More

    ಪರ್ಯಾಯ ಜಲಮೂಲ ಪತ್ತೆಗೆ ಸೂಚನೆ

    ಕಲಬುರಗಿ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಭೀಮಾ ನದಿ ಮತ್ತು ಬೆಣ್ಣೆತೊರಾ ಹೊರತುಪಡಿಸಿ ಭವಿಷ್ಯದ ದೃಷ್ಟಿಯಿಂದ ರಾಜಕಾಲುವೆ ಅಥವಾ ಕೆರೆಗಳಿದ್ದಲ್ಲಿ ಅದನ್ನು ಪತ್ತೆ ಹಚ್ಚುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳಿಗೆ ಸಂಸದ ಡಾ.ಉಮೇಶ ಜಾಧವ ಆದೇಶಿಸಿದ್ದಾರೆ.
    ಶನಿವಾರ ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಜಲ ಮಂಡಳಿ ಅಧಿಕಾರಿಗಳೊಂದಿಗೆ ಕಲಬುರಗಿ ನಗರಕ್ಕೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಸರಬರಾಜು ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
    ಕುಡಿಯುವ ನೀರು ಸರಬರಾಜಿನ ಮೂಲ, ಪ್ರಮಾಣ, ಲಭ್ಯತೆ ಮತ್ತು ದೈನಂದಿನ ಬಳಕೆ ಹೀಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದ ಸಂಸದರು ಬೇಸಿಗೆ ಬಿಸಿಲು ಹೆಚ್ಚಾಗಿದ್ದರಿಂದ ನಗರಕ್ಕೆ ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸ್ವಚ್ಛ ಕುಡಿಯುವ ನೀರು ಪೂರೈಕೆ ನಮ್ಮ ಮೊದಲ ಆದ್ಯತೆಯಾಗಿದೆ. ಕಲುಷಿತ ನೀರಿನಿಂದಲೆ ಹೆಚ್ಚಿನ ರೋಗಗಳ ಉತ್ಪತ್ತಿಗೆ ಕಾರಣವಾಗುವುದರಿಂದ ಕುಡಿಯಲು ಯೋಗ್ಯ ಮತ್ತು ಸ್ವಚ್ಛ ನೀರು ಮಾತ್ರ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
    ನಗರಕ್ಕೆ 24 ಗಂಟೆ ನಿರಂತರ ನೀರು ಪೂರೈಕೆ ಯೋಜನೆಯನ್ನು ಪೂರ್ಣಗೊಳಿಸಲು ಅದರ ಸಮಗ್ರ ಚಿತ್ರಣ ತಮಗೆ ನೀಡಿದಲ್ಲಿ ಮುಂದುವರಿದ ಕಾಮಗಾರಿಯ ಕಾರ್ಯಾನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರದ ಹಂತದಲ್ಲಿ ತಾವು ಪ್ರಯತ್ನಿಸುವುದಾಗಿ ತಿಳಿಸಿದರು.
    ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಒಂದೆಡೆ ಬೇಸಿಗೆ ಇನ್ನೊಂದೆಡೆ ರಂಜಾನ್ ಪವಿತ್ರ ಮಾಸ ಆರಂಭವಾಗಿದೆ. ಲಾಕ್ ಡೌನ್ ಪರಿಣಾಮ ಮನೆ ಬಿಟ್ಟು ಹೊರಗಡೆ ಎಲ್ಲೂ ಜನರಿಗೆ ನೀರು ಸಿಗುವುದಿಲ್ಲ. ಅಧಿಕಾರಿಗಳು ಇದನ್ನು ಅರಿತು ಪ್ರತಿ ಪ್ರದೇಶಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುವಂತೆ ಎಚ್ಚರ ವಹಿಸಬೇಕು ಎಂದರು.
    ಕಲಬುರಗಿ ಜಲಮಂಡಳಿ ಕಚೇರಿಯಲ್ಲಿ 8 ಕಿರಿಯ ಅಭಿಯಂತರ ಹುದ್ದೆಗಳ ಪೈಕಿ 6 ಹುದ್ದೆಗಳ ಖಾಲಿ ಇವೆ ಎಂಬ ಮಾಹಿತಿ ಪಡೆದು ಶಾಸಕರು, ಹುದ್ದೆಗಳ ಭರ್ತಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು. ಗೋದುತಾಯಿ ನಗರದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣವಾಗಿದ್ದು, ಕೂಡಲೆ ಪೈಪ್ಲೈನ್ ಸಂಪರ್ಕ ಕಲ್ಪಿಸಿ ಪ್ರದೇಶಕ್ಕೆ ಕುಡಿಯುವ ನೀರಿನ ಸೇವೆಗೆ ಟ್ಯಾಂಕ್ ಬಳಸಬೇಕು ಎಂದು ತಿಳಿಸಿದರು.
    ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತ ಯೂನಿಸ್ ಬಾಷಾ ಮಾತನಾಡಿ, ಕಲಬುರಗಿ ನಗರಕ್ಕೆ ಭೀಮಾ ನದಿಯಿಂದ ಶೇ.70 ಮತ್ತು ಬೆಣ್ಣೆತೊರಾದಿಂದ ಶೇ.30ರಷ್ಟು ಕುಡಿಯುವ ನೀರು ಪೂರೈಕೆಯಾಗುತ್ತಿದೆ. 300 ಮಿಲಿಯನ್ ಕ್ಯೂಬಿಕ್ ಫೀಟ್ ಸಾಮಥ್ರ್ಯದ ಸರಡಗಿ ಬ್ಯಾರೇಜಿನಲ್ಲಿ ಪ್ರಸ್ತುತ 128 ಮಿಲಿಯನ್ ಕ್ಯೂಬಿಕ್ ಫೀಟ್ ನೀರು ಲಭ್ಯವಿದೆ ಎಂದು ಸಂಸದ-ಶಾಸಕರಿಗೆ ಮಾಹಿತಿ ನೀಡಿದರು.
    ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ, ಪಾಲಿಕೆಯ ಪರಿಸರ ಅಭಿಯಂತ ಮುನಾಫ್ ಪಟೇಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸುನೀಲ ವಂಟೆ, ಚೇತನ, ಅರುಣ ಹಾಗೂ ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ದಿಲೀಪ್ ಸಿಂಗ್ ಇದ್ದರು.
    ಬ್ಯಾರೇಜ್ ವೀಕ್ಷಿಸಿದ ಸಂಸದರು: ನಗರಕ್ಕೆ ಕುಡಿಯುವ ನೀರು ಪೂರೈಸುವ ಸರಡಗಿ ಬ್ಯಾರೇಜ್ಗೆ ಶಾಸಕ ದತ್ತಾತ್ರೇಯ ಪಾಟೀಲ ಸೇರಿದಂತೆ ಮಹಾನಗರ ಪಾಲಿಕೆ ಮತ್ತು ಜಲಮಂಡಳಿ ಅಧಿಕಾರಿಗಳೊಂದಿಗೆ ಸಂಸದ ಡಾ.ಉಮೇಶ ಜಾಧವ ಭೇಟಿ ನೀಡಿ ವೀಕ್ಷಿಸಿದರು. ನೀರಿನ ಸಾಮಥ್ರ್ಯ, ಲಭ್ಯತೆಯ ಪ್ರಮಾಣ, ಅದರ ಕಾರ್ಯನಿರ್ವಹಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು ಕುಡಿಯುವ ನೀರು ಶುಧ್ಧೀಕರಣ ಘಟಕ ಮತ್ತು ಒಳಚರಂಡಿ ಶುದ್ಧೀಕರಣ ಘಟಕಕ್ಕೂ ಭೇಟಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts