More

    ಪರೀಕ್ಷಾ ಅಕ್ರಮ ನಡೆದರೆ ಶಿಸ್ತು ಕ್ರಮ

    ಧಾರವಾಡ: ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದರೆ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯಸ್ಥರ

    ಹಾಗೂ ಅಧಿಕಾರಿಗಳ ಮೇಲೆ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಎಚ್ಚರಿಸಿದ್ದಾರೆ.

    ನಗರದ ಡಯಟ್​ನ ಡೆಪ್ಯೂಟಿ ಚನ್ನಬಸಪ್ಪ ಸಮಾವೇಶ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ಬಿಇಒ, ಡಿಡಿಪಿಐ ಹಾಗೂ ಡಯಟ್ ಪ್ರಾಚಾರ್ಯರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕರೊನಾ ವೈರಸ್ ಹರಡದಂತೆ ಪರೀಕ್ಷಾ ಸಮಯದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಕೊಳ್ಳುವಂತೆ ಸೂಚಿಸಿದ ಅವರು, ಅತಿಯಾದ ಕೆಮ್ಮು, ಜ್ವರ, ಇತರ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೊಠಡಿಗಳನ್ನು ರೂಪಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಜನನಿಬಿಡ ಪ್ರದೇಶಗಳಲ್ಲಿನ ಕೇಂದ್ರ, ಆವಾರ ಗೋಡೆ ಇಲ್ಲದ, ಸಿಸಿಟಿವಿ ತಾಂತ್ರಿಕ ವ್ಯವಸ್ಥೆ ಇಲ್ಲದ ಹಾಗೂ ಕಳೆದ ಬಾರಿ ಅಕ್ರಮಗಳು ನಡೆದ ಪರೀಕ್ಷಾ ಕೇಂದ್ರಗಳನ್ನು ಅತೀ ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಿ ತೀವ್ರ ನಿಗಾ ಇಡಬೇಕು. ಈ ಕೇಂದ್ರಗಳ ಮಾಹಿತಿ ಕಳಿಸುವಂತೆ ಸೂಚಿಸಿದ ಅವರು, ಈ ಕೇಂದ್ರಗಳಲ್ಲಿ ಹೆಚ್ಚಿನ ಪೋಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದರು.

    ಪ್ರತಿ ತಾಲೂಕಿನಲ್ಲಿ ಗುರುತಿಸಿರುವ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಕೆಗೆ ಕ್ರಮ ವಹಿಸಬೇಕು. ಪರೀಕ್ಷಾ ಸಮಯದಲ್ಲಿ ಯಾವುದೇ ಕಾರಣಕ್ಕೂ ಸಿಸಿ ಕ್ಯಾಮರಾ ಬಂದ್ ಮಾಡುವಂತಿಲ್ಲ. ಒಂದು ವೇಳೆ ಲೋಡ್ ಶೆಡ್ಡಿಂಗ್ ಮೂಲಕ ವಿದ್ಯುತ್ ನಿಲುಗಡೆ ಆಗುತ್ತಿದ್ದಲ್ಲಿ ಕೆಇಬಿ ಅಧಿಕಾರಿಗಳು ಅದನ್ನು ಪ್ರಮಾಣೀಕರಿಸಬೇಕು. ಕೇಂದ್ರಗಳಲ್ಲಿ ಬಹು ಆಯ್ಕೆ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಸಾಮೂಹಿಕ ನಕಲು ನಡೆಯುವ ಸಾಧ್ಯತೆಗಳಿದ್ದು, ಅದಕ್ಕೆ ಎಲ್ಲೂ ಅವಕಾಶ ಲಭಿಸದಂತೆ ಕ್ರಮಕೈಗೊಳ್ಳಬೇಕು ಎಂದರು.

    ಇಲಾಖೆಯ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ ಮಾತನಾಡಿ, ಸಂಪೂರ್ಣ ಪಾರದರ್ಶಕ ನೆಲೆಯಲ್ಲಿ ಪರೀಕ್ಷೆಯನ್ನು ಅತ್ಯಂತ ಶಿಸ್ತುಬದ್ಧವಾಗಿ ಜರುಗಿಸುವಲ್ಲಿ ಎಲ್ಲ ಜಿಲ್ಲೆಗಳ ಡಿಡಿಪಿಐ, ಡಯಟ್ ಪ್ರಾಚಾರ್ಯರು ಹಾಗೂ ಬಿಇಒ ಕಾಳಜಿ ವಹಿಸಬೇಕು ಎಂದರು.

    ಜಂಟಿ ನಿರ್ದೇಶಕರಾದ ಎಂ.ಎಸ್. ಪ್ರಸನ್ನಕುಮಾರ, ರಾಜು ನಾಯ್ಕ, ಮೃತ್ಯುಂಜಯ ಕುಂದಗೋಳ, ಬೆಳಗಾವಿ ವಿಭಾಗದ 59 ತಾಲೂಕುಗಳ ಬಿಇಒ, 9 ಜಿಲ್ಲೆಗಳ ಡಿಡಿಪಿಐ ಹಾಗೂ ಡಯಟ್ ಪ್ರಾಚಾರ್ಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts