More

    ಪಿಡಿಒ ವಿರುದ್ಧ ಭ್ರಷ್ಟಾಚಾರ ಆರೋಪ, ಜಾಲಿಗೆ ಪಂಚಾಯಿತಿ ಕಾರ್ಯಾಲಯದ ಎದುರು ಸದಸ್ಯರಿಂದ ಪ್ರತಿಭಟನೆ

    ಕುಂದಾಣ: ಹೋಬಳಿಯ ಜಾಲಿಗೆ ಗ್ರಾಪಂ ಪಿಡಿಒ ಉಷಾ ಎಂ. ಅವರು ಭ್ರಷ್ಟಾಚಾರದಲ್ಲಿ ತೊಡಗಿ ಹಲವು ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಜಾಲಿಗೆ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ಸದಸ್ಯರು ಪಂಚಾಯಿತಿ ಕಾರ್ಯಾಲಯದ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ಜನರ ಕುಂದುಕೊರತೆಗೆ ಸ್ಪಂದಿಸದೆ, ಬಿಲ್ಡರ್‌ಗಳ ಜತೆ ಶಾಮಿಲಾಗಿ ಅಕ್ರಮವಾಗಿ ಖಾತೆ ಮಾಡಿಕೊಟ್ಟು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಅಧ್ಯಕ್ಷರು ಮತ್ತು ಸದಸ್ಯರ ಮೇಲೆಯೇ ದರ್ಪ ತೋರುತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

    2019ರಲ್ಲಿ ಇದೇ ಪಂಚಾಯಿತಿಯಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಷಾ ಅವರು ಹಲವು ಅಕ್ರಮ ಮಾಡಿ ಅಮಾನತು ಗೊಂಡಿದ್ದರು. ಪುನಃ ರಾಜಕೀಯ ಪ್ರಭಾವ ಬಳಸಿ 2020ರ ಜುಲೈನಲ್ಲಿ ಮತ್ತೆ ಜಾಲಿಗೆ ಪಂಚಾಯಿತಿಗೆ ಬಂದಿದ್ದಾರೆ. ಈಗಲೂ ಅಕ್ರಮ ಖಾತೆ ಮಾಡಿಕೊಡುವುದು, ಸಾರ್ವಜನಿಕರಿಂದ ಲಂಚ ಕೇಳುವುದು, ಚುನಾಯಿತಿ ಪ್ರತಿನಿಧಿಗಳಿಗೆ ಗೌರವ ನೀಡದೆ ಅನುಚಿತ ರೀತಿ ವರ್ತಿಸುತ್ತಾರೆ ಎಂದು ಆರೋಪಿಸಿದರು.

    ಕೋವಿಡ್-19 ಟಾಸ್‌‌ಕೆೆರ್ಸ್ ಸಭೆಗೆ ಗೈರಾಗುವುದು, ಗ್ರಾಪಂ ಕಚೇರಿ ಚಲನ-ವಲನ ಪುಸ್ತಕದಲ್ಲಿ ಸಹಿ ಮಾಡುವುದಿಲ್ಲ. ಗ್ರಾಪಂ ವಾರ್ಡ್ ಸಭೆ ನಡೆಸಲು ನಿರ್ಲಕ್ಷ್ಯ, ಬೀದಿ ದೀಪ, ಸೂಲಾರ್ ಪೋಲ್ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆ. ಗ್ರಾಮಗಳಲ್ಲಿ ಕೃತಕ ಕಸ ವಿಲೇವಾರಿ ಘಟಕ ಮಾಡಿರುವುದಾಗಿ ಸುಳ್ಳು ಮಾಹಿತಿಯನ್ನು ಮೇಲಧಿಕಾರಿಗಳಿಗೆ ನೀಡಿದ್ದಾರೆ ಎಂದು ಅಧ್ಯಕ್ಷೆ ದೀಪ್ತಿ ವಿಜಯಕುಮಾರ್ ದೂರಿದರು.
    ಪ್ರಭಾವಿಗಳಿಂದ ಹಣ ಪಡೆದು ಹಲವಾರು ಸರ್ಕಾರಿ ಜಾಗವನ್ನು ಅವರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ದಾಖಲೆ ಸಹಿತ ಗ್ರಾಮೀಣ ಅಭಿವೃದ್ಧಿ ಸಚಿವರು, ಪಂಚಾಯತ್ ರಾಜ್ ಅಧೀನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಸಚಿವರಿಗಳಿಗೆ ದೂರು ನೀಡಿರುವುದಾಗಿ ಮಾಹಿತಿ ನೀಡಿದರು.

    ಪಿಡಿಒ ಉಷಾ ಅವರ ಅಕ್ರಮದ ಕುರಿತಂತೆ ಜಿಪಂ ಸಿಇಒ ಮತ್ತು ಇಒ ಅವರಿಗೆ ಹಲವು ಬಾರಿ ದೂರು ನೀಡಿದ್ದರೂ ಅವರುಗಳು ಯಾವುದೇ ಕ್ರಮ ಕೈ ಗೊಂಡಿಲ್ಲ ಎಂದು ಪಂಚಾಯಿತಿ ಉಪಾಧ್ಯಕ್ಷ ಬಾಲ ಸುಬ್ರಹ್ಮಣ್ಯ ತಿಳಿಸಿದ್ದಾರೆ.

    ಜಾಲಿಗೆ ಗ್ರಾಪಂ ಸದಸ್ಯರಾದ ಸಿಎಂ ಆನಂದ್, ಮಂಜುಳಾ, ಶೋಭಾ, ಕೆಂಪರಾಜ್, ಅಪ್ಪಯ್ಯ, ಸುಚಿತ್ರಾ, ಮುನಿಯಪ್ಪ, ಮುನಿರತ್ನಮ್ಮ, ಜಯಮ್ಮ, ಅಶ್ವಿನಿ, ಶಿವಲಿಂಗಮ್ಮ, ಮಹೇಶ್‌ಕುಮಾರ್, ಆನಂದ್‌ಕುಮಾರ್, ಗೋಪಿನಾಥ್, ಲಕ್ಷ್ಮಮ್ಮ, ಸೌಮ್ಯ ಇತರರು ಇದ್ದರು.

    ಪಿಡಿಒ ಉಷಾ ಅವರ ವಿರುದ್ಧ ಜಾಲಿಗೆ ಪಂಚಾಯಿತಿಯಿಂದ ಈ ಹಿಂದೆಯೂ ದೂರು ಬಂದಿತ್ತು. ಶುಕ್ರವಾರ ಪ್ರತಿಭಟನೆ ನಡೆಸಿ, ದೂರು ನೀಡಿದ್ದಾರೆ. ದೂರನ್ನು ಮೇಲಧಿಕಾರಿಗಳಿಗೆ ಕಳಿಸಲಾಗಿದ್ದು, ಅವರ ಆದೇಶದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು.
    ವಸಂತ್ ಕುಮಾರ್
    ಇಒ, ತಾಪಂ ದೇವನಹಳ್ಳಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts