More

    ಪರೀಕ್ಷೆಯಿಂದ ಯಾರೂ ವಂಚಿತರಾಗದಿರಲಿ

    ಗದಗ: ಜೂ. 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಜಿಲ್ಲೆಯ ಯಾವ ಪರೀಕ್ಷಾರ್ಥಿ ಸಹ ಪರೀಕ್ಷೆಯಿಂದ ವಂಚಿತರಾಗದಂತೆ ಅಗತ್ಯ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೋವಿಡ್-19 ವೈರಾಣು ಸೋಂಕು ತಡೆ ಕುರಿತು ಅರಿವು ಮೂಡಿಸಬೇಕು. ಸೋಂಕು ತಡೆಗೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕು, ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರೀಕ್ಷಾ ಸಮಯಕ್ಕೂ ಮೊದಲೇ ಪರೀಕ್ಷಾ ಕೇಂದ್ರದ ದ್ವಾರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದು, ಪ್ರತಿ ಪರೀಕ್ಷಾರ್ಥಿಯ ಥರ್ಮಲ್ ಸ್ಕ್ರೀನಿಂಗ್ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಹಾಕಬೇಕು ಎಂದರು.

    ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿಗಳು ಪ್ರವೇಶ ಚೀಟಿ ತೋರಿಸಿದಲ್ಲಿ ಸಾರಿಗೆ ಬಸ್​ನಲ್ಲಿ ಉಚಿತ ಪ್ರಯಾಣ ಕಲ್ಪಿಸಲು ವಾಯವ್ಯ ಸಾರಿಗೆ ಸಂಸ್ಥೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

    ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ಮಾತನಾಡಿ, ಜಿಲ್ಲೆಯಲ್ಲಿ 7078 ಬಾಲಕರು ಹಾಗೂ 6856 ಬಾಲಕಿಯರು ಸೇರಿ 13,934 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದಾರೆ. 58 ಮುಖ್ಯ ಪರೀಕ್ಷಾ ಕೇಂದ್ರಗಳು ಹಾಗೂ 7 ಉಪಕೇಂದ್ರಗಳು ಇರಲಿವೆ ಎಂದರು.

    ವಲಸೆ ಬಂದವರು, ವಸತಿ ನಿಲಯಗಳಿಲ್ಲಿ ಇದ್ದವರಿಗೆ ಅವರ ವಾಸ್ತವ್ಯ ಸ್ಥಳದ ಸಮೀಪದ ಪರೀಕ್ಷಾ ಕೆಂದ್ರದಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಅಧಿಕಾರಿಗಳು ಹಾಗೂ ತಾಲೂಕಾವಾರು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

    ಜಿಪಂ ಸಿಇಒ ಡಾ.ಆನಂದ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಮತ್ತಿತರರು ಸಭೆಯಲ್ಲಿ ಇದ್ದರು.

    ಪರೀಕ್ಷಾ ವೇಳಾಪಟ್ಟಿ

    ಜೂನ್ 25ರಂದು ದ್ವಿತೀಯ ಭಾಷೆ (ಇಂಗ್ಲಿಷ್), ಜೂ. 27ರಂದು ಗಣಿತ, ಜೂ. 29ರಂದು ವಿಜ್ಞಾನ, ಜು. 1ರಂದು ಸಮಾಜ ವಿಜ್ಞಾನ, ಜು. 2 ಪ್ರಥಮ ಭಾಷೆ ಹಾಗೂ ಜು. 4ರಂದು ತೃತೀಯ ಭಾಷೆ ಪರೀಕ್ಷೆಗಳು ಜರುಗಲಿವೆ. ದ್ವಿತೀಯ ಹಾಗೂ ತೃತೀಯ ಭಾಷೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30 ರವರೆಗೆ ಹಾಗೂ ಇನ್ನುಳಿದ ವಿಷಯಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45 ರವರೆಗೆ ಪರೀಕ್ಷೆಗಳು ಜರುಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts