More

    ಪಿಎಸ್​ಐ ಪರೀಕ್ಷೆಯಲ್ಲಿ 2ನೇ ಸ್ಥಾನ

    ಗಜೇಂದ್ರಗಡ: ತಾಲೂಕಿನ ಮುಶಿಗೇರಿ ಗ್ರಾಮದ ಯುವಕ ಅರವಿಂದ ಅಂಗಡಿ ಪಿಎಸ್​ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

    ಮುಶಿಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ಅರವಿಂದ ಬಳಿಕ ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 6 ರಿಂದ 12ನೇ ತರಗತಿವರೆಗೆ ರಾಯಚೂರು ಜಿಲ್ಲೆಯ ಮುದಗಲ್​ನಲ್ಲಿ ಅಭ್ಯಾಸ ಮಾಡಿದರು. ನಂತರ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಬಿಇ(ಆಟೋಮೊಬೈಲ್) ಪದವಿ ಪೂರೈಸಿದರು. ಪ್ರಸಕ್ತ ವರ್ಷದ ಜನವರಿಯಲ್ಲಿ ಬೆಳಗಾವಿಯಲ್ಲಿ ಆಯೋಜಿಸಿದ್ದ ಪಿಎಸ್​ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ 109ನೇ ರ್ಯಾಂಕ್ ಪಡೆದಿದ್ದರು. ಆದರೆ, ದಾಖಲಾತಿಗಳ ಪರಿಶೀಲನೆ ಕಾರ್ಯ ನಡೆದಿದ್ದರಿಂದ ಇನ್ನೂ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಮಾರ್ಚ್ ತಿಂಗಳಲ್ಲಿ ಮತ್ತೊಮ್ಮೆ ಆಯೋಜಿಸಿದ್ದ ಪಿಎಸ್​ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದಾರೆ. ಸದ್ಯ ಕೇಂದ್ರ ಗುಪ್ತಚರ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಮುಶಿಗೇರಿ ಗ್ರಾಮದ ಅರವಿಂದ ಅವರದ್ದು ಮಧ್ಯಮ ವರ್ಗದ ಕುಟುಂಬ. ತಂದೆ ಬಸವರಾಜ ಅಂಗಡಿ ಗಜೇಂದ್ರಗಡ ಪಟ್ಟಣದಲ್ಲಿ ಖಾನಾವಳಿ ನಡೆಸುತ್ತಿದ್ದಾರೆ. ಬಸವರಾಜ ಓದಿದ್ದು 7ನೇ ತರಗತಿವರೆಗೆ ಮಾತ್ರ. ಆದರೆ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಹಿಂದೆ ಬೀಳಲಿಲ್ಲ. ಮಗಳಿಗೆ ಪದವಿ ಶಿಕ್ಷಣದ ಬಳಿಕ ಮದುವೆ ಮಾಡಿದರು. ಮಗ ಅರವಿಂದ ಅಂಗಡಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗಿದ್ದಾರೆ.

    ಗ್ರಾಮೀಣ ಭಾಗದ ಜನರಲ್ಲಿ ಕಾನೂನು ಅರಿವಿನ ಕೊರತೆ ಇದೆ. ಕೆಲವರು ಪೊಲೀಸರನ್ನು ಕಂಡರೆ ಭಯಪಡುತ್ತಾರೆ. ಆದ್ದರಿಂದ ಗ್ರಾಮೀಣ ಭಾಗದ ಜನರಿಗೆ ಕಾನೂನು ಅರಿವು ಮೂಡಿಸುವುದರ ಮೂಲಕ ಪೊಲೀಸ್ ಇಲಾಖೆಯನ್ನು ಜನರಿಗೆ ಹಾಗೂ ನೊಂದವರ ಹತ್ತಿರ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ.
    | ಅರವಿಂದ ಅಂಗಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts