More

    ಪಾಲಿಕೆ ವಸತಿ ಗೃಹದ ಸದೃಢತೆ ಪರೀಕ್ಷೆ

    ಹುಬ್ಬಳ್ಳಿ: ಸುಮಾರು 50 ವರ್ಷಕ್ಕೂ ಹಳೆಯದಾದ ಇಲ್ಲಿಯ ಗಣೇಶಪೇಟೆಯಲ್ಲಿರುವ 3 ವಸತಿ ಗೃಹಗಳ ಸಮುಚ್ಚಯದ ಸದೃಢತೆ ಪರೀಕ್ಷೆ (ಸ್ಟ್ಯಾಬಿಲಿಟಿ ಟೆಸ್ಟ್) ನಡೆಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಧರಿಸಿದೆ.

    1966ರಲ್ಲಿ ನಿರ್ವಣಗೊಂಡ ಕಟ್ಟಡಗಳು ಇವು. ಗಣೇಶಪೇಟೆ ತಬೀಬ್​ಲ್ಯಾಂಡ್ ರಸ್ತೆಯಲ್ಲಿರುವ ವಸತಿಗೃಹವೊಂದರ ಕೆಲಭಾಗ (ಮೇಲ್ಪಟ್ಟಿ) ಶನಿವಾರ ರಾತ್ರಿ ಕಳಚಿ ಬಿದ್ದು ಆತಂಕ ಸೃಷ್ಟಿಸಿದೆ. ಸುದೈವದಿಂದ ಘಟನೆಯಲ್ಲಿ ಯಾರಿಗೂ ಏನೂ ಆಗಿರಲಿಲ್ಲ. ಸುರಕ್ಷತೆ ದೃಷ್ಟಿಯಿಂದ ಕಟ್ಟಡದಲ್ಲಿ ವಾಸವಿದ್ದವರನ್ನು ಖಾಲಿ ಮಾಡಿಸಿ ಬೇರೆಡೆ ಸ್ಥಳಾಂತರಿಸಲಾಗಿದೆ.

    ಇಲ್ಲಿಯ 3 ವಸತಿ ಗೃಹ ಕಟ್ಟಡಗಳಲ್ಲಿ 59 ಮನೆಗಳಿವೆ. ಶನಿವಾರ ರಾತ್ರಿ ಕೆಲ ಭಾಗ ಕಳಚಿ ಬಿದ್ದು ಆತಂಕ ಸೃಷ್ಟಿಸಿದ ವಸತಿ ಗೃಹ ಕಟ್ಟಡದಲ್ಲಿ 14 ಮನೆಗಳಿವೆ. 4 ಮನೆಗಳಲ್ಲಿ ಜನ ವಾಸ್ತವ್ಯವಿತ್ತು. ರಾತ್ರೋರಾತ್ರಿ ಎಲ್ಲರನ್ನೂ ಮನೆಯಿಂದ ಹೊರಗೆ ಕರೆತಂದು ಪಕ್ಕದ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ. ಮನೆಯಲ್ಲಿ ಸಾಮಾನು ಸರಂಜಾಮುಗಳಿದ್ದರೂ ಯಾರನ್ನೂ ವಸತಿ ಗೃಹದ ಒಳಗೆ ಹೋಗದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಕಾವಲು ಕಾಯುತ್ತಿದ್ದಾರೆ.

    ಹುಬ್ಬಳ್ಳಿಯಲ್ಲಿರುವ ಪಾಲಿಕೆ ಕೇಂದ್ರ ಕಚೇರಿ ಆವರಣ, ಚಿಟಗುಪ್ಪಿ ಆಸ್ಪತ್ರೆ ಹಿಂಭಾಗ, ಗಣೇಶಪೇಟೆ ಹಾಗೂ ಧಾರವಾಡದಲ್ಲಿ ಪಾಲಿಕೆ ಸಿಬ್ಬಂದಿಗಾಗಿ ಒಟ್ಟಾರೆ 133 ವಸತಿ ಗೃಹಗಳಿವೆ. ಇದರಲ್ಲಿ ಕೆಲವು ಖಾಲಿ ಇವೆ, ಕೆಲವು ದುರಸ್ತಿಯಲ್ಲಿವೆ.

    ಪಾಲಿಕೆ ವಸತಿಗೃಹಗಳಲ್ಲಿ ವಾಸ್ತವ್ಯ ಇರುವವರಲ್ಲಿ ಎಷ್ಟೋ ಜನ ಪಾಲಿಕೆಗೆ ಬಾಡಿಗೆಯನ್ನೇ ಪಾವತಿಸುತ್ತಿಲ್ಲ. ಪಾಲಿಕೆ ಸೇವೆಯಿಂದ ನಿವೃತ್ತರಾದ ಕೆಲವರು ಇನ್ನೂ ವಸತಿ ಗೃಹದಲ್ಲಿ ವಾಸ್ತವ್ಯ ಇದ್ದಾರೆ. ಇನ್ನು ಕೆಲವರು ಬೇರೆಡೆ ಸ್ವಂತ ಮನೆ ಕಟ್ಟಿಕೊಂಡು ಪಾಲಿಕೆ ವಸತಿ ಗೃಹವನ್ನು ಅನ್ಯರಿಗೆ ಬಾಡಿಗೆ ಮೇಲೆ ನೀಡಿದ್ದಾರೆ. ಮಾಸಿಕ 3000 ರೂ. ವರೆಗೆ ಬಾಡಿಗೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

    ಈ ಹಿಂದೆ ಹುಬ್ಬಳ್ಳಿಯಲ್ಲಿ ರೈಲ್ವೆ ಪಾರ್ಸಲ್ ಕಟ್ಟಡ ಕುಸಿದುಬಿದ್ದಾಗ, ಧಾರವಾಡದಲ್ಲಿ ಖಾಸಗಿ ವಾಣಿಜ್ಯ ಮಳಿಗೆ ಕುಸಿದು ಬಿದ್ದಾಗ ಪಾಲಿಕೆಯ ಹಲವು ಕಟ್ಟಡಗಳ ದೃಢತೆ ಪರೀಕ್ಷೆ ಮಾಡಲಾಗಿತ್ತು. ವಸತಿ ಗೃಹ ಸಂಕೀರ್ಣಗಳ ದೃಢತೆ ಪರೀಕ್ಷೆಗೂ ಉದ್ದೇಶಿಸಲಾಗಿತ್ತು. ಆದರೆ, ಅಲ್ಲಿ ಅಕ್ರಮವಾಗಿ ವಾಸ್ತವ್ಯ ಇರುವ ಕೆಲವರು ಪಾಲಿಕೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ, ಕಟ್ಟಡಗಳ ದೃಢತೆ ಪರೀಕ್ಷೆ ನಡೆಯದಂತೆ ನೋಡಿಕೊಂಡಿದ್ದರು ಎನ್ನಲಾಗಿದೆ. ಒಂದು ವೇಳೆ ಕಟ್ಟಡದ ದೃಢತೆ ಸಾಲದು ಎಂದು ವರದಿ ಬಂದರೆ, ಮನೆ ಖಾಲಿ ಮಾಡಬೇಕಾಗುತ್ತದೆ. ಇದರಿಂದ, ಅಕ್ರಮವಾಗಿ ಮಾಡಿಕೊಂಡಿರುವ ಅನುಕೂಲತೆ ಕೈತಪ್ಪಿಹೋಗಲಿದೆ ಎಂಬ ಆತಂಕದಲ್ಲಿ ಹಾಗೆ ಮಾಡಿದ್ದರು ಎಂದು ಹೇಳಲಾಗಿದೆ.

    ಪಿಡಬ್ಲ್ಯುಡಿಗೆ ಪತ್ರ: ಗಣೇಶಪೇಟ ವಸತಿಗೃಹಗಳು ಸುಮಾರು 50 ವರ್ಷಕ್ಕೂ ಹಳೆಯವು. 3 ಕಟ್ಟಡಗಳ ಸ್ಟ್ಯಾಬಿಲಿಟಿ ಟೆಸ್ಟ್ ನಡೆಸುವಂತೆ ಲೋಕೋಪಯೋಗಿ ಇಲಾಖೆಗೆ ಸೋಮವಾರ ಪತ್ರ ಬರೆಯಲಿದ್ದೇವೆ. ಈ ಕಟ್ಟಡಗಳು ವಾಸಕ್ಕೆ ಯೋಗ್ಯವಿಲ್ಲವೆಂದು ಇಲಾಖೆ ವರದಿ ನೀಡಿದರೆ ಎಲ್ಲರನ್ನೂ ಖಾಲಿ ಮಾಡಿಸಿ ನೆಲಸಮಗೊಳಿಸಬೇಕಾಗುತ್ತದೆ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts