More

    ಪೂಜೆಗೆ ಮಾತ್ರ ಸೀಮಿತವಾಯ್ತೆ ಬಸ್?

    ಅಕ್ಕಿಆಲೂರ: ಹುಬ್ಬಳ್ಳಿಯಿಂದ ಅಕ್ಕಿಆಲೂರಿಗೆ ನೇರ ಬಸ್ ಸೇವೆ ಆರಂಭಿಸಬೇಕೆಂಬ ಸ್ಥಳೀಯರ ಒತ್ತಾಯಕ್ಕೆ ಸ್ಪಂದಿಸಿ ಸಾರಿಗೆ ಇಲಾಖೆ 2020ರ ಅಕ್ಟೋಬರ್ 2ರಂದು ಗೋಕಾಕ್​ನಿಂದ ಹುಬ್ಬಳ್ಳಿ ಮಾರ್ಗವಾಗಿ ಅಕ್ಕಿಆಲೂರಿಗೆ ಬಸ್ ಸೇವೆ ಆರಂಭಿಸಿ ಪಟ್ಟಣದಲ್ಲೇ ರಾತ್ರಿ ಬಸ್​ಗೆ ಉಳಿದುಕೊಳ್ಳಲು ಕ್ರಮ ಕೈಗೊಂಡಿತ್ತು. ಇದರಿಂದ ಸಂತಸಗೊಂಡಿದ್ದ ಪಟ್ಟಣದ ಜನತೆ ಅದ್ದೂರಿ ಪೂಜೆ ಮಾಡಿ ಚಾಲನೆ ನೀಡಿದ್ದರು. ಆದರೆ, ಗೋಕಾಕ್ ಹುಬ್ಬಳ್ಳಿ ಬಸ್ ಸೇವೆ ಪೂಜೆಗೆ ಮಾತ್ರ ಸಿಮೀತವಾಗಿ ನಂತರ ಸಂಚಾರ ಸ್ಥಗಿತಗೊಳಿಸಿತು. ಇದರಿಂದಾಗಿ ಹುಬ್ಬಳ್ಳಿಗೆ ನೇರ ಬಸ್ ಸೇವೆ ಆರಂಭಿಸಬೇಕೆಂಬ ಪ್ರಯಾಣಿಕರ ಬಹುವರ್ಷದ ಕನಸು ಕನಸಾಗಿಯೇ ಉಳಿಯುವಂತಾಗಿದೆ.

    ಹಾವೇರಿ ಜಿಲ್ಲೆಯ ಪ್ರಮುಖ ಹೋಬಳಿ ಪ್ರದೇಶಗಳಲ್ಲಿ ಒಂದಾದ ಅಕ್ಕಿಆಲೂರ ವ್ಯಾಪಾರಿಗಳು, ತಮ್ಮ ವ್ಯಾಪಾರ ಸಾಮಗ್ರಿ, ದಾಸ್ತಾನು ಖರೀದಿಸಲು ಹುಬ್ಬಳ್ಳಿ ಪ್ರಮುಖ ಮಾರುಕಟ್ಟೆಯಾಗಿದೆ. ಪಟ್ಟಣ ಹಾಗೂ ಸುತ್ತಲಿನ 30ಕ್ಕೂ ಹೆಚ್ಚು ಗ್ರಾಮದ ಜನರು ಹುಬ್ಬಳ್ಳಿಗೆ ಪ್ರಯಾಣ ಬೆಳಸುತ್ತಾರೆ. ಆದರೆ, ಅಕ್ಕಿಆಲೂರಿನಿಂದ ಹುಬ್ಬಳ್ಳಿಗೆ ಸಂಚರಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮ ಹಾನಗಲ್ಲಿನಿಂದ ಬಸ್ ಬದಲಾಯಿಸಿ, ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವ ಪರಿಸ್ಥಿತಿ ನಿರ್ವಣವಾಗಿದೆ.

    ಆದರೆ, ಹಾನಗಲ್ಲಿನಿಂದ ರಾತ್ರಿ 8 ಗಂಟೆ ನಂತರ ಅಕ್ಕಿಆಲೂರಿಗೆ ಬಸ್ ಸೌಲಭ್ಯ ವಿರಳ. ಹೀಗಾಗಿ, ಅಕ್ಕಿಆಲೂರಿನಿಂದ ನೇರ ಹುಬ್ಬಳ್ಳಿಗೆ ಬಸ್ ಸೇವೆ ಆರಂಭಿಸಬೇಕು ಮತ್ತು ಹುಬ್ಬಳ್ಳಿಯಿಂದ ರಾತ್ರಿ ಒಂದು ಬಸ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಉಳಿದುಕೊಂಡು ಮತ್ತೆ ಬೆಳಗ್ಗೆ ಸಾರ್ವಜನಿಕರ ಅನುಕೂಲದ ಸಮಯಕ್ಕೆ ಹುಬ್ಬಳ್ಳಿಗೆ ಸಂಚರಿಸಬೇಕು ಎಂಬ ಒತ್ತಾಯ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

    ಅಕ್ಕಿಆಲೂರಿನಿಂದ ಹುಬ್ಬಳ್ಳಿಗೆ ಬಸ್ ಸೇವೆ ಒದಗಿಸಿ ಅಕ್ಕಿಆಲೂರಿನಲ್ಲಿಯೇ ಬಸ್ ಉಳಿದುಕೊಳ್ಳಬೇಕು ಎಂಬ ಬೇಡಿಕೆ ಬಂದಿದೆ. ಈ ಹಿಂದೆ ಗೋಕಾಕ್​ನಿಂದ ಅಕ್ಕಿಆಲೂರಿನಿಗೆ ಬಸ್ ಆರಂಭಿಸಿದ್ದು, ಗೋಕಾಕ್ ಡಿಪೋದವರು ಯಾಕೆ ಸ್ಥಗಿತಗೊಳಿಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. | ವಿ.ಎಂ. ಅರ್ಕಾಚಾರಿ ಹಾನಗಲ್ಲ ಸಾರಿಗೆ ಸಂಸ್ಥೆ ಮ್ಯಾನೇಜರ್

    ಅಕ್ಕಿಆಲೂರು ಹಾಗೂ ಅಕ್ಕಪಕ್ಕದ ಗ್ರಾಮಗಳ ಜನತೆ ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಅಕ್ಕಿಆಲೂರಿನಿಂದ ಹುಬ್ಬಳ್ಳಿಗೆ ಬಸ್ ಆರಂಭಿಸಿ, ಪಟ್ಟಣದಲ್ಲಿಯೇ ವಸ್ತಿ ಉಳಿದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು. | ಮಹೇಶ ಸಾಲವಟಿಗಿ ಅಕ್ಕಿಆಲೂರ ವ್ಯಾಪಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts