More

    ಪಾರಂಪರಿಕ ಪದ್ಧತಿಯಲ್ಲಿ ಜನಿವಾರ ತಯಾರಿಕೆ

    ಕುಮಟಾ: ತಾಲೂಕಿನ ಕತಗಾಲ ಸಮೀಪದ ಭಂಡಿವಾಳ ಗ್ರಾಮದಲ್ಲಿ 89ರ ವೃದ್ಧರೊಬ್ಬರು ಈಗಲೂ ಚರಕದ ಮೂಲಕ ಶುದ್ಧ ಹತ್ತಿಯಿಂದ ಪಾರಂಪರಿಕ ಪದ್ಧತಿಯಲ್ಲಿ ಜನಿವಾರ ತಯಾರಿಸುತ್ತಿದ್ದಾರೆ.

    ಭಂಡಿವಾಳದ ವೆಂಕಟ್ರಮಣ ಭಟ್ಟ ಅವರು ಚರಕ ಉಪಯೋಗಿಸಿಯೇ ಜನಿವಾರ ಸಿದ್ಧಪಡಿಸುತ್ತಾರೆ. 40 ವರ್ಷಗಳಿಂದ ಜನಿವಾರ ತಯಾರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಇದುವರೆಗೆ 50 ಸಾವಿರಕ್ಕೂ ಹೆಚ್ಚು ಜನಿವಾರಗಳನ್ನು ತಯಾರಿಸಿದ್ದಾಗಿ ಅವರು ಹೇಳುತ್ತಾರೆ. ಕೃಷಿಕ ಅವಿಭಕ್ತ ಕುಟುಂಬದ ಹಿನ್ನೆಲೆಯ ವೆಂಕಟ್ರಮಣ ಭಟ್ ಕೃಷಿ ಕಾರ್ಯದ ಬಳಿಕ ಮಿಕ್ಕ ಸಮಯದಲ್ಲಿ ಜನಿವಾರ ಮಾಡುತ್ತಾರೆ.

    ಈಗ ಕೃಷಿ ಕೆಲಸ ಮಾಡುವಷ್ಟು ಸಾಮರ್ಥ್ಯ ಇಲ್ಲ. ಆದರೆ, ಚರಕ ತಿರುಗಿಸಿ ಜನಿವಾರ ಮಾಡಬಲ್ಲೆ. ಜನಿವಾರವನ್ನು ತುಂಬ ಸೂಕ್ಷ್ಮವಾಗಿ ತಾಳ್ಮೆ ವಹಿಸಿ ಮಾಡಬೇಕಾಗುತ್ತದೆ. ದಾರಗಳು ಒಂದಕ್ಕೊಂದು ಗಂಟುಬಿದ್ದರೆ ಅದು ವ್ಯರ್ಥವಾಗಿ ಬಿಡುತ್ತದೆ ಎನ್ನುತ್ತಾರವರು. ಹೊನ್ನಾವರದಿಂದ ಹತ್ತಿಯ ನೂಲು ತರಬೇಕಾಗುತ್ತದೆ. ರಾಟಿಗೆ ಸುತ್ತಿಕೊಂಡು 48 ಅಂಗುಲದ ಅಳತೆ ಮಾಡಿಕೊಳ್ಳಬೇಕು. ನಂತರ ಚರಕದಿಂದ ಕಾವು ಕೊಡಬೇಕು. ಮೂರು ಎಳೆ ಮಾಡಿ ಕೂಡಿಸಿಕೊಂಡು ನಂತರ 9 ಎಳೆ ಮಾಡಬೇಕು. ಅಂತೂ ದಿನಕ್ಕೆ ಕನಿಷ್ಠ ಐದಾರು ಜನಿವಾರದಂತೆ ಈಗಲೂ ಮಾಡುತ್ತೇನೆ. ಹೆಚ್ಚು ಬೇಡಿಕೆ ಇದ್ದಾಗ ನಮ್ಮ ಮನೆಯ ಇತರ ಸದಸ್ಯರೂ ಕೈಜೋಡಿಸುತ್ತಾರೆ. ಎಲ್ಲಿಯವರೆಗೆ ಸಾಧ್ಯವಿದೆಯೋ ಅಲ್ಲಿಯವರೆಗೆ ಜನಿವಾರ ಮಾಡುತ್ತಲೇ ಇರುತ್ತೇನೆ ಎನ್ನುತ್ತಾರೆ ವೆಂಕಟ್ರಮಣ ಭಟ್ಟ.

    ಕೆಲವು ದಶಕಗಳ ಹಿಂದಿನವರೆಗೂ ನಮ್ಮ ಎಲ್ಲ ಶಾಲೆಗಳಲ್ಲೂ ಚರಕ ನೋಡಲು ಸಿಗುತ್ತಿತ್ತು. ಮಕ್ಕಳಿಗೆ ನೂಲು ತಯಾರಿಸುವ ತರಬೇತಿ ಕೊಡುತ್ತಿದ್ದರು. ಈಗ ಚರಕವನ್ನು ಮ್ಯೂಸಿಯಂಗಳಲ್ಲಷ್ಟೆ ನೋಡುವಂತಾಗಿದೆ. ನಮ್ಮ ಮನೆಯಲ್ಲಿರುವ ಚರಕ ಹಾಳಾದರೆ ನಾವೇ ದುರಸ್ತಿ ಮಾಡಿಕೊಳ್ಳುತ್ತೇವೆ ಎಂದು ವೆಂಕಟ್ರಮಣ ಭಟ್ ಅವರ ಪುತ್ರ ಸತ್ಯನಾರಾಯಣ ಭಟ್ಟ ಹೇಳುತ್ತಾರೆ.

    ನಮ್ಮ ಕುಟುಂಬದ ವಿಶೇಷ ಕೌಶಲವನ್ನು ನಾನೂ ಕಲಿಯುತ್ತೇನೆ ಎನ್ನುತ್ತಾರೆ ಮೊಮ್ಮಗ ವಿನಾಯಕ ಭಟ್. ಒಟ್ಟಾರೆ ಉಪನಯನ, ಉಪಾಕರ್ಮ ಇತರ ಸಂದರ್ಭದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಜನಿವಾರ ತಯಾರಿಕೆಯ ಪಾರಂಪರಿಕ ಮಹತ್ವವನ್ನು ಭಂಡಿವಾಳದ ಕೃಷಿಕ ಕುಟುಂಬವೊಂದು ಇಂದಿಗೂ ಉಳಿಸಿ, ಬೆಳೆಸಿಕೊಂಡು ಬಂದಿದೆ.

    ಜನಿವಾರ ತಯಾರಿಸುವುದರಲ್ಲಿ ಲಾಭದ ಉದ್ದೇಶವಿಲ್ಲ, ಜನರಿಗೆ ಶುದ್ಧ, ಶಾಸ್ತ್ರೋಕ್ತ ಜನಿವಾರ ಸಿಗಬೇಕು ಹಾಗೂ ನಮ್ಮ ಮನೆತನದಲ್ಲಿ ಈ ಕೆಲಸ ಮುಂದುವರಿಯಬೇಕು ಎಂಬ ಕಾರಣಕ್ಕೆ ಮಾಡುತ್ತಿ ದ್ದೇನೆ. ಪಾರಂಪರಿಕವಾಗಿ ಬಂದಿದ್ದನ್ನು ಮುಂದುವರಿಸುವ ಆತ್ಮತೃಪ್ತಿ ಮತ್ಯಾವುದಕ್ಕೂ ಸಮಾನವಾದುದಲ್ಲ.

    | ವೆಂಕಟ್ರಮಣ ಭಟ್

    ಭಂಡಿವಾಳ ಜನಿವಾರ ತಯಾರಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts