More

    ಪುರಸಭೆ, ಪ್ರಾಧಿಕಾರ ಒಗ್ಗೂಡಿದರೆ ಅಭಿವೃದ್ಧಿ


    ಹಾಸನ : ಚನ್ನರಾಯಪಟ್ಟಣ ಪಟ್ಟಣದ ಅಭಿವೃದ್ಧಿಯಲ್ಲಿ ನಗರ ಯೋಜನಾ ಪ್ರಾಧಿಕಾರದ ಪಾತ್ರ ಪ್ರಮುಖವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.
    ಪಟ್ಟಣದಲ್ಲಿ 56 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಗರ ಯೋಜನಾ ಪ್ರಾಧಿಕಾರದ ನೂತನ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಪುರಸಭೆ ಹಾಗೂ ಪ್ರಾಧಿಕಾರ ಜೊತೆಗೂಡಿ ನಡೆದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.


    ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಪಟ್ಟಣದಲ್ಲಿ ವ್ಯವಸ್ಥಿತವಾಗಿ ಯುಜಿಡಿ ನಿರ್ಮಿಸಲು 100ರಿಂದ 125 ಕೋಟಿ ರೂ. ಅನುದಾನ ಅಗತ್ಯವಿದ್ದು, ಈಗಾಗಲೇ ಸರ್ಕಾರದ ಗಮನ ಸೆಳೆಯಲಾಗಿದೆ. ಸರ್ಕಾರದ ನಿಯಮದಂತೆ ಯೋಜನಾ ಬದ್ಧವಾಗಿ ಬಡಾವಣೆಗಳನ್ನು ನಿರ್ಮಿಸಬೇಕು. ನಿಯಮ ಬಾಹಿರವಾಗಿ ನಿರ್ಮಿಸಿದರೆ ನಂತರದಲ್ಲಿ ಅಭಿವೃದ್ಧಿ ಯೋಜನೆಗೆ ಕಾನೂನು ತೊಡಕು ಎದುರಾಗಲಿದೆ. ಬಡಾವಣೆ ನಿರ್ಮಾಣ ವೇಳೆ ಸೂಕ್ತ ರಸ್ತೆ, ಚರಂಡಿ, ಪಾರ್ಕ್ ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಿರಬೇಕು ಎಂದು ಹೇಳಿದರು.


    ಚನ್ನರಾಯಪಟ್ಟಣವನ್ನು ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೇರಿಸುವಂತೆ ಈಗಾಗಲೇ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ರಾಜ್ಯದ 40 ಪುರಸಭೆಗಳನ್ನು ನಗರಸಭೆಗೆ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಪ್ರಸ್ತಾವನೆಯ ಹಂತದಲ್ಲಿದೆ. ದಿನದಿಂದ ದಿನಕ್ಕೆ ವಿಸ್ತಾರವಾಗಿ ಬೆಳೆಯುತ್ತಿರುವ ಚನ್ನರಾಯಪಟ್ಟಣವು ಶೀಘ್ರದಲ್ಲಿಯೇ ನಗರಸಭೆಯಾಗಲಿದೆ ಎಂದರು.
    ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎ.ಸಿ.ಆನಂದ್‌ಕುಮಾರ್ ಮಾತನಾಡಿ, ಅನುಮೋದನೆ ಇಲ್ಲದೆ ಮನೆ ನಿರ್ಮಿಸಿದರೆ ನೀರು, ಚರಂಡಿ ಹಾಗೂ ವಿದ್ಯುತ್ ಸೇರಿದಂತೆ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಸಿಂಗಲ್ ಪಹಣಿ ನೀಡುವ ವ್ಯವಸ್ಥೆ ನಿಲ್ಲಬೇಕು. ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂಬ ಕಾರಣಕ್ಕೆ ಸಿಂಗಲ್ ಪಹಣಿ ನಿವೇಶನ ಪಡೆದು ಮನೆ ಕಟ್ಟಿದರೆ ತೊಂದರೆ ಕಟ್ಟಿಟ್ಟ ಬುತ್ತಿ. ಅಲ್ಲದೆ, ಇದಕ್ಕೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ಸಿಗುವುದಿಲ್ಲ. ಪುರಸಭೆಯಿಂದಲೂ ಸೌಲಭ್ಯ ಪಡೆಯಲು ಅಡ್ಡಿಯಾಗಲಿದೆ ಎಂದರು.


    ಪುರಸಭೆ ಸೇರಿದಂತೆ 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಗ್ರಾಮಗಳು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದ್ದು, ಪಿಡಿಒಗಳ ಸಭೆ ಕರೆದು ಚರ್ಚಿಸಿ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದರು.


    ಪುರಸಭೆ ಅಧ್ಯಕ್ಷೆ ರಾಧಾ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬನಶಂಕರಿ ರಘು, ತಾಪಂ ಇಒ ಸುನೀಲ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಣತಿ ಶೇಖರ್, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಶುಭಾ, ವೆಂಕಟೇಶ್, ಸದಸ್ಯರಾದ ಹರ್ಷವರ್ಧನ್, ನಾಗರಾಜ್, ಶರತ್, ಪ್ರಾಧಿಕಾರದ ಸಹಾಯಕ ನಿರ್ದೇಶಕ ಪಿ.ಕೆ.ಶರತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts