More

    ಪಾದಚಾರಿಮಾರ್ಗದ ಅಂಗಡಿ ತೆರವು, ನೆಲಮಂಗಲ ನಗರಸಭೆ ಅಧಿಕಾರಿಗಳ ಕಾರ್ಯಾಚರಣೆ

    ನೆಲಮಂಗಲ: ನಗರದ ಬಸವಣ್ಣ ದೇವರ ಮಠದ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಪಾದಚಾರಿಮಾರ್ಗದಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ತರಕಾರಿ ಅಂಗಡಿಗಳನ್ನು ನಗರಸಭೆ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದರು.

    ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ನಗರಸಭೆ ಆಯುಕ್ತ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಜೆಸಿಬಿ ಬಳಸಿ ಅಂಗಡಿಗಳನ್ನು ತೆರವುಗೊಳಿಸಿ ಸುಗಮ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಯಿತು.

    ಪವಾಡ ಶ್ರೀ ಬಸವಣ್ಣ ದೇವರ ಮಠದ ಆವರಣದಲ್ಲಿ ಪೂರ್ವಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತವರೆಗೆ ಸಹಸ್ರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತರಕಾರಿ ಅಂಗಡಿಗಳು ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಂಡಿದ್ದರಿಂದ, ವಿದ್ಯಾರ್ಥಿಗಳ ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅಂಗಡಿಗಳ ತೆರವಿಗೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ವಿದ್ಯಾರ್ಥಿಗಳು ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದರು.

    ವ್ಯಾಪಾರಿಗಳಿಂದ ಹಿಡಿಶಾಪ: ಅಂಗಡಿಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವ್ಯಾಪಾರಿಗಳು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ತೆರವು ಕಾರ್ಯಾಚರಣೆ ಮಾಹಿತಿ ಲಭಿಸುತ್ತಲೇ ಸ್ಥಳಕ್ಕೆ ಬಂದ ಕಲ್ಪವೃಕ್ಷ ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕ ಸಂಘಟನೆ, ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಮುಖ್ಯಸ್ಥರು ಮತ್ತು ಕಾರ್ಯಕರ್ತರು ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಪ್ರತಿಭಟಿಸಿದರು. ಅಲ್ಲದೆ, ಅಂಗಡಿಗಳ ತೆರವಿಗೆ ಕಾಲಾವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ: ಕಲ್ಪವೃಕ್ಷ ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕ ಸಂಘ ಅಧ್ಯಕ್ಷ ಬಿ. ನರಸಿಂಹಯ್ಯ ಮಾತನಾಡಿ, ನಗರಸಭೆ ಅಧಿಕಾರಿಗಳು ಬೀದಿಬದಿ ವ್ಯಾಪಾರ ಮಾಡಿ ಜೀವನ ನಡೆಸುತ್ತಿರುವ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ. ನಗರದ ಸರ್ಕಾರಿ ಜಾಗ, ಬಡಾವಣೆ ಮೀಸಲು ಪ್ರದೇಶ, ರಾಜಗಾಲುವೆ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿರುವ ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವವರು ಬಡವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೀದಿಬದಿ ವ್ಯಾಪಾರಿಗಳಿಗೆ ಗುರುತಿನಚೀಟಿ ಕೊಡಬೇಕು ಹಾಗೂ ವ್ಯಾಪಾರಕ್ಕೆ ಪರ್ಯಾಯ ಜಾಗದ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

    ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗಗಳಲ್ಲಿ ಇಟ್ಟುಕೊಳ್ಳಲಾಗಿದ್ದ ತರಕಾರಿ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಯ ಬಳಿಕ ಈ ರಸ್ತೆಯಲ್ಲಿ ಜನರ ಓಡಾಟ ಹಾಗೂ ವಾಹನ ಸಂಚಾರ ಸುಗಮಗೊಂಡಿದೆ.
    ಮಂಜುನಾಥ್, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts