More

    ಪರಿಹಾರ ನೀಡದಿದ್ದಲ್ಲಿ ಗ್ರಾಮದಲ್ಲೇ ವಾಸ್ತವ್ಯ

    ಬಾಳೆಹೊನ್ನೂರು: ಖಾಂಡ್ಯ ಹೋಬಳಿಯ ಬೊಗಸೆ ಗ್ರಾಮಕ್ಕೆ ಸೇರಿದ ಗುರು ಪರದೇಶಪ್ಪನವರ ಮಠದ ಗ್ರಾಮವನ್ನು 2001-02ರಲ್ಲಿ ಭದ್ರಾ ಅಭಯಾರಣ್ಯ ಹುಲಿ ಯೋಜನೆಗೆ ಸೇರ್ಪಡೆ ಮಾಡಿ ಸರ್ಕಾರ ಆದೇಶಿಸಿದೆ. ಆದರೆ ಈವರೆಗೂ ಬಹುತೇಕ ಗ್ರಾಮಸ್ಥರಿಗೆ ಪುನರ್ವಸತಿ ಕಲ್ಪಿಸದೆ ತೆರವುಗೊಳಿಸುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಹುಲಿ ಯೋಜನೆಗೆ ಗ್ರಾಮವನ್ನು ಮೀಸಲಿರಿಸಲಾಗಿದೆ. ಜು.19ರಂದು ಭದ್ರಾ ವನ್ಯಜೀವಿ ವಿಭಾಗದ ಸಹಾಯಕ ವಲಯ ಅರಣ್ಯಾಧಿಕಾರಿ, ಹೆಬ್ಬೆ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಪುನರ್ವಸತಿ ಕುರಿತು ಸಭೆ ನಡೆಸಿ ಸಭೆಯಲ್ಲಿ ಈ ಹಿಂದೆ ಪರದೇಶಪ್ಪನವರ ಮಠದ ಗ್ರಾಮದಲ್ಲಿ 20 ಕುಟುಂಬಗಳು ಮಾತ್ರ ಇದ್ದು ಅವರೆಲ್ಲರಿಗೂ ಪರಿಹಾರ ನೀಡಲಾಗಿದ್ದು, ಗ್ರಾಮದಲ್ಲಿ ವಾಸಿಸುತ್ತಿರುವವರು ಕೂಡಲೇ ತೆರವು ಮಾಡಲು ಒತ್ತಾಯಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎದುರು ಅಳಲು ತೋಡಿಕೊಂಡರು.

    ಪರದೇಶಪ್ಪನವರ ಮಠದ ಗ್ರಾಮದಲ್ಲಿ ಈ ಹಿಂದಿನಿಂದಲೂ 32 ಕುಟುಂಬಗಳು ವಾಸವಿದ್ದು, ಈ ಹಿಂದೆ 20ಕ್ಕೂ ಹೆಚ್ಚು ಬಾರಿ ಭದ್ರಾ ಪುನರ್ವಸತಿ ಅನುಷ್ಠಾನ ಸಮಿತಿ ಸಭೆ ಕರೆದಾಗ ಈ ವಿಷಯವನ್ನು ತಿಳಿಸಲಾಗಿದೆ. ಎಲ್ಲ ಕುಟುಂಬಗಳಿಗೂ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಪುನರ್ವಸತಿಗರಿಗೆ ಗುರುತಿಸಿರುವ ಜಾಗ ಡೀಮ್್ಡ ಫಾರೆಸ್ಟ್ ಆಗಿರುವುದರಿಂದ ಕಂದಾಯ ಭೂಮಿ ಹುಡುಕಲು ಚಿಕ್ಕಮಗಳೂರು ಹಾಗೂ ತರೀಕೆರೆ ತಹಸೀಲ್ದಾರ್​ಗೆ ಈ ಹಿಂದೆಯೂ ಮನವಿ ಮಾಡಲಾಗಿತ್ತು ಎಂದು ತಿಳಿಸಿದರು.

    ಗ್ರಾಮದಲ್ಲಿ ಒಟ್ಟು 32 ಕುಟುಂಬಗಳಿದ್ದು ಇದರಲ್ಲಿ 17 ಕುಟುಂಬಗಳಿಗೆ ಈ ಹಿಂದೆ ಜಮೀನು ನೀಡಲಾಗಿದೆ. ಆದರೆ ಅವುಗಳಿಗೆ ಇನ್ನೂ ಕಂದಾಯ ದಾಖಲೆಗಳನ್ನು ನೀಡಿಲ್ಲ. 15 ಕುಟುಂಬಗಳಿಗೆ ಜಮೀನು ಕೊಟ್ಟಿಲ್ಲ. ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯ 9 ಕುಟುಂಬಕ್ಕೆ ಜಮೀನು ಕೊಟ್ಟಿದ್ದರೂ ಮನೆ ಕಟ್ಟಿಸಿ ಕೊಟ್ಟಿಲ್ಲ ಹಾಗೂ ಮನೆಗಳ ಪರಿಹಾರವನ್ನೂ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ವಾಸವಿರುವ ಎಲ್ಲ 32 ಕುಟುಂಬಗಳಿಗೆ ಹಿಂದಿನ ಎಲ್ಲ ಸಭೆಯ ತೀರ್ವನದಂತೆ ಜಮೀನು, ನಿವೇಶನ, ಮನೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಎಲ್ಲ ಗ್ರಾಮಸ್ಥರೂ ಇದೇ ಗ್ರಾಮದಲ್ಲಿ ಉಳಿಯುವ ತೀರ್ಮಾನ ಕೈಗೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಕಡವಂತಿ ಗ್ರಾಪಂ ಸದಸ್ಯ ವಿನೋದ್ ಬೊಗಸೆ, ಗುರು ಪರದೇಶಪ್ಪನವರ ಮಠದ ಅರಣ್ಯ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ವಿರೂಪಾಕ್ಷಯ್ಯ, ಮಧುಕುಮಾರ್, ಷಡಕ್ಷರಿ, ಅಜ್ಜಿಗಯ್ಯ, ಮಂಜುಳಾ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts