More

    ಪಾಲಿಕೆ ಅಖಾಡದಲ್ಲಿ ಕಮಲ ಕಲರವ!

    ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗುವುದರ ಜತೆಗೆ ಹೊಸ ಪ್ರಯೋಗಗಳಿಗೂ ವೇದಿಕೆಯಾಗಿ ಗಮನ ಸೆಳೆದಿದೆ. ಈ ಮೊದಲು ವೈಯಕ್ತಿಕ ನೆಲೆಗಟ್ಟಿನಲ್ಲಿ ನಡೆಯುತ್ತಿದ್ದ ಚುನಾವಣೆ ಕದನ, ಇದೀಗ ಪಕ್ಷಗಳ ಚಿಹ್ನೆಯಡಿ ಜರುಗುತ್ತಿರುವುದರಿಂದ ಅಖಾಡ ರಂಗೇರಿದೆ. ಪ್ರತಿಬಾರಿ ಪಾಲಿಕೆ ಪಡಸಾಲೆಯಲ್ಲಿ ಅಧಿಕಾರದ ಗುಂಗಿನಲ್ಲಿ ತೇಲಾಡುತ್ತಿದ್ದ ಎಂಇಎಸ್ ಈ ಬಾರಿ ಏದುಸಿರು ಬಿಡುತ್ತಿದ್ದರೆ, ಮತದಾರರಿಗೆ ಅಸಾಧಾರಣ ಭರವಸೆ ನೀಡುವ ಮೂಲಕ ಕಾಂಗ್ರೆಸ್ ಸೆಣಸಾಡುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ತನ್ನದೇ ಸರ್ಕಾರ ಹೊಂದಿರುವ ಬಿಜೆಪಿ, ಕಾರ್ಪೋರೇಷನ್ ಸಮರ ಗೆಲ್ಲುವ ಉಮೇದಿಯಲ್ಲಿದೆ.

    ಚಿಹ್ನೆಯಡಿ ಪ್ರಥಮ ಚುನಾವಣೆ: ಚುನಾವಣೆ ಘೋಷಣೆಯಾದ ಬಳಿಕ ಗೆಲುವಿನ ಲೆಕ್ಕಾಚಾರದಲ್ಲಿ ಅಖಾಡಕ್ಕಿಳಿದಿರುವ ಪಕ್ಷಗಳಿಗೆ ಪಾಲಿಕೆ ಚುನಾವಣೆ ಹೊಸ ರಾಜಕೀಯ ಆಯಾಮ ಸೃಷ್ಟಿಸಿದೆ. ಅದಕ್ಕೆ ಸಾಕ್ಷಿ ಎಂಬಂತೆ ಸಚಿವರು, ಶಾಸಕರು, ರಾಜ್ಯಮಟ್ಟದ ನಾಯಕರ ಪ್ರಚಾರದ ವೈಖರಿಯೂ ಕೂಡ ಪಕ್ಷಗಳ ಚಹರೆಯನ್ನೇ ಬದಲಿಸಿದೆ. ಭಾಷೆ, ಗಡಿ ವಿಷಯ, ಮತ ಬ್ಯಾಂಕ್, ಜಾತಿ ಲೆಕ್ಕಾಚಾರ, ಹೊಂದಾಣಿಕೆ ರಾಜಕಾರಣ ಇನ್ನಿತರ ಕಾರಣಗಳಿಂದಾಗಿ ಐದು ದಶಕಗಳಿಂದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಚಿಹ್ನೆಯಡಿ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಹಿಂದೇಟು ಹಾಕಿದ್ದವು. ಪಕ್ಷಗಳು ಜಾತಿ, ಭಾಷೆ ಆಧಾರದ ಮೇಲೆ ಸ್ಪರ್ಧಿಸುತ್ತಿದ್ದ ಅಭ್ಯರ್ಥಿಗಳನ್ನು ಪರೋಕ್ಷವಾಗಿ ಬೆಂಬಲಿಸಿ ಗೆಲ್ಲಿಸುತ್ತಿದ್ದವು. ಇದೇ ಮೊದಲ ಬಾರಿಗೆ ಚಿಹ್ನೆಯಡಿ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ, ಜೆಡಿಎಸ್ ಪಕ್ಷಗಳು ಚುನಾವಣೆ ಎದುರಿಸುತ್ತಿರುವುದು ವಿಶೇಷವಾಗಿದೆ.

    ಹೊಸ ಮುಖಗಳ ಸೇರ್ಪಡೆ: ಪಾಲಿಕೆಯ 58 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮರಾಠಿ ಮತದಾರರು ಅಧಿಕ ಪ್ರಮಾಣದಲ್ಲಿರುವ ಮತ್ತು ಪಾಲಿಕೆ ಚುನಾವಣೆಯಲ್ಲಿ ಗಡಿ,
    ಭಾಷೆ ಅನುಕಂಪದ ಆಧಾರದ ಮೇಲೆ ಎಂಇಎಸ್ ಬೆಂಬಲಿತರು ಗೆಲುವು ಸಾಧಿಸುತ್ತಿದ್ದರಿಂದ ರಾಜಕೀಯ ಪಕ್ಷಗಳು ಪಾಲಿಕೆ ಚುನಾವಣೆಯಿಂದ ದೂರ ಸರಿದ್ದಿದ್ದವು. ಅಲ್ಲದೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಿಗೆ ಸೀಮಿತಗೊಂಡಿದ್ದವು. ಇದೀಗ ಪಾಲಿಕೆ ಚುನಾವಣೆಯಲ್ಲಿ ಚಿಹ್ನೆಯಡಿ ಸ್ಪರ್ಧಿಸುತ್ತಿರುವುದರಿಂದ ಪಕ್ಷಗಳಿಗೆ ಹೊಸ ಮುಖಗಳು ಸೇರ್ಪಡೆಯಾಗುತ್ತಿವೆ. ಇದರಿಂದಾಗಿ ಸಂಘಟನೆ ವಿಸ್ತರಣೆಗೆ ಅನುಕೂಲವಾಗಿದೆ ಎನ್ನುವುದು ಮುಖಂಡರ ಅಭಿಪ್ರಾಯ.

    ಬಿಜೆಪಿಯಿಂದ ಹಿಂದುತ್ವ ಅಸ್ತ್ರ ಪ್ರಯೋಗ

    ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರು ಇದೀಗ ರಾಷ್ಟ್ರೀಯತೆ, ಹಿಂದುತ್ವದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಇದು ಕಾಂಗ್ರೆಸ್ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮತಬ್ಯಾಂಕ್ ಮೇಲೆ ಪರಿಣಾಮ ಉಂಟು ಮಾಡಿದೆ. ಅಲ್ಲದೆ, ಅಧಿಕ ಪ್ರಮಾಣದಲ್ಲಿ ಮರಾಠಿಗರು ವಾಸಿಸುವ ಪ್ರದೇಶದಲ್ಲಿ ಶಿವಾಜಿ ಹೆಸರು ಉಲ್ಲೇಖಿಸುವ ಮೂಲಕ ಮತ ಸೆಳೆಯಲು ರಾಜಕೀಯ ಪಕ್ಷಗಳು ಪ್ರಯತ್ನ ಮುಂದುವರಿಸಿವೆ.

    ಜಿದ್ದಾ-ಜಿದ್ದಿಗೆ ವೇದಿಕೆ: ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸೇರಿ ಚುನಾವಣಾ ಪ್ರಚಾರದ ಎಲ್ಲ ಚಟುವಟಿಕೆಗಳೂ ರಾಜಕೀಯ ಪಕ್ಷಗಳಿಗೆ ಹೊಸದಾಗಿತ್ತು. ಮರಾಠಿ ಸಮುದಾಯದ ಜನಸಂಖ್ಯೆ ಅಧಿಕ ಪ್ರಮಾಣದಲ್ಲಿದೆ. ಹೀಗಾಗಿ ಗಡಿ, ಭಾಷಾ ವಿಷಯಗಳು ಚುನಾವಣೆಯಲ್ಲಿ ಮುಂಚೂಣಿಗೆ ಬರುತ್ತದೆ ಎಂಬ ಆತಂಕದಲ್ಲಿಯೇ ಪಕ್ಷಗಳಿದ್ದವು. ಆದರೆ, ಸಚಿವರು ಹಾಗೂ ಶಾಸಕರು, ರಾಜ್ಯ ಮಟ್ಟದ ನಾಯಕರು ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಂತೆ ಪಾಲಿಕೆ ಚುನಾವಣೆಯ ಬಣ್ಣವೇ ಬದಲಾಗಿದೆ. ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕು ಎನ್ನುವ ಜಿದ್ದಾಜಿದ್ದಿಗೆ ಚುನಾವಣೆ ಸಾಕ್ಷಿಯಾಗಿದೆ.

    ಮತಯಾಚನೆಗಿಳಿದ ವಿವಿಧ ಹಿಂದುಪರ ಸಂಘಟನೆಗಳು: ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆ ಹಿಡಿಯಲು ಸಚಿವರು, ಶಾಸಕರು, ರಾಜ್ಯದ ಮಟ್ಟದ ನಾಯಕರನ್ನು ಬಳಸಿಕೊಂಡು ಬಿಜೆಪಿ ಪ್ರಚಾರ ನಡೆಸುತ್ತಿದೆ. ಜತೆಗೆ ಆರ್‌ಎಸ್‌ಎಸ್, ಹಿಂದುಪರ ಸಂಘಟನೆಗಳು ಕೂಡ ಅಖಾಡಕ್ಕಿಳಿದಿವೆ. ಅಲ್ಲದೆ, 50 ವಾರ್ಡ್‌ಗಳಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಸಂಘಟನೆಯ ಸಾವಿರಾರು ಕಾರ್ಯಕರ್ತರು, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಕಾರ್ಯಕರ್ತರು ಏಕಕಾಲದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡಿರುವುದು ಬಿಜೆಪಿ ಅಭ್ಯರ್ಥಿಗಳಿಗೆ ವರದಾನವಾಗಿ ಪರಿಣಮಿಸಿದೆ.

    ಭಾರತೀಯ ಜನತಾ ಪಕ್ಷವೂ ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬೆಳಗಾವಿ ಉತ್ತರ ವಿಧಾನ ಕ್ಷೇತ್ರದ ವ್ಯಾಪ್ತಿಯಲ್ಲಿ 25 ಸ್ಥಾನಗಳನ್ನು ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರ ಮೂಲಕ ಪಾಲಿಕೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಾಡುವ ನಿರೀಕ್ಷೆಯಿದೆ.
    | ಅಭಯ ಪಾಟೀಲ ಶಾಸಕರು, (ಮನಪಾ ಚುನಾವಣೆ ಉಸ್ತುವಾರಿ)

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts