More

    ಪಿಡಿಒ ಗ್ರಾಮದ ಡಿಸಿ ಇದ್ದಂತೆ ಸೌಜನ್ಯದಿಂದ ವರ್ತಿಸಿ


    ಚಿತ್ರದುರ್ಗ: ಕ್ಷೇತ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನೀಡದಿದ್ದರೆ, ಮೂಲಾಜಿಲ್ಲದೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಯಾರ ಒತ್ತಡಕ್ಕೂ ಮಣಿಯಲಾರೆ ಎಂದು ಶಾಸಕ ಕೆ.ಸಿ.ವೀರೇಂದ್ರ ಎಚ್ಚರಿಕೆ ನೀಡಿದರು.

    ತಾಪಂ ಸಭಾಂಗಣದಲ್ಲಿ ಸೋಮವಾರ ಪಿಡಿಒಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, 30 ವರ್ಷ ಕ್ಷೇತ್ರದಲ್ಲಿ ಈ ಹಿಂದೆ ಇದ್ದ ವಾತಾವರಣ ಮುಂದುವರೆಯಲು ಯಾವ ಕಾರಣಕ್ಕೂ ಬಿಡಲಾರೆ. ಕೋಟೆನಾಡಿನ ಜನ ಬೆಟ್ಟದಷ್ಟು ನಿರೀಕ್ಷೆ ಇಟ್ಟು ನನಗೆ ಅವಕಾಶ ಕಲ್ಪಿಸಿದ್ದಾರೆ. ಆ ಋಣ ಖಂಡಿತ ತೀರಿಸುತ್ತೇನೆ. ಮಾದರಿ ಕ್ಷೇತ್ರವಾಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಭ್ರಷ್ಟರನ್ನು ಸದೆ ಬಡಿಯುತ್ತೇನೆ ಎಂದು ಪುನರುಚ್ಚರಿಸಿದರು.

    ಈ ಹಿಂದೆ ಶಾಸಕರಾಗಿದ್ದವರಿಗೆ ಹೆದರಿ ಅನೇಕರು ಕೆಲಸ ನಿರ್ವಹಿಸುತ್ತಿದ್ದರು ಎಂಬುದು ಗಮನಕ್ಕೆ ಬಂದಿದೆ. ಪಿಡಿಒಗಳು ಸೇರಿ ಹಲವರು ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ಅವರ ಪರವಾಗಿಯೇ ಕಾರ್ಯನಿರ್ವಹಿಸಿದ್ದೀರಿ. ಆದರೆ, ನನ್ನ ಅವಧಿಯಲ್ಲಿ ಪ್ರಾಮಾಣಿಕರು ಭಯಪಡುವ ಅಗತ್ಯವಿಲ್ಲ. ಜನರ ಸೇವೆ ದೇವರ ಸೇವೆಯಷ್ಟೇ ಪವಿತ್ರವೆಂದು ಭಾವಿಸಿ ನಿಮ್ಮ ಕರ್ತವ್ಯ ನಿರ್ವಹಿಸಿ. ಹಳೆಯ ಕಥೆ ಕೇಳಲಾರೆ, ಇನ್ನೇನಿದ್ದರೂ ಅಭಿವೃದ್ಧಿ ಮಾತ್ರ ಕಾಣಬೇಕು. ಅದನ್ನು ಮಾಡದಿದ್ದರೆ ಸಹಿಸಲಾರೆ ಎಂದು ಎಚ್ಚರಿಸಿದರು.

    ಪಿಡಿಒಗಳು ಗ್ರಾಪಂ ವ್ಯಾಪ್ತಿಯ ಜಿಲ್ಲಾಧಿಕಾರಿ ಇದ್ದಂತೆ. ನೇರವಾಗಿ ನಿಮ್ಮ ಬಳಿಗೆ ಬರುವ ಜನರ, ಪಂಚಾಯಿತಿ ಸದಸ್ಯರ ಜೊತೆಗೆ ಸೌಹಾರ್ದತೆಯಿಂದ ವರ್ತಿಸಬೇಕು. ಯಾರನ್ನೂ ಅಲೆದಾಡಿಸುವ, ಅವಮಾನಿಸುವ ಕೆಲಸವಾಗಬಾರದು. ಅರ್ಜಿ ಹಾಕಿದ ನಂತರ ತ್ವರಿತವಾಗಿ ಕೆಲಸ ಮಾಡಿಕೊಡಬೇಕು. ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ವಿವಿಧೆಡೆ ಆಗುತ್ತಿಲ್ಲ ಎಂದು ಬೇಸರಿಸಿದರು.

    ಶಾಸಕರಿಂದ ತ್ವರಿತವಾಗಿ ಆಗುವಂತ ಕಾರ್ಯಗಳನ್ನು ಮೊದಲು ಸಂಕ್ಷಿಪ್ತ ಪಟ್ಟಿ ಮಾಡಿ ಕೊಡಿ. ಸರ್ಕಾರದಿಂದಲೇ ಆಗಬೇಕಾದರೆ ಅವುಗಳನ್ನು ಗಮನಕ್ಕೆ ತನ್ನಿ. ಸದನದಲ್ಲಿ ಪ್ರಸ್ತಾಪಿಸಿ ರಾಜ್ಯ ನಾಯಕರ ಗಮನಸೆಳೆದು ಕಾರ್ಯಗತ ಮಾಡೋಣ. ಕ್ಷೇತ್ರದೊಳಗೆ 60 ಮಂದಿ ಸ್ವಯಂ ಸೇವಕರು ಕೆಲಸ ಮಾಡುತ್ತಿದ್ದು, ಹದ್ದಿನ ಕಣ್ಣಿಡಲಿದ್ದಾರೆ. ಒಂದು ಸಭೆಯಲ್ಲಿ ಕಂಡ ಸಮಸ್ಯೆ ಮತ್ತೊಂದು ಸಭೆಯಲ್ಲೂ ಮುಂದುವರೆಯಬಾರದು. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸೂಚಿಸಿದರು.

    ಇ-ಸ್ವತ್ತಿಗೆ ಅಲೆದಾಡಿಸಲಾಗುತ್ತಿದೆ ಎಂಬ ದೂರು ಸಾಕಷ್ಟಿವೆ. ಈ ರೀತಿ ಯಾರೂ ಮಾಡಬೇಡಿ. ಆರ್‌ಒ ದುರಸ್ತಿ ಕೈಗೊಂಡು ಶುದ್ಧ ಕುಡಿಯುವ ನೀರು ಕೊಡಬೇಕು. ಚರಂಡಿಗಳು ಸದಾ ಸ್ವಚ್ಛವಾಗಿರಬೇಕು. ಸ್ಮಶಾನ ಜಾಗ ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸಬೇಕು. ವಸತಿ ಮತ್ತು ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಿ ತ್ವರಿತವಾಗಿ ಕೊಡಿ ಎಂದು ತಾಕೀತು ಮಾಡಿದರು.

    ತಾಪಂ ಇಒ ಹನುಮಂತಪ್ಪ, ಸಹಾಯಕ ನಿರ್ದೇಶಕ ಧನಂಜಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts