More

    ಪುರಸಭೆ ವಿರುದ್ಧ ಕರವೇ ಪ್ರತಿಭಟನೆ

    ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಡೆಯುವ ವಾರದ ಸಂತೆಯ ದಿನದಂದು ವ್ಯಾಪಾರಿಗಳು ರಸ್ತೆ ಒತ್ತುವರಿ ಮಾಡಿ ಸಾಕಷ್ಟು ಸಮಸ್ಯೆ ಉಂಟು ಮಾಡಿದ್ದು, ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವಲ್ಲಿ ಪುರಸಭೆ ವಿಫಲವಾಗಿದೆ ಎಂದು ಆರೋಪಿಸಿ ಕರವೇ ಕಾರ್ಯಕರ್ತರು ಪುರಸಭೆ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು.
    ಪಟ್ಟಣದ ಪುರಸಭೆ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ದ ತಾಲೂಕು ಅಧ್ಯಕ್ಷ ಚಂದಗಾಲು ಶಂಕರ್ ನೇತೃತ್ವದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಪುರಸಭೆ ಮುಖ್ಯಾಧಿಕಾರಿ, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ಶನಿವಾರ ಪಟ್ಟಣದಲ್ಲಿ ವಾರದ ಸಂತೆ ನಡೆಸಲು ವಿಶಾಲವಾದ ಮೈದಾನ ಇದ್ದರೂ ಸಹ ಹಲವು ಸೊಪ್ಪು, ತರಕಾರಿ ಹಾಗೂ ಇನ್ನಿತರ ವ್ಯಾಪಾರಿಗಳು ಸಂತೆ ಮೈದಾನದ ಹೊರಗಿನ ಕಿರಿದಾದ ರಸ್ತೆಯ ಇಕ್ಕೆಲಗಳು, ಖಾಸಗಿ ಬಸ್ ನಿಲ್ದಾಣದ ಒಳಭಾಗ ಸೇರಿದಂತೆ ಜಾಮಿಯಾ ಮಸೀದಿವರೆಗೂ ಸ್ಥಳ ಆವರಿಸಿಕೊಂಡು ಆಹಾರ ವಸ್ತುಗಳನ್ನು ಹರಡಿ ವ್ಯಾಪಾರ ಮಾಡುವುದರಿಂದ ಜನದಟ್ಟಣೆ ಹೆಚ್ಚಾಗುತ್ತಿದೆ.
    ಶನಿವಾರ ವಾರಂತ್ಯದ ದಿನವಾದ ಕಾರಣ ಶ್ರೀರಂಗಪಟ್ಟಣಕ್ಕೆ ಬರುವ ಪ್ರವಾಸಿ ವಾಹನಗಳು, ನಗರ ಸಾರಿಗೆ ಬಸ್‌ಗಳು, ತಾಲೂಕು ಹಾಗೂ ಸ್ಥಳಿಯ ಜನರ ವಾಹನಗಳು ಸಂಚರಿಸಲು ಸಾಧ್ಯವಾಗದಂತೆ ಟ್ರಾಫಿಕ್ ಉಂಟಾಗುತ್ತಿದೆ. ಸಂತೆಯ ನೆಲದ ಸುಂಕ ವಸೂಲಿ ಮಾಡುವ ಗುತ್ತಿಗೆದಾರರು ಹಣದ ಆಸೆಗೆ ಎಲ್ಲೆಂದರಲ್ಲಿ ಅಂಗಡಿ ಇರಿಸಲು ಅವಕಾಶ ನೀಡುತ್ತಿದ್ದಾರೆ ಎಂದು ದೂರಿದರು.
    ಸ್ಥಳಕ್ಕಾಗಮಿಸಿದ ಪುರಸಭೆ ಸದಸ್ಯ ಎಂ.ಎಲ್.ದಿನೇಶ್, ಶ್ರೀರಂಗಪಟ್ಟಣ ಟೌನ್ ಠಾಣೆ ಇನ್ಸ್‌ಪೆಕ್ಟರ್ ಬಿ.ಎಸ್.ಪ್ರಕಾಶ್, ಪುರಸಭೆ ಅಧಿಕಾರಿ ರಾಜಣ್ಣ ಪ್ರತಿಭಟನಾಕಾರರ ಮನವಿ ಆಲಿಸಿದರು. ಸಮಸ್ಯೆಯನ್ನು ತಕ್ಷಣದಿಂದಲೇ ಪರಿಹರಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು.

    ಕರವೇ ವೇದಿಕೆಯ ಗೌರವ ಅಧ್ಯಕ್ಷ ಗೋವಿಂದಪ್ಪ, ಉಪಾಧ್ಯಕ್ಷ ರಾಜಶೇಖರ್, ಸಂಘಟನಾ ಕಾರ್ಯದರ್ಶಿ ಲೋಕೇಶ್, ತಿಮ್ಮರಾಜು ರಾಮಣ್ಣ, ಪುಟ್ಟಸ್ವಾಮಿ, ಶ್ರೀನಿವಾಸ ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts