More

    ಪಾಲಿಕೆ ಸಭೆಗೆ ಧರ್ಮಸಂಕಟ ; ಕರೊನಾ 3ನೇ ಅಲೆ ಭಿತಿ ನಡುವೆ 26ಕ್ಕೆ ಸಾಮಾನ್ಯಸಭೆ ; ಮಾರ್ಗಸೂಚಿ ಪಾಲಿಸುವುದೇ ದೊಡ್ಡ ತಲೆನೋವು

    ತುಮಕೂರು : ಕರೊನಾ 3ನೇ ಅಲೆ ಭಿತಿ ನಡುವೆ ಆ.26ರಂದು ನಡೆಯಲಿರುವ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ರಾಜ್ಯ ಸರ್ಕಾರದ ಕರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ದೊಡ್ಡ ಸವಾಲು ಎದುರಾಗಿದೆ.

    ಮೇಯರ್ ಬಿ.ಜಿ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ಆ.26ರಂದು ಸಾಮಾನ್ಯಸಭೆ ಏರ್ಪಡಿಸಲಾಗಿದೆ. ಆದರೆ, ಸಭಾಂಗಣ ಕಿಷ್ಕಿಂಧೆಯಂತಿದ್ದು ಆಸನಗಳ ಸಂಖ್ಯೆ ಕಡಿಮೆ ಇದೆ. ಜತೆಗೆ ವೆಂಟಿಲೇಷನ್ ಸಹ ವ್ಯವಸ್ಥಿತವಾಗಿಲ್ಲ. ಹಾಗಾಗಿ, 5-6 ಗಂಟೆಗಳ ಕಾಲ ಸಭೆಯಲ್ಲಿ ಮಾಸ್ಕ್ ಧರಿಸಿ ಕೂರಬೇಕಾಗುವುದಲ್ಲದೇ, ಸದಸ್ಯರು ಪರಸ್ಪರ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ವ್ಯವಸ್ಥಿತ ರೀತಿಯಲ್ಲಿ ಸಭೆ ನಡೆಸಬೇಕೆಂಬ ಪಾಲಿಕೆ ಅಧಿಕಾರಿಗಳಲ್ಲಿ ಇದು ಸಾಕಷ್ಟು ಜಿಜ್ಞಾಸೆ ತಂದೊಡ್ಡಿದೆ.

    ದಂಡ ವಿಧಿಸುವರಿಂದಲೇ ಉಲ್ಲಂಘನೆ: ಕರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಸಾರ್ವಜನಿಕರಿಗೆ ದಂಡವಿಧಿಸುವುದಾಗಿ ಹೆದರಿಸಿ, ಬೆದರಿಸುವರೆ ಈಗ ಅನಿವಾರ್ಯವಾಗಿ ಮಾರ್ಗಸೂಚಿಗಳನ್ನು ಉಲ್ಲಂಘಿಸಬೇಕಾದ ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ಸಭಾಂಗಣದಲ್ಲಿ 3 ಸೀಟುಗಳ 18 ಸಾಲುಗಳಿದ್ದು ಒಟ್ಟು 54 ಆಸನಗಳಿವೆ. ಕೋವಿಡ್ ಮಾರ್ಗಸೂಚಿ ಅನ್ವಯ 1 ಸಾಲಿನಲ್ಲಿ ಇಬ್ಬರು ಕುಳಿತುಕೊಳ್ಳಲು ಅವಕಾಶ ಇರಲಿದ್ದು 36 ಸದಸ್ಯರಿಗೆ ಆಸನದ ವ್ಯವಸ್ಥೆ ಮಾಡಬಹುದಾಗಿದೆ. ಆದರೆ, ಸಂಸದರು, ಶಾಸಕರು, ಪರಿಷತ್ ಸದಸ್ಯರ ಜತೆ ಚುನಾಯಿತ ಹಾಗೂ ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 43 ಮಂದಿ ಇದ್ದು ಸದಸ್ಯರಿಗೆ ಆಸನ ವ್ಯವಸ್ಥೆ ಮಾಡುವುದೇ ಒಂದು ಸವಾಲಾಗಿದೆ.

    ಇದರ ಜತೆಗೆ ವಿವಿಧ ಶಾಖೆಗಳ ಅಧಿಕಾರಿಗಳಿಗೆ, ಪತ್ರಕರ್ತರಿಗೆ ಸಭೆಯಲ್ಲಿ ಆಸನದ ವ್ಯವಸ್ಥೆ ಮಾಡುವುದೇ ದೊಡ್ಡ ತಲೆನೋವಾಗಿದೆ. ಕಳೆದ ಬಾರಿ ಆನ್‌ಲೈನ್‌ನಲ್ಲಿ ನಡೆದಿದ್ದ ಕೌನ್ಸಿಲ್ ಸಭೆಗೆ ಪಕ್ಷಾತೀತವಾಗಿ ಕಾರ್ಪೋರೇಟರ್‌ಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಭೌತಿಕ ಸಭೆ ಮೊರೆ ಹೋಗಲಾಗಿದ್ದು ಕರೊನಾ ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ಆರೋಗ್ಯ ಶಾಖೆ ಹೇಗೆ ಕ್ರಮವಹಿಸಲಿದೆ ಎಂಬ ಪ್ರಶ್ನೆ ಮೂಡಿದೆ.

    ಖಾಸಗಿ ವಿದ್ಯಾಸಂಸ್ಥೆಗೆ ಸರ್ಕಾರಿ ಜಾಗ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.23ರಲ್ಲಿ 0.10 ಗುಂಟೆಯಷ್ಟು ಸರ್ಕಾರಿ ಜಮೀನನ್ನು ಕೊರಟಗೆರೆ ತಾಲೂಕಿನ ಕೆರೆಯಾಗಲಹಳ್ಳಿಯ ಎಸ್.ಎಸ್.ವಿದ್ಯಾಸಂಸ್ಥೆಗೆ ಮಂಜೂರು ಮಾಡುವ ವಿಷಯ ಸಭೆಯಲ್ಲಿ ಚರ್ಚೆಗೆ ಬರಲಿದ್ದು ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಈ ವಿಷಯವನ್ನು ಕಣ್ಮುಚ್ಚಿ ಒಪ್ಪಿಕೊಳ್ಳುವರೇ ಎಂಬುದು ಕುತೂಹಲ ಕೆರಳಿಸಿದೆ.

    ಸಮಾಧಿ ಕಟ್ಟಲು ಶುಲ್ಕ ನಿಗದಿ: ಸಾರ್ವಜನಿಕ ಸ್ಮಶಾನಗಳಲ್ಲಿ ಸಮಾಧಿ ಕಟ್ಟಲು ಹಾಗೂ ಅವುಗಳ ನಿರ್ವಹಣೆಗೆ ಶುಲ್ಕ ನಿಗದಿ ಮಾಡುವ ಸಂಬಂಧಿಸಿದಂತೆ ತೆರಿಗೆ ಮತ್ತು ಹಣಕಾಸು ಸ್ಥಾಯಿಸಮಿತಿ ಶಿಫಾರಸು ಮಾಡಿದ್ದು ಈ ವಿಷಯವನ್ನು ಸಭೆಯ ಮುಂದಿಡಲಾಗಿದೆ. ಸಂಪನ್ಮೂಲ ಸಂಗ್ರಹಕ್ಕೆ ಪಾಲಿಕೆ ಈ ಹೊಸ ದಾರಿ ಕಂಡುಕೊಳ್ಳಲು ಮುಂದಾಗಿದೆ.

    3ನೇ ಕೌನ್ಸಿಲ್ ಸಭೆ: ಕರೊನಾ ಕಾರಣಕ್ಕೆ 2020ರಿಂದ ಈವರೆಗೆ 2 ಸಭೆ ಮಾತ್ರ ನಡೆದಿದೆ. 2020ರಲ್ಲಿ ಕರೊನಾ ನೆಪವೊಡ್ಡಿ ಒಂದೇ ಒಂದು ಸಾಮಾನ್ಯ ಸಭೆ ನಡೆದಿದ್ದು ಅದು ಕೇವಲ 3 ಗಂಟೆಗೆ ಸೀಮಿತವಾಗಿದ್ದ ನಿರ್ಬಂಧಿತ ಸಭೆಯಾಗಿತ್ತು. ಈ ವರ್ಷ ಮೇ 27ರಂದು ಆನ್‌ಲೈನ್ ಸಭೆ ಏರ್ಪಡಿಸಲಾಗಿತ್ತು. ಆ.26ರಂದು ನಡೆಯಲಿರುವ ಸಭೆ 3ನೇ ಸಭೆ ಆಗಲಿದೆ. ಈ ಸಭೆಯು ಬೆಳಗ್ಗೆ 9ಕ್ಕೆ ಆರಂಭವಾಗುತ್ತಿರುವುದು ವಿಶೇಷವೆನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts