More

    ಪರೀಕ್ಷೆ ವೇಳೆ ಭಯ ದೂರವಿಡಿ

    ಹಾನಗಲ್ಲ: ಪರೀಕ್ಷೆ ಸಮಯದಲ್ಲಿ ಭಯ ಬಂದರೆ, ನೆನಪಿನ ಶಕ್ತಿ ಕಡಿಮೆಯಾಗಿ, ರಕ್ತದೊತ್ತಡ ಹೆಚ್ಚಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಇದರ ಜತೆಗೆ ನಿದ್ದೆ ಕಡಿಮೆ ಮಾಡುವುದರಿಂದ ಬರೆಯುವ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ. ಆದ್ದರಿಂದ ಭಯ ಎಂಬುದನ್ನು ದೂರ ಮಾಡಬೇಕು ಎಂದು ಹಾವೇರಿಯ ಎಂಆರ್​ಎಂ ಕಾಲೇಜ್ ಪ್ರಾಚಾರ್ಯ ಎಂ.ರಾಮ ಮೋಹನರಾವ್ ಸಲಹೆ ನೀಡಿದರು.

    ಪಟ್ಟಣದ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸಲು ಸಲಹೆ’ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.

    ಪರೀಕ್ಷೆ ಸಮಯದಲ್ಲಿ ರಾತ್ರಿ 10ಕ್ಕೆ ಮಲಗಿ, ಬೆಳಗಿನ ಜಾವ 4ಗಂಟೆಗೆ ಎದ್ದು ಓದಬೇಕು. ಸರಿಯಾಗಿ ನಿದ್ದೆ ಮಾಡಬೇಕು. ಮನೆಯಲ್ಲಿ ಗಾಳಿ, ಬೆಳಕು ಸರಿಯಾಗಿ ಬರುವ ಸ್ಥಳದಲ್ಲಿ ಕುಳಿತು ಓದಬೇಕು. ಓದುವುದು ಬೇಸರವಾದರೆ, ಬರೆಯಬೇಕು. ಬರೆಯುವುದು ಬೇಸರವಾದರೆ ಓದಬೇಕು. ಹೀಗೆ ಬದಲಾವಣೆ ಮಾಡುವುದರಿಂದ ಅಧ್ಯಯನದಲ್ಲಿ ಬೇಸರ ಬರುವುದಿಲ್ಲ. ಓದುವ ಮುನ್ನ ಕನಿಷ್ಠ ಮೂರು ನಿಮಿಷ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು ಎಂಬ ಹತ್ತು- ಹಲವು ಸಲಹೆ, ಸೂಚನೆಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡರು.

    ಪರೀಕ್ಷಾ ದಿನಗಳಲ್ಲಿ ನಿತ್ಯವೂ 6 ಗಂಟೆ ನಿದ್ದೆ ಸಾಕು. ಅತಿ ಸುಲಭವಾಗಿ ಜೀರ್ಣವಾಗುವ ಇಡ್ಲಿ, ಹಣ್ಣು, ತಿನ್ನ ಬೇಕು. ಹೊಟ್ಟೆಯ ಅರ್ಧಭಾಗ ಊಟ ಮಾಡಿದರೆ ಸಾಕು. ಬೇಸಿಗೆ ಸಮಯದಲ್ಲಿ ನಿತ್ಯವೂ 10 ಲೋಟ ನೀರು ಸೇವಿಸಬೇಕು. ಪರೀಕ್ಷೆಗೆ ಹೋಗುವಾಗ ಮೈಗೆ ಕೊಂಚ ಸಡಿಲವಾಗುವ ಕಾಟನ್ ಬಟ್ಟೆ ಹಾಕಿಕೊಳ್ಳಬೇಕು ಎಂದರು.

    ಬರೆಯುವಾಗ ಹೀಗೆ ಎಚ್ಚರ ವಹಿಸಿ:ಪರೀಕ್ಷಾ ದಿನಕ್ಕೂ ಮುನ್ನವೇ ಪೆನ್ನು, ಪ್ರವೇಶ ಪತ್ರ ಸೇರಿ ಎಲ್ಲ ಬಗೆಯ ವಸ್ತುಗಳನ್ನು ಒಂದು ಬಾಕ್ಸ್​ನಲ್ಲಿ ಹಾಕಿ ಸಿದ್ಧಪಡಿಸಿಟ್ಟಿರಬೇಕು. ಕನಿಷ್ಠ 15 ನಿಮಿಷ ಮುಂಚಿತವಾಗಿ ಪರೀಕ್ಷಾ ಕೊಠಡಿಯಲ್ಲಿರಬೇಕು. ಉತ್ತರ ಬರೆಯುವಾಗ ಎರಡು ಶಬ್ದ ಹಾಗೂ ಎರಡು ಗೆರೆಗಳ ನಡುವೆ ಕಿರು ಬೆರಳಿನಷ್ಟು ಅಂತರವಿರಬೇಕು. ಹೆಚ್ಚುವರಿ ಉತ್ತರಪತ್ರಿಕೆಗಳನ್ನು ಸರಿಯಾಗಿ ಕಟ್ಟಬೇಕು. 3 ಗಂಟೆ ಸಂಪೂರ್ಣ ಕೊಠಡಿಯಲ್ಲಿಯಬೇಕು. ಪ್ರಶ್ನೆ ಸಂಖ್ಯೆ, ಉತ್ತರ, ದಿನಾಂಕ, ಪ್ರವೇಶ ನಂಬರ್ ಸರಿಯಾಗಿ ಗಮನಿಸಬೇಕು. ಪರೀಕ್ಷೆ ಆದ ಬಳಿಕ ಸ್ನೇಹಿತರ ಬಳಿ ಉತ್ತರ ಕುರಿತು ರ್ಚಚಿಸಿ ವಿಚಲಿತರಾಗಬಾರದು. ಅವರು ಕೂಡ ನಿಮ್ಮಂತೆ ಪರೀಕ್ಷೆ ಬರೆಯಲು ಬಂದವರೇ ಆಗಿರುತ್ತಾರೆ. ಪರೀಕ್ಷೆ ಸಮಯದಲ್ಲಿ ತಲೆ ಓಡಲ್ಲ ಎನ್ನುವುದಾದರೆ ಎಡಗೈಯನ್ನು ಗಟ್ಟಿಯಾಗಿ ಹಿಡಿದು ಜೋರಾಗಿ ಉಸಿರಾಟ ಮಾಡಬೇಕು. ಅಂದಾಗ ತಲೆಗೆ ಸೂಕ್ತ ಗಾಳಿಯ ಸಂಚಲನವಾಗಿ ಮೆದುಳು ಸರಿಯಾಗಿ ಕೆಲಸ ಮಾಡುತ್ತದೆ. ಆಗ ಓದಿದ್ದು, ನೆನಪು ಬರುತ್ತದೆ ಎಂದರು.

    ಪಟ್ಟಣ ಹಾಗೂ ತಾಲೂಕಿನ ವಿವಿಧ ಶಾಲೆಗಳ ಸಾವಿರಾರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

    ವಿಜಯವಾಣಿ ಪತ್ರಿಕೆ ಕಾರ್ಯ ಶ್ಲಾಘನೀಯ: ಪರೀಕ್ಷೆ ಎದುರಿಸುವುದು ಹೇಗೆ, ಅಭ್ಯಸಿಸುವ ವಿಷಯ ಹೇಗೆ ನೆನಪಿಟ್ಟುಕೊಳ್ಳುವುದು, ಪಠ್ಯದಲ್ಲಿರುವ ವಿಷಯದಲ್ಲಿ ಯಾವುದಕ್ಕೆ ಪ್ರಾಧಾನ್ಯತೆ ನೀಡಬೇಕು, ಹೇಗೆ ಓದಬೇಕು, ಎಷ್ಟು ಆಹಾರ ಸ್ವೀಕರಿಸಬೇಕು ಎಂಬೆಲ್ಲ ವಿಷಯಗಳನ್ನು ಅರಿತುಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಯಿತು ಎಂದು ಕಾರ್ಯಾಗಾರವನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಶ್ಲಾಘಿಸಿದರು.

    ಪರೀಕ್ಷೆ ಎಂದರೆ ನಿಜವಾಗಿಯೂ ಭಯ ಆಗುತ್ತಿತ್ತು. ಇದೀಗ ರಾಮಮೋಹನ ಸರ್ ಅವರು ಭಯ ಹೇಗೆ ಹೋಗಲಾಡಿಸಬೇಕು ಎಂಬುದನ್ನು ಸರಳವಾಗಿ ಹೇಳಿಕೊಟ್ಟಿದ್ದಾರೆ. ವಿಜಯವಾಣಿಯಿಂದ ಇಂಥ ಕಾರ್ಯಾಗಾರ ಏರ್ಪಡಿಸಿರುವುದು ಸಂತೋಷದ ವಿಷಯ.

    | ಸಾಕ್ಷಿ ನಾಯಕ, ವಿದ್ಯಾರ್ಥಿನಿ, ನವೀನ ಆಂಗ್ಲ ಮಾಧ್ಯಮ ಶಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts