More

    ಪಶುವೈದ್ಯರ ಪದೋನ್ನತಿಗಾಗಿ ಬೇಡಿಕೆ  -ಜಿಲ್ಲಾ ಶಾಖೆಯಿಂದ ಅಹವಾಲು ಸಲ್ಲಿಕೆ 

    ದಾವಣಗೆರೆ: ಪಶು ವೈದ್ಯಕೀಯ ಇಲಾಖೆಯ ಪಶು ವೈದ್ಯರಿಗೆ ಪದೋನ್ನತಿ ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪಶು ವೈದ್ಯಕೀಯ ಸಂಘದ ಜಿಲ್ಲಾ ಶಾಖೆ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹಾಗೂ ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರಿಗೆ ಮನವಿ ಸಲ್ಲಿಸಲಾಯಿತು.
    2017ರ ಆಗಸ್ಟ್ 3ರಿಂದ ಅನ್ವಯವಾಗುವಂತೆ ಪದೋನ್ನತಿ ನೀಡುತ್ತಿರುವುದರಿಂದ ಅರ್ಹ ಪಶುವೈದ್ಯರಿಗೆ ಅನ್ಯಾಯವಾಗುತ್ತಿದೆ. 2012ರ ಡಿ.31ರಿಂದ ಪೂರ್ವಾನ್ವಯವಾಗುವಂತೆ 6 ಮತ್ತು 13 ವರ್ಷಗಳ ಕಾಲಬದ್ಧ ಪದೋನ್ನತಿ ನೀಡಲು ಆಡಳಿತ ನ್ಯಾಯಮಂಡಳಿ ಆದೇಶವಾಗಿದ್ದು ಇದನ್ನು ಅನುಷ್ಠಾನಗೊಳಿಸಬೇಕು.
    ಕೇವಲ ಹಸು, ಎಮ್ಮೆ, ಕುರಿ, ಮೇಕೆ, ಹಂದಿ ಮತ್ತು ಕುಕ್ಕುಟಗಳನ್ನಷ್ಟೇ ಲೆಕ್ಕದಲ್ಲಿರಿಸಿದ ಜಾನುವಾರು ಘಟಕದ ಆಧಾರದ ಮೇಲೆ ಪಶುವೈದ್ಯ ಸಂಸ್ಥೆ/ ಹುದ್ದೆಗಳ ಅಗತ್ಯತೆಯನ್ನು ನಿರ್ಧರಿಸಿ ಸ್ಥಳಾಂತರಿಸುವುದು ಅಸಮಂಜಸವಾಗಿದೆ. ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಯವಾಗಲಿರುವ ಈ ಕ್ರಮ ಕೈಬಿಡಬೇಕು ಎಂದು ಆಗ್ರಹಿಸಿದರು.
    ಇಲಾಖೆಯ ಪಶು ವೈದ್ಯ ಸಂಸ್ಥೆಗಳಿಗೆ ಬೇಡಿಕೆ ಅನುಸಾರ ಸಮರ್ಪಕ ಔಷಧ ಪೂರೈಸಬೇಕು. ಹೊಸ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಕಚೇರಿಗಳನ್ನು ಆರಂಭಿಸಬೇಕು. ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಅಧಿಕ ಪ್ರಭಾರಿ ಕಾರ್ಯ ನಿರ್ವಹಣೆಯ ಪಶು ವೈದ್ಯರಿಗೆ ನಿಯಮಿತ ಪ್ರಭಾರಿ ಭತ್ಯೆ ನೀಡಬೇಕು. ವಿವಿಧ ವೃಂದಗಳ ಖಾಲಿ ಹುದ್ದೆಗಳನ್ನು ನೇಮಿಸಬೇಕು. ಸಂಚಾರಿ ಪಶುಚಿಕಿತ್ಸಾ ಘಟಕದ ಪಶು ವೈದ್ಯರಿಗೆ ನಿಗದಿಪಡಿಸಿದ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.
    ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ, ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ ಎಸ್.ಸುಂಕದ, ಪ್ರಧಾನ ಕಾರ್ಯದರ್ಶಿ ಯು. ವಿಶ್ವನಾಥ್, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ವೀರೇಶ್, ಡಾ.ಪ್ರಜ್ವಲ್, ಡಾ.ಎಲ್. ಶಂಭುಲಿಂಗಪ್ಪ, ಡಾ. ಬಸವೇಶ್ವರ ಐನಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts