More

    ಪಿಎಸ್ಐ ಸಾವಿಗೆ ಕಣ್ಣೀರಾದ ದಾಸರವಾಡಿ

    ಮಾರ್ಥಂಡ ಜೋಶಿ ಬಸವಕಲ್ಯಾಣ
    ಗಾಂಜಾ ಗ್ಯಾಂಗ್ಗೆ ಹಿಡಿಯಲು ಹೊರಟಿದ್ದ ತಾಲೂಕಿನ ದಾಸರವಾಡಿ ಗ್ರಾಮದ ಬೆಂಗಳೂರು ಶಿವಾಜಿನಗರ ಠಾಣೆ ಪಿಎಸ್ಐ ಅವಿನಾಶ ಯಾದವ್(29)ಚಿತ್ತೂರ ಹತ್ತಿರ ಭಾನುವಾರ ಬೆಳಗ್ಗಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಕರಾಳ ಘಟನೆ ಸ್ವಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.


    2018ರ ಬ್ಯಾಚ್ನ ಪಿಎಸ್ಐ ಅವಿನಾಶ ಕಲಬುರಗಿಯಲ್ಲಿ ತರಬೇತಿ ಪಡೆದಿದ್ದು, ಜ್ಞಾನಭಾರತಿ ಮತ್ತು ಪಿಣ್ಯ ಠಾಣೆಗಳಲ್ಲಿ ಸೇವೆ ಸಲ್ಲಿಸಿ 20 ದಿನಗಳ ಹಿಂದಷ್ಟೇ ಶಿವಾಜಿನಗರ ಠಾಣೆಗೆ ವರ್ಗವಾಗಿದ್ದರು. ಕರ್ತವ್ಯನಿಷ್ಠೆಯೊಂದಿಗೆ ಕೆಲಸ ಮಾಡುತ್ತ ಅತಿ ಕಮ್ಮಿ ಅವಧಿಯಲ್ಲೇ ದಕ್ಷ ಅಧಿಕಾರಿ ಎಂದು ಹೆಸರು ಗಳಿಸಿದ್ದರು. ಗಾಂಜಾ ಗ್ಯಾಂಗ್ನವರಿಗೆ ಹಿಡಿಯಲು ಹೋದಾಗ ದುರಂತ ಅಂತ್ಯ ಕಂಡಿದ್ದಾರೆ.

    ಕಳೆದ ರಾತ್ರಿ (ಶನಿವಾರ) ಮೊಬೈಲ್ನಲ್ಲಿ ತಂದೆ ನಿವೃತ್ತ ಪಿಎಸ್ಐ ಕಾಶೀನಾಥ ಜತೆ ಮಾತನಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಇದೇ ವೇಳೆ ಆರೋಪಿಯನ್ನು ಹಿಡಿಯಲು ರಾತ್ರಿ ಬೇರೆ ಊರಿಗೆ ಹೋಗುತ್ತಿರುವುದಾಗಿ ಹೇಳಿದ್ದ ಎಂದು ಉಮ್ಮಳಿಸಿ ಬರುತ್ತಿದ್ದ ದುಃಖದಲ್ಲೇ ಮಗನನ್ನು ನೆನೆಸುತ್ತ ಕಾಶೀನಾಥ ಕಣ್ಣೀರಾದರು. ರಾತ್ರಿಯೇ ಮಗ ಮಾತಾಡಿದ್ದ. ಬೆಳಕು ಹರಿಯುವಷ್ಟರಲ್ಲಿ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದ್ದು, ಮನೆಯವರನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ.

    ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮೃತರ ಮನೆಯ ಮುಂದೆ ಸೇರಿದ್ದು, ಎಲ್ಲರ ಬಾಯಿಯಲ್ಲಿ ಒಂದೇ ಮಾತು ಹೀಗಾಗಬಾರದಿತ್ತು..ಅಯ್ಯೋ ದೇವರೆ ಇದೆಂಥ ಅನ್ಯಾಯ…? ಕಳೆದ ಮೇ 31ರಂದು ಅವಿನಾಶ ತಂದೆ ಕಾಶೀನಾಥ ಸೇವಾ ನಿವೃತ್ತಿ ಹೊಂದಿದ್ದರು. ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವಿನಾಶ ನಾಲ್ಕು ದಿನ ಇಲ್ಲೇ ಇದ್ದು, ಮತ್ತೆ ಬರುವುದಾಗಿ ಹೇಳಿ ಈಗ ಬಾರದ ಲೋಕಕ್ಕೆ ಹೋಗಿದ್ದಾರೆ.

    ಬಸವಕಲ್ಯಾಣದ ಶಾಂತಿನಿಕೇತನ ಶಾಲೆಯಲ್ಲಿ 5ನೇ ತರಗತಿವರೆಗೆ ಓದಿದ್ದ ಅವಿನಾಶ, ನಂತರ ಎಸ್ಸೆಸ್ಸೆಲ್ಸಿವರೆಗೆ ಹಾರಕೂಡ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯಲ್ಲಿ ಕಲಿತಿದ್ದಾರೆ. ಕರಡ್ಯಾಳ ಶ್ರೀ ಚನ್ನಬಸವೇಶ್ವರ ಗುರುಕುಲದಲ್ಲಿ ಪಿಯುಸಿ, ಬೀದರ್ನ ಗುರುನಾನಕ ದೇವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ಪ್ರತಿಭಾವಂತ ವಿದ್ಯಾಥರ್ಿಯಾಗಿದ್ದ ಅವಿನಾಶ ಓದಿನಲ್ಲಿ ತುಂಬ ಚುರುಕಾಗಿದ್ದರು. ಸ್ನೇಹ ಜೀವಿಯಾಗಿ ಎಲ್ಲರೊಂದಿಗೂ ಸರಳವಾಗಿ ಬೆರೆಯುತ್ತಿದ್ದರು. ಎಂಥ ಒಳ್ಳೆಯ ಹುಡುಗ ಹೇಗೆ ದುರಂತ ಅಂತ್ಯ ಕಂಡ ಎಂದು ಊರಿನವರು ವಿಧಿ ಅಟ್ಟಹಾಸಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

    ಕನಸು ನನಸಾಗುವ ಮುನ್ನವೇ…: ಯುಪಿಎಸ್ಸಿ ಪಾಸಾಗಿ ಉನ್ನತ ಹುದ್ದೆಗೇರಬೇಕೆಂಬ ಕನಸು ನನಸಾಗುವ ಮುನ್ನವೇ ಅವಿನಾಶ ಯಾದವ್ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ದುರಂತವೇ ಸರಿ. ಆರಂಭದಿಂದಲೂ ಓದಿನಲ್ಲಿ ಮುಂದಿದ್ದ ಯಾದವ್ , ಪಿಎಸ್ಐ ಆಗಿ ನೇಮಕಗೊಂಡರೂ ಓದು ನಿಲ್ಲಿಸಿರಲಿಲ್ಲ. ಹಿಂದೊಮ್ಮೆ ಯುಪಿಎಸ್ಸಿ ಪರೀಕ್ಷೆ ಬರೆದಿದ್ದರೂ ಯಶಸ್ಸು ಸಿಕ್ಕಿರಲಿಲ್ಲ. ಇಷ್ಟಕ್ಕೆ ಬಿಡದೆ ನಿರಂತರ ಪ್ರಯತ್ನ ಮುಂದುವರಿಸಿದ್ದರು. ಆದರೆ ವಿಧಿ ಹೀಗೆ ಮಾಡಿತು ಎಂದು ಸಹೋದರ ಬಾಲಾಜಿ ದುಃಖ ತೋಡಿಕೊಂಡರು.

    ಅಂತ್ಯಸಂಸ್ಕಾರ: ಅವಿನಾಶ ಅಂತ್ಯಕ್ರಿಯೆ ದಾಸರವಾಡಿ ಗ್ರಾಮದ ಹೊಲದಲ್ಲಿ ಸೋಮವಾರ ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಪಾಥರ್ಿವ ಶರೀರ ಸೋಮವಾರ ನಸುಕಿನ ಜಾವ ಗ್ರಾಮಕ್ಕೆ ಬರಲಿದ್ದು, ಇಲಾಖೆಯಿಂದ ಗೌರವ ವಂದನೆ ಸಲ್ಲಿಸಿದ ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆ.

    ಭಾಲ್ಕಿ ಗುರುಕುಲದ ಪ್ರತಿಭಾವಂತ ವಿದ್ಯಾರ್ಥಿ: ಪಿಎಸ್ಐ ಅವಿನಾಶ ಯಾದವ್ ಸಾವು ಅತ್ಯಂತ ದುಃಖ ತಂದಿದೆ ಎಂದು ಕರಡ್ಯಾಳ ಶ್ರೀ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಶ್ರೀ ಗುರುಬಸವ ಪಟ್ಟದ್ದೇವರು ತಿಳಿಸಿದ್ದಾರೆ. ಕರಡ್ಯಾಳ ಗುರುಕುಲದಲ್ಲಿ ಪಿಯುಸಿ ಓದಿದ್ದ ಅವಿನಾಶ ಪ್ರತಿಭಾವಂತ ಜತೆಗೆ ಕ್ರಿಯಾಶೀಲ ಮತ್ತು ಧೈರ್ಯಶಾಲಿಯಾಗಿದ್ದ. ಹೀಗಾಗಿ ಮೊದಲ ಪ್ರಯತ್ನದಲ್ಲೇ ಪಿಎಸ್ಐ ಹುದ್ದೆಗೆ ನೇಮಕವಾಗಿದ್ದ. ಈತನ ಅಕಾಲಿಕ ಅಗಲಿಕೆ ನೋವು ತಂದಿದ್ದು, ಪಾಲಕರು ಮತ್ತು ಸಂಬಂಧಿಕರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾಥರ್ಿಸಿದ್ದಾರೆ.

    ಹಾರಕೂಡದ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆಯಲ್ಲಿ 6 ವರ್ಷ ಅಭ್ಯಸಿಸಿದ ಅವಿನಾಶ ಅಪ್ಪಟ ಗ್ರಾಮೀಣ ಪ್ರತಿಭೆ. ಓದಿನಲ್ಲಿ ಅಷ್ಟೇ ಅಲ್ಲ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ಮುಂದಿದ್ದ. ಅಕಾಲಿಕ ಅಗಲಿಕೆ ನೋವು ತಂದಿದೆ. ಕುಟುಂಬಸ್ಥರಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾಥರ್ಿಸುತ್ತೇವೆ.
    | ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಸಂಸ್ಥಾನ ಹಿರೇಮಠ ಹಾರಕೂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts