More

    ಪಿಎಸ್‌ಐ ವಿರುದ್ಧ ಎಸಿಬಿ ತನಿಖೆ ; ಗೋಲ್ಡ್ ಅವ್ಯವಹಾರ ಪ್ರಕರಣದಲ್ಲಿ ಹಣ ಕೇಳಿದ ಆರೋಪ

    ಹುಳಿಯಾರು : ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರಿನ ಖಾಸಗಿ ಫೈನಾನ್ಸ್‌ನಲ್ಲಿ ನಡೆದಿದೆ ಎನ್ನಲಾದ ಗೋಲ್ಡ್ ಅವ್ಯವಹಾರ ಪ್ರಕರಣದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹಣ ಕೇಳಿದ್ದಾರೆಂಬ ದೂರಿನ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಶುಕ್ರವಾರ ಠಾಣೆಯಲ್ಲಿ ತನಿಖೆ ನಡೆಸಿದರು. ಇದು ಸಾಕಷ್ಟು ಕುತೂಹಲ ಹುಟ್ಟಿಸಿದೆ.

    ಹುಳಿಯಾರಿನ ಮುತ್ತೂಟ್ ಪಿನ್‌ಕಾರ್ಪ್‌ನಲ್ಲಿ ಕಂಪನಿಯಲ್ಲಿ ಗ್ರಾಹಕರು ಗಿರವಿಯಿಟ್ಟಿದ್ದ ಬಂಗಾರದ ಒಡವೆಗಳನ್ನು ಅಲ್ಲಿನ ಮ್ಯಾನೇಜರ್ ಮಾರಿ ನಕಲಿ ಒಡೆವೆಗಳನ್ನಿಟ್ಟು ಅವ್ಯವಹಾರ ಮಾಡಿದ್ದರು. ಗ್ರಾಹಕರೊಬ್ಬರು ಒಡವೆ ಬಿಡಿಸಿಕೊಳ್ಳಲು ಬಂದಾಗ ಬಂಗಾರ ಅದಲು ಬದಲಾಗಿದ್ದನ್ನು ತಿಳಿದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಬರೋಬ್ಬರಿ 55 ಲಕ್ಷ ರೂ.,ಗು ಹೆಚ್ಚು ಅವ್ಯವಹಾರ ನಡೆದಿರುವುದು ಪತ್ತೆಯಾಗಿದೆ.

    ಈ ಪ್ರಕರಣದಲ್ಲಿ ಸಬ್‌ಇನ್‌ಸ್ಪೆಕ್ಟರ್ ಕೆ.ಟಿ.ರಮೇಶ್ ಹಣ ಕೇಳಿದ್ದಾರೆಂದು ಆರೋಪಿಸಿ ಗಿರೀಶ್ ಎಂಬುವವರು ಎಸಿಬಿಗೆ ದೂರು ನೀಡಿದ್ದರು. ಅಲ್ಲದೆ ಹಣವನ್ನು ಪೊಲೀಸರ ಕೈಯಲ್ಲಿ ಕೊಡದೆ ಮೊಬೈಲ್ ಅಂಗಡಿಯಲ್ಲಿ ಕೊಡುವಂತೆ ಹೇಳಿರುವ ದೂರವಾಣಿ ಸಂಭಾಷಣೆಯ ತುಣುಕನ್ನು ಸಾಕ್ಷಿಯಾಗಿ ಕೊಟ್ಟಿದ್ದರು. ಹಾಗಾಗಿ, ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿ ಹುಳಿಯಾರು ಠಾಣೆಗೆ ಆಗಮಿಸಿ ತನಿಖೆ ನಡೆಸಿದರು.
    ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಹಣ ಕೇಳಿರುವ ಬಗ್ಗೆ ಪಿಎಸ್‌ಐ ರಮೇಶ್ ಅವರನ್ನು ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿಚಾರಣೆ ನಡೆಸಿ ಕೆಲ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಸಂಗ್ರಹಿಸಿ ತೆರಳಿದ್ದಾರೆ.

    20 ಸೆಕೆಂಡ್ ಆಡಿಯೋ… ! : ಹುಳಿಯಾರು ಪಟ್ಟಣದ ಮುತ್ತೂಟ್ ಪಿನ್‌ಕಾರ್ಪ್‌ನಲ್ಲಿ ನಡೆದಿದೆ ಎನ್ನಲಾದ 55 ಲಕ್ಷ ರೂ. ವಂಚನೆ ಪ್ರಕರಣದ ಬೆನ್ನತ್ತಿರುವ ಪೊಲೀಸರಿಗೆ ಚಿಕ್ಕನಾಯಕನಹಳ್ಳಿ ತಾಲೂಕಿನೆಲ್ಲೆಡೆ ವ್ಯಾಪಿಸಿರುವ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಕರಾಳಮುಖ ಗೋಚರವಾಗತೊಡಗಿದೆ. ಈ ಪ್ರಕರಣ ಬೆನ್ನತ್ತಿರುವ ಜಾಲದ ಬೆನ್ನತ್ತಿರುವ ಹುಳಿಯಾರು ಠಾಣೆ ಪಿಎಸ್‌ಐ ಕೆ.ಟಿ.ರಮೇಶ್ ಅವರನ್ನು ಲಂಚದ ಆರೋಪದ ಮೇಲೆ ಎಸಿಬಿ ಬಲೆಗೆ ಕೆಡುವಲು ಆರೋಪಿಗಳ ಪರವಾದ ಮಧ್ಯವರ್ತಿಗಳು ಸಂಚು ನಡೆಸಿ, ವಿಪಲವಾಗಿರುವುದು ವ್ಯಾಪಕ ಚರ್ಚೆ ಹಟ್ಟುಹಾಕಿದೆ.ಈ ಪ್ರಕರಣದಲ್ಲಿ ಬಾಗಿಯಾಗಿದ್ದಾರೆ ಎನ್ನಲಾದ ಆರೋಪಿಗಳಿಂದ ವಂಚನೆ ಹಣ ವಾಪಸ್ ಪಡೆಯುವಾಗ ಸಬ್ ಇನ್ಸ್‌ಪೆಕ್ಟರ್ ನಡೆಸಿದ್ದಾರೆ ಎನ್ನಲಾದ 20 ಸೆಕೆಂಡ್ ಮೊಬೈಲ್ ಸಂಭಾಷಣೆ ಇಟ್ಟುಕೊಂಡು ತನಿಖಾಧಿಕಾರಿ ವಿರುದ್ಧವೇ ರಚಿಸಿದ್ದ ವ್ಯೆಹ ಕೊನೆ ಕ್ಷಣದಲ್ಲಿ ಠುಸ್ಸೆಂದಿದೆ.

    ಅಧಿಕಾರಿಗಳ ದಂಡು : ಪಿಎಸ್‌ಐ ಮೇಲೆ ಎಸಿಬಿ ದೂರು ದಾಖಲಿಸಿ ತನಿಖೆಗೆ ಬಂದ ವಿಷಯ ತಿಳಿದ ತಕ್ಷಣ ಎಎಸ್ಪಿ, ಡಿವೈಎಸ್‌ಪಿ, ಸಿಪಿಐ, ಚಿ.ನಾ.ಹಳ್ಳಿ, ಹಂದನಕೆರೆ ಪಿಎಸ್‌ಐ ಸೇರಿ ಅಧಿಕಾರಿಗಳ ದಂಡು ಹುಳಿಯಾರು ಠಾಣೆ ಬಳಿ ದೌಡಾಯಿಸಿತ್ತು. ಹಾಗಾಗಿ ಠಾಣೆಯ ಬಳಿ ಹತ್ತಕ್ಕೂ ಹೆಚ್ಚು ವಾಹನಗಳು ನಿಂತಿದ್ದವು. ಇದರಿಂದ ಸ್ಥಳೀಯರು ಗಾಬರಿ ಜತೆಗೆ ಅನುಮಾನ ಮೂಡಿ ಅನೇಕ ಊಹಾಪೋಹಗಳು ಇಡೀ ದಿನ ಹರಿದಾಡಿದವು.

    ಎಸಿಬಿಗೆ ಮಾಹಿತಿ ನೀಡಿದ್ದೇನೆ: ಗಿರೀಶ್ ಎಂಬುವವರು ದೂರು ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ಎಸಿಬಿ ಠಾಣೆಗೆ ತನಿಖೆಗೆ ಬಂದಿದ್ದರು. ಆಗ ನಾನು ದಬ್ಬಗುಂಟೆ ಗ್ರಾಮಕ್ಕೆ ಹೋಗಿದ್ದು ಅಲ್ಲಿ ೆನ್ ನೆಟ್‌ವರ್ಕ ಸಿಗುತ್ತಿರಲಿಲ್ಲವೇ ವಿನಃ ತಪ್ಪಿಸಿಕೊಂಡು ಹೋಗಿರಲಿಲ್ಲ. ಮಧ್ಯಾಹ್ನ ಠಾಣೆಗೆ ಆಗಮಿಸಿ ಎಸಿಬಿ ಅಧಿಕಾರಿಗಳ ತನಿಖೆಗೆ ಸಹಕಾರ ನೀಡಿದ್ದೇನೆ. ಘಟನೆಯ ವಾಸ್ತವಾಂಶದ ಕೆಲ ದಾಖಲೆಗಳನ್ನೂ ನೀಡಿದ್ದೇನೆ. ಪ್ರಕರಣ ತನಿಖೆಯ ಹಂತದಲ್ಲಿರುವುದರಿಂದ ಹೆಚ್ಚಿನ ಮಾಹಿತಿ ಹೇಳಲಾಗುವುದಿಲ್ಲ. ಒಟ್ಟಾರೆ ನನ್ನ ಮೇಲೆ ಬಂದಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಪಿಎಸ್‌ಐ ಕೆ.ಟಿ.ರಮೇಶ್ ವಿಜಯವಾಣಿಗೆ ತಿಳಿಸಿದ್ದಾರೆ.

    ಹುಳಿಯಾರು ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಇತ್ತೀಚೆಗೆ ನಡೆದಿರುವ ಘಟನೆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳುತ್ತೇನೆ.
    ರಾಹುಲ್‌ಕುಮಾರ್ ಶಹಪುರದ್ ಜಿಲ್ಲಾ ಪೊಲೀಸ್ ಅಧೀಕ್ಷಕ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts