More

    ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ

    ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಸಿದ್ಧತೆ ಪೂರ್ಣಗೊಂಡಿದೆ. ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಆಯಾ ಮತಗಟ್ಟೆಗಳಿಗೆ ತಲುಪಿದ್ದಾರೆ. ಅರ್ಹ ಮತದಾರರು 28ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗಿನ ಅವಧಿಯಲ್ಲಿ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು ಎಂದು ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.

    ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. 4 ಜಿಲ್ಲೆಗಳ ವ್ಯಾಪ್ತಿಯ ಕ್ಷೇತ್ರದ ಧಾರವಾಡ ಜಿಲ್ಲೆಯಲ್ಲಿ 21,549, ಗದಗ 15,978, ಹಾವೇರಿ 23,593, ಉತ್ತರ ಕನ್ನಡ 13,148 ಸೇರಿ 74,268 ಮತದಾರರಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 54, ಗದಗ 29, ಹಾವೇರಿ 37, ಉತ್ತರ ಕನ್ನಡ 26 ಸೇರಿ 146 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.

    ಚುನಾವಣಾ ಕರ್ತವ್ಯ ನಿರ್ವಹಿಸಲು 4 ಜಿಲ್ಲೆ ಸೇರಿ ವಿವಿಧ ಹಂತದ 582 ಅಧಿಕಾರಿಗಳನ್ನು ನೇಮಿಸಲಾಗಿದೆ. 81 ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. 41 ಸೆಕ್ಟರ್ ಅಧಿಕಾರಿ, 73 ರೂಟ್ ಆಫೀಸರ್, 42 ಸೆಕ್ಟೆರ್ ಹೆಲ್ತ್ ರೆಗ್ಯೂಲೇಟರ್ಸ್, 4 ನೋಡಲ್ ಹೆಲ್ತ್ ಅಧಿಕಾರಿ, 71 ವಿಡಿಯೋಗ್ರಾಫರ್ಸ್​ಗಳನ್ನು ನೇಮಿಸಲಾಗಿದೆ. 75 ಕೇಂದ್ರಗಳಲ್ಲಿ ವೆಬ್​ಕಾಸ್ಟಿಂಗ್, 156 ಜನ ಗ್ರುಪ್ ಡಿ ಸಿಬ್ಬಂದಿ, 80 ಜನ ಆಶಾ ಕಾರ್ಯಕರ್ತೆಯರು, 220 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಮತ್ತು ಮತದಾರರ ಸಹಾಯಕ್ಕಾಗಿ 249 ಹೆಲ್ಪ್ ಡೆಸ್ಕ್​ಗಳನ್ನು ತೆರೆಯಲಾಗಿದೆ ಎಂದರು.

    ಶಾಂತಿ, ಸುವ್ಯವಸ್ಥೆ ಮತ್ತು ಶಾಂತಿಯುತ ಮತದಾನಕ್ಕಾಗಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ನೇಮಿಸಲಾಗಿದೆ. ಧಾರವಾಡ ನಗರ 178, ಧಾರವಾಡ ಗ್ರಾಮೀಣ 50, ಗದಗ 201, ಹಾವೇರಿ 170 ಹಾಗೂ ಉತ್ತರ ಕನ್ನಡ 157 ಸೇರಿ 756 ಪೊಲೀಸ್ ಅಧಿಕಾರಿ, ಸಿಬ್ಬಂದಿ ನೇಮಿಸಿ ಅಗತ್ಯ ವಾಹನಗಳನ್ನು ನೀಡಲಾಗಿದೆ ಎಂದರು.

    ಸಹಾಯಕ ಚುನಾವಣಾಕಾರಿ ಹಾಗೂ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಈಗಾಗಲೇ 58,000 ಮತದಾರರಿಗೆ ಎಸ್​ಎಂಎಸ್ ಮೂಲಕ ಮತದಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ರವಾನಿಸಲಾಗಿದೆ. ಮತದಾರ ತನ್ನ ಸ್ಥಳದಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಅನುಕೂಲವಾಗುವಂತೆ ರೂಟ್​ವ್ಯಾಪ್ ಇರುವ ಗೂಗಲ್ ಸಂದೇಶ ಕಳುಹಿಸಲಾಗಿದೆ. ಅಲ್ಲದೆ ಮತದಾರರ ಮನೆಗೆ ತೆರಳಿ ಮತದಾರ ಚೀಟಿಯನ್ನು ತಲುಪಿಸಲಾಗಿದೆ ಎಂದರು.

    ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಲಾಬುರಾಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಕಾರಿ ಡಾ. ಬಿ. ಗೋಪಾಲಕೃಷ್ಣ ಇದ್ದರು.

    ಕೋವಿಡ್ ಮುನ್ನೆಚ್ಚರಿಕೆ ಕ್ರಮ
    ಕೋವಿಡ್ ನಿಯಮಾವಳಿ ಪಾಲಿಸಲು ಪ್ರತಿ ಮತಗಟ್ಟೆಯಲ್ಲಿ ಅಗತ್ಯ ಸಿಬ್ಬಂದಿ, ಆರೋಗ್ಯ ಪರಿಕರಗಳನ್ನು ನೀಡಲಾಗಿದೆ. ಮತದಾನದ ಕೊನೆಯ 1 ಗಂಟೆ ಕರೊನಾ ಶಂಕಿತ, ಕರೊನಾ ಸೋಂಕಿತರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲಿ ಐಸೋಲೇಶನ್ ರೂಂ ವ್ಯವಸ್ಥೆ ಮಾಡಲಾಗಿದ್ದು, ಅಗತ್ಯವಿದ್ದಲ್ಲಿ ಬಳಸಲಾಗುವುದು. ಪ್ರತಿಯೊಬ್ಬ ಮತದಾರ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಪರಸ್ಪರ ಅಂತರ ಪಾಲಿಸಬೇಕು ಎಂದು ಬಿಸ್ವಾಸ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts