More

    ಪಾಂಡವಪುರದಲ್ಲೂ ಅದ್ದೂರಿ ಸ್ವಾಗತ

    ಪಾಂಡವಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾಗಿರುವ ‘ಭಾರತ್ ಜೋಡೋ ಯಾತ್ರೆ’ಗೆ ಪಟ್ಟಣದಲ್ಲಿ ಅದ್ದೂರಿ ಸ್ವಾಗತ ದೊರೆಯಿತು.
    ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು, ದರಸಗುಪ್ಪೆ ಮೂಲಕ ತಾಲೂಕು ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆಗೆ ಪಿಎಸ್‌ಎಸ್‌ಕೆ ಕಾರ್ಖಾನೆ ಬಳಿ ಕಾಂಗ್ರೆಸ್ ಮುಖಂಡರು ಸ್ವಾಗತ ಕೋರಿ ಬರಮಾಡಿಕೊಂಡರು.

    ಬಳಿಕ ಪಿಎಸ್‌ಎಸ್‌ಕೆ ಕಾರ್ಖಾನೆ ಮೇಲ್ಸೇತುವೆ ಮೇಲೆ ಸಂಚರಿಸುವಾಗ ಕಬ್ಬು ತುಂಬಿದ ಎತ್ತಿನಗಾಡಿಗಳು ಮತ್ತು ಲಾರಿಗಳನ್ನು ನೋಡಿ ಕಾರ್ಖಾನೆ ಮತ್ತು ಮಾಲೀಕರ ಬಗ್ಗೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಮುಖಂಡರಿಂದ ಮಾಹಿತಿ ಪಡೆದು ಮುಂದೆ ಸಾಗಿದರು. ಕೆನ್ನಾಳು ಗೇಟ್ ಬಳಿಯ ವನಜಾ ಸುಂದರ ಕನ್ವೇಷನ್ ಹಾಲ್‌ನಲ್ಲಿ 10 ನಿಮಿಷ ಕಾಲ ವಿಶ್ರಾಂತಿ ಪಡೆದು, ಕಾಫಿ ಸೇವಿಸಿದ ನಂತರ ಪಾದಯಾತ್ರೆ ಮುಂದುವರಿಸಿದರು.

    ತಾಲೂಕಿನ ಹರಳಹಳ್ಳಿಗೆ ಆಗಮಿಸಿದ ರಾಹುಲ್ ಗಾಂಧಿ ಅವರಿಗೆ ಹರಳಹಳ್ಳಿ ಮತ್ತು ವಿಶ್ವೇಶ್ವರಯ್ಯನಗರದ ಜನರು ಬೆಲ್ಲದ ಆರತಿ ಬೆಳಗಿ ಶುಭಾಶಯ ಕೋರಿದರು. ಈ ವೇಳೆ ಜನರತ್ತ ಕೈಬೀಸಿದ ರಾಹುಲ್ ಧನ್ಯವಾದ ತಿಳಿಸಿದರು. ಹಾಗೆಯೇ, ತಾಲೂಕಿನ ರೈಲ್ವೆ ನಿಲ್ದಾಣದ ವೃತ್ತದಲ್ಲಿ ಜಮಾವಣೆಗೊಂಡಿದ್ದ ನೂರಾರು ರೈತ ಸಂಘದ ಕಾರ್ಯಕರ್ತರು ಹಸಿರು ಟವೆಲ್‌ಗಳನ್ನು ಗಾಳಿಯಲ್ಲಿ ಬೀಸುವ ಮೂಲಕ ರಾಹುಲ್ ಗಾಂಧಿ ಅವರಿಗೆ ವಿಶೇಷವಾಗಿ ಸ್ವಾಗತ ಕೋರಿದರು.

    ತಂಗಲು ವ್ಯವಸ್ಥೆ: ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆಯಲ್ಲಿ ಆಗಮಿಸಿರುವ ಪಕ್ಷದ ವಿವಿಧ ಸ್ತರದ ಕಾರ್ಯಕರ್ತರಿಗೆ ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣ ಹಾಗೂ ತಾಲೂಕಿನ ಟಿ.ಎಸ್.ಛತ್ರ ಗ್ರಾಮದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ. ದಸರಾ ಹಬ್ಬ ಮುಗಿದ ನಂತರ ಅ.6ರಂದು ಪಾದಯಾತ್ರೆ ಪುನರಾರಂಭವಾಗಲಿದ್ದು, ತಾಲೂಕಿನ ಮಹದೇಶ್ವರಪುರದಿಂದ ಹೊರಟು ಬೆಳಾಳ್ಳೆ ಮಾರ್ಗವಾಗಿ ಜಕ್ಕನಹಳ್ಳಿ ತಲುಪಲಿದೆ. ಅಲ್ಲಿ ಯುವಕರೊಂದಿಗೆ ರಾಹುಲ್ ಸಂವಾದ ನಡೆಸಲಿದ್ದಾರೆ.

    ಪಟ್ಟಣದ ಐದು ದೀಪದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕೇವಲ ಎರಡೇ ನಿಮಿಷಗಳಲ್ಲಿ ಭಾಷಣ ಮುಗಿಸಿದ ರಾಹುಲ್ ಗಾಂಧಿ, ಬಳಿಕ ಕಬಿನಿ ಹಿನ್ನೀರಿನ ರೆಸಾರ್ಟ್‌ಗೆ ವಾಸ್ತವ್ಯಕ್ಕೆಂದು ತೆರಳಿದರು. ಪಾದಯಾತ್ರೆಯಲ್ಲಿ ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್ ತಾಲೂಕು ಮುಖಂಡರಾದ ಎಚ್.ತ್ಯಾಗರಾಜು, ಎಲ್.ಸಿ.ಮಂಜುನಾಥ್, ಎಲ್.ಡಿ.ರವಿ, ಸಿ.ಆರ್.ರಮೇಶ್, ಆಶಾ ಲವಕುಮಾರ್, ಶೋಭಾ ಕುಮಾರ್ ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

    ಕೂಲಿ ಕಾರ್ಮಿಕರ ಬಳಿಯೂ ಶೇ.40 ಕಮಿಷನ್
    ರಾಜ್ಯ ಬಿಜೆಪಿ ಸರ್ಕಾರ ರೈತರು, ವ್ಯಾಪಾರಿಗಳು, ಕೂಲಿ ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳ ಬಳಿಯೂ ಶೇ.40 ಕಮಿಷನ್ ವಸೂಲಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದರು.
    ಪಟ್ಟಣದ ಐದು ದೀಪದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಮತ್ತು ಶೇ.40 ಕಮಿಷನ್ ವಿಚಾರವಾಗಿ ಆರೋಪಿಸಿ ದೂರು ನೀಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪಾದಯಾತ್ರೆ ದ್ವೇಷ, ಹಿಂಸೆ, ಬೆಲೆ ಏರಿಕೆ, ನಿರೋದ್ಯೋಗ, ಹಣದುಬ್ಬರ ಸಮಸ್ಯೆಗಳ ವಿರುದ್ಧವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಹೋರಾಟದ ಜತೆಗೆ ಜನರ ಸಮಸ್ಯೆಗಳ ಪರಿಹಾರಕ್ಕಾಗಿ 3570 ಕಿಮೀ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts