More

    ಪಿಎಸ್‌ಐ ಹೆಸರಲ್ಲಿ ಸೈಬರ್ ಸಲ್ಲಾಪ!

    ಬೆಳಗಾವಿ: ಪೊಲೀಸ್ ಅಧಿಕಾರಿ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಯುವತಿರೊಂದಿಗೆ ಸರಪ ಸಲ್ಲಾಪ ನಡೆಸಿ, ವಂಚಿಸಿರುವ ಆರೋಪಿಯನ್ನು ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆ ಪೊಲೀಸರು ಗುರುವಾರ ಬಂಧಿಸಿ ಹಿಂಡಲಗಾ ಜೈಲಿಗಟ್ಟಿದ್ದಾರೆ. ಅಥಣಿ ಮೂಲದ, ಹುಬ್ಬಳ್ಳಿ ನಗರದ ನಿವಾಸಿ ವಿಜಯ ಶ್ರೀಶೈಲ ಬಾರ್ಲಿ (28) ಬಂಧಿತ. ಈತ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಅನೀಲಕುಮಾರ ಹೆಸರಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರದು ಆನ್‌ಲೈನ್ ಚಾಟಿಂಗ್ ಮೂಲಕ 50ಕ್ಕೂ ಹೆಚ್ಚು ಯುವತಿಯರೊಂದಿಗೆ ಸರಸ ಸಲ್ಲಾಪ ಮಾಡಿ ವಂಚಿಸಿದ್ದಾನೆ. ಹತ್ತಾರು ಯುವತಿಯರಿಂದ ಪ್ರೇಮಪತ್ರ, ಉಡುಗೊರೆಯನ್ನೂ ಪಡೆದಿದ್ದಾನೆ. ಸಮಾಜ ಸೇವೆಗೆಂದು 4 ಲಕ್ಷ ರೂಪಾಯಿ ಹಣ ಪೀಕಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ 1.12 ಲಕ್ಷ ಫಾಲೋವರ್ಸ್ ಗಳಿಸಿ ನೌಕರಿ ಹಾಗೂ ಇನ್ನಿತರ ಆಮಿಷವೊಡ್ಡಿ ವಂಚಿಸಿದ್ದಾನೆ. ಇದಲ್ಲದೆ ಇದೇ ರೀತಿ 9 ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ವಂಚಿಸುತ್ತಿರುವ ಬಗ್ಗೆ ಸಾಕ್ಷಾೃಧಾರಗಳು ಪೊಲೀಸರಿಗೆ ಲಭ್ಯವಾಗಿವೆ.

    ಬೆಳಕಿಗೆ ಬಂದಿದ್ದು ಹೇಗೆ?: ಅಸಲಿ ಪಿಎಸ್‌ಐ ಅನಿಲಕುಮಾರ್ ಕರ್ತವ್ಯದಲ್ಲಿದ್ದಾಗ ಅವರನ್ನು ಭೇಟಿಯಾದ ವ್ಯಕ್ತಿ ‘ನಾನು ತಮ್ಮ ಲಕ್ಷಾಂತರ ಫಾಲೋವರ್ಸ್‌ಗಳಲ್ಲಿ ಒಬ್ಬ. ನೀವು ನನ್ನನ್ನು ಗುರುತಿಸುತ್ತಿಲ್ಲ. ಆದರೆ, ನಿಮ್ಮ ಸೇವಾಕಾರ್ಯವನ್ನು ಲಕ್ಷಾಂತರ ಜನ ಗುರುತಿಸಿ ಹಿಂಬಾಲಕರಾಗಿದ್ದೇವೆ’ ಎಂದು ಹೇಳಿಕೊಂಡಿದ್ದಾನೆ. ಈ ಬಗ್ಗೆ ಏನೂ ತಿಳಿಯದೆ ಗೊಂದಲಗೊಂಡ ಅನಿಲಕುಮಾರ್, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹೆಸರಿನ ಖಾತೆ ಹುಡುಕಿದಾಗ ನಕಲಿ ಖಾತೆ ಇರುವುದು ತಿಳಿದುಬಂದಿದೆ. ಕೂಡಲೇ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ, ನಿಪ್ಪಾಣಿ ಪೊಲೀಸ್ ಠಾಣೆಗೆ ಮಹಾರಾಷ್ಟ್ರದ ಯುವತಿ ನಕಲಿ ಪಿಎಸ್‌ಐಗೆ ಬರೆದಿದ್ದ ಪ್ರೇಮ ಪತ್ರ ಅಸಲಿ ಅಧಿಕಾರಿ ಅನಿಲಕುಮಾರ ಕೈಗೆ ಸಿಕ್ಕಿದೆ. ಅದರೊಂದಿಗೆ ಲಗತ್ತಿಸಿದ್ದ ಉಡುಗೊರೆ ಕಂಡು ತಬ್ಬಿಬ್ಬರಾಗಿದ್ದಾರೆ. ಕೆಲವರು ನೇರ ಸಂಪರ್ಕಕ್ಕೆ ಪ್ರಯತ್ನಿಸಿ ಪೊಲೀಸ್ ಠಾಣೆಗೆ ಪತ್ರ ಕಳುಹಿಸಿದ್ದಾರೆ. ಕೆಲವರು ತಹಸೀಲ್ದಾರ್ ಹಾಗೂ ವಕೀಲರ ಮೂಲಕವೂ ಪ್ರಯತ್ನಿಸಿದಾಗ ನಕಲಿ ಖಾತೆ ಎಂದು ಗೊತ್ತಾಗಿದೆ.

    ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಇನ್ಸಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದೆ. ಕಾರ್ಯಾಚರಣೆಯಲ್ಲಿ ಎಚ್.ಎಲ್.ಧರ್ಮಟ್ಟಿ, ಎಎಸ್‌ಐ ಎ.ಎಚ್.ಭಜಂತ್ರಿ, ಕೆ ಆರ್.ಇಮಾಮನವರ, ಜಿ.ಎಸ್.ಲಮಾಣಿ, ಎಸ್.ಐ ಭಂಡಿ, ಎನ್.ಆರ್.ಘಡೆಪ್ಪನವರ, ಈರಣ್ಣ ನಡುವಿನಹಳ್ಳಿ, ಸಿ.ಎ.ಕೆಳಗಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts