲಾಗಿದ್ದು, ಧಕ್ಕೆ ಸಹಿತ ಕಟ್ಟಡಗಳ ನಿರ್ಮಾಣಕ್ಕೆ 30 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಗಿದೆ. 2016ರಲ್ಲಿ ಮೀನುಗಾರಿಕಾ ಕಿರು ಬಂದರು ಉದ್ಘಾಟನೆಗೆ ದಿನ ನಿಗದಿಪಡಿಸಲಾಗಿತ್ತು. ಆದರೆ ಬ್ರೇಕ್‌ವಾಟರ್ ನಿರ್ಮಾಣ ಅವ್ಯವಸ್ಥೆಯಿಂದ ಕೂಡಿರುವುದಾಗಿ ಆರೋಪಿಸಿ ಇಲ್ಲಿನ ಮೀನುಗಾರರು ಕೆಲಸ ಸಂಪೂರ್ಣಗೊಳಿಸದೆ ಉದ್ಘಾಟನೆಗೆ ಅವಕಾಶ ನೀಡಿರಲಿಲ್ಲ. ಬ್ರೇಕ್‌ವಾಟರ್ ತಡೆಗೋಡೆ ಮತ್ತಷ್ಟು ವಿಸ್ತರಿಸುವಂತೆ ಆಗ್ರಹ ಕೇಳಿಬಂದಿತ್ತು. ಬ್ರೇಕ್‌ವಾಟರ್ ತಡೆಗೋಡೆ ಅವ್ಯವಸ್ಥೆಯಿಂದ ದೋಣಿಗಳಿಗೆ ಸರಾಗವಾಗಿ ಧಕ್ಕೆಯೊಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಈ ಪ್ರದೇಶದಲ್ಲಿ ಹೂಳು ತುಂಬಿಕೊಂಡಿರುವುದರಿಂದ ದೋಣಿಗಳು ಅಪಾಯಕ್ಕೆ ಸಿಲುಕುತ್ತಿವೆ ಎಂಬುದು ಇಲ್ಲಿನ ಮೀನುಗಾರರ ಆರೋಪ.

    ಕಿರು ಬಂದರು ಕಾಮಗಾರಿ ಆರಂಭಿಸಿ ಹತ್ತು ವರ್ಷ ಸಮೀಪಿಸುತ್ತಿದ್ದು, ಇಲ್ಲಿನ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ. ಬಂದರು ಯಶಸ್ವಿಯಾಗಿ ಕಾರ್ಯಾಚರಿಸಬೇಕಾದರೆ ಇಲ್ಲಿ ಮತ್ತಷ್ಟು ಹಣ ವ್ಯಯಿಸಬೇಕಾದ ಅನಿವಾರ್ಯತೆಯೂ ಎದುರಾಗಿದ್ದು, ಶುಚಿತ್ವವೂ ಕನಸಿನ ಮಾತಾಗಿದೆ. ಕಿರು ಬಂದರಿನಲ್ಲಿ ಕೆಲವೊಂದು ಮೀನುಗಾರಿಕಾ ದೋಣಿಗಳು ತಂಗುತ್ತಿದ್ದರೆ, ಇನ್ನು ಕೆಲವು ನೀಲೇಶ್ವರದ ಮೀನುಗಾರಿಕಾ ಬಂದರಿನತ್ತ ಮುಖ ಮಾಡುತ್ತಿವೆ.

    ಕಾಮಗಾರಿಯಲ್ಲಿ ಕೆಲವೊಂದು ಲೋಪಗಳಿರುವುದನ್ನು ಸರ್ವೇ ಮೂಲಕ ಪತ್ತೆ ಹಚ್ಚಲಾಗಿದ್ದು, ಇಲ್ಲಿ ಉತ್ತರ ಭಾಗಕ್ಕಿರುವ ಬ್ರೇಕ್‌ವಾಟರ್ ತಡೆಗೋಡೆಯನ್ನು 120 ಮೀ.ವರೆಗೆ ವಿಸ್ತರಿಸಲು 17.2 ಕೋಟಿ ರೂ. ಮೊತ್ತ ಮಂಜೂರುಗೊಂಡಿದೆ. ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದ್ದು, ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.
    ಅಮಲಾ, ಸಹಾಯಕ ಅಭಿಯಂತೆ, ಮೀನುಗಾರಿಕಾ ಬಂದರು, ಕಸಬಾಕಡಪ್ಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts