More

    ಪಿಕೆಪಿಎಸ್​ ಕಚೇರಿ ಸಜ್ಜಾ ಕುಸಿದು ಬಾಲಕ ಸಾವು

    ಬಸವಕಲ್ಯಾಣ: ಮಳೆಯಿಂದ ನೆನೆದ ಕಟ್ಟದ ಮುಂಭಾಗದ ಸಜ್ಜಾ ಕುಸಿದು ಬಾಲಕನೊಬ್ಬ ಮೃತಪಟ್ಟು, ಮೂವರಿಗೆ ಗಾಯವಾದ ಘಟನೆ ತಾಲೂಕಿನ ಮಂಠಾಳ ಗ್ರಾಮದಲ್ಲಿ ಭಾನುವಾರ ನಡೆದಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ(ಪಿಕೆಪಿಎಸ್)ಕಚೇರಿ ಕಟ್ಟಡದ ಮುಂದಿನ(ಸಚ್ಚಾ) ಛಾವಣಿ ಕುಸಿದು ಘಟನೆ ನಡೆದಿದ್ದು, ಪ್ರಜ್ವಲ್ ಶ್ರೀನಾಥ ಜಾಧವ್ (12) ಮೃತ ಬಾಲಕ. ದಿನೇಶ್ ಭೀಮಣ್ಣ (12), ಆಕಾಶ ಭೀಮಣ್ಣ (10), ಚರಣ ತಾನಾಜಿ (10) ಗಾಯಗೊಂಡ ಬಾಲಕರು.
    ಅಫಜಲಪುರ ತಾಲೂಕಿನ ಕಿರಣಗಿ ಗ್ರಾಮದ ಪ್ರಜ್ವಲ ತಾಯಿಯ ತವರಾದ ಮಂಠಾಳ ಗ್ರಾಮದಲ್ಲಿ ಮೂರು ತಿಂಗಳಿಂದ ಇದ್ದ, ಭಾನುವಾರ ಗೆಳೆಯರೊಂದಿಗೆ ಆಟವಾಡಲೂ ಹೋದಾಗ ಘಟನೆ ನಡೆದಿದ್ದು, ಜತೆಗಿದ್ದ ಬಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
    ಗ್ರಾಮದ ಮಹಾದೇವ ಮಂದಿರ ಸಮೀಪ ಇರುವ ಸುಮಾರು 40 ವರ್ಷ ಹಳೆಯದಾದ ಪಿಕೆಪಿಎಸ್ ಕಟ್ಟಡದ ಮುಭಾಗದಲ್ಲಿನ ಸಜ್ಜಾ ಮೇಲ್ಭಾಗದಲ್ಲಿ ಫಲಕ್ಕಾಗಿ ಇಟ್ಟಿಗೆಯಿಂದ ಕಟ್ಟಲಾಗಿತ್ತು. ಇತ್ತೀಚೆಗೆ ಬಿದ್ದ ಮಳೆಯಿಂದ ನೆನೆದಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.
    ಸಜ್ಜಾ ಕುಸಿದು ಬಿದ್ದಾಗ ಕಟ್ಟಡದ ಕೆಳಗೆ ಆಟವಾಡುತ್ತಿದ್ದ ನಾಲ್ಕು ಮಕ್ಕಳಿಗೂ ಗಂಭೀರ ಗಾಯಗಳಾಗಿದ್ದು, ಪ್ರಜ್ವಲ ಮೃತಪಟ್ಟಿದ್ದು, ಚರಣ ಎನ್ನುವ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳು ಬಾಲಕರನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಉಮರ್ಗಾ ಆಸ್ಪತ್ರೆಗೆ ಸಾಗಿಸಲಾಗಿದೆ.
    ಮೃತಪಟ್ಟ ಬಾಲಕ ಅಫಜಲಪುರ ತಾಲೂಕಿನವನಾದರೇ ಗಾಯಗೊಂಡ ಇಬ್ಬರು ಮೂಲತಃ ಆಳಂದ ತಾಲೂಕಿನ ಬೋಧನಾ ಗ್ರಾಮದವರು. ಇನ್ನೊಬ್ಬ ಮಹಾರಾಷ್ಟ್ರದ ಬಲಸೂರ ಗ್ರಾಮದವ ಎನ್ನಲಾಗಿದೆ. ದುರ್ಘಟನೆ ಬಾಲಕರ ಕುಟುಂಬಸ್ಥರು ಮತ್ತು ಸಂಬಂಧಿಕರನ್ನು ದುಃಖದಲ್ಲಿ ಮುಳುಗುವಂತೆ ಮಾಡಿದೆ. ಸ್ಥಳಕ್ಕೆ ಸಿಪಿಐ ಮಹೇಶಗೌಡ ಪಾಟೀಲ್, ಪಿಎಐ ಜಯಶ್ರೀ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts