More

    ಪರಿಹಾರಾತ್ಮಕ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಿರಿ

    ಬೆಳಗಾವಿ: ಈಗಿನ ಹೊಸ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ ಆರ್ಟಿಫಿಷಿಯಲ್ ಇಂಟಲಿಜನ್ಸ್ ಸೇರಿದಂತೆ ಪ್ರಸ್ತುತ ತಂತ್ರಜ್ಞಾನ ಬಳಕೆಯಿಂದ ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರಗಳನ್ನು ಕಂಡುಹಿಡಿಯುತ್ತ ಪ್ರಯತ್ನಶೀಲರಾಗಿ ಎಂದು ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಪ್ರೊ.ಅಶೋಕ ರಾಯಚೂರ ಸಲಹೆ ನೀಡಿದರು.

    ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಜತ ಮಹೋತ್ಸವ ಅಂಗವಾಗಿ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿ ಸಹಯೋಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ 45ನೇ ಕೆಎಸ್‌ಸಿಟಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸೆಮಿನಾರ್ ಮತ್ತು ಪ್ರೊಜೆಕ್ಟ್ ಪ್ರೋಗ್ರಾಮ್ ಪ್ರದರ್ಶನ ಉದ್ಘಾಟಿಸಿದರು.

    ಜಗತ್ತು ವಿಜ್ಞಾನ, ತಂತ್ರಜ್ಞಾನ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಆದರೆ, ಆ ಅಭಿವೃದ್ಧಿಯಿಂದಲೇ ಜಗತ್ತು ಸಮಸ್ಯೆಗಳನ್ನು ಎದುರಿಸುತ್ತಿದೆ. ಸಂಶೋಧನೆ ಮತ್ತು ನಾವಿನ್ಯತೆಗಳು ಸುಸ್ಥಿರತೆ ಹಾಗೂ ಸಮರ್ಥನೀಯ ತತ್ವಗಳನ್ನು ಒಳಗೊಂಡಿರಬೇಕು.ಅಂದಾಗ ಮಾತ್ರ ನಕಾರತ್ಮಕ ಪ್ರಭಾವ ಬೀರದೇ ನಿಸರ್ಗ ಸ್ನೇಹಿ ಹಾಗೂ ಸಮಾಜ ಸ್ನೇಹಿ ಪರಿಹಾರಗಳಾಗುತ್ತವೆ. ಎಲ್ಲ ಕ್ಷೇತ್ರಗಳಲ್ಲೂ ಸಂಶೋಧನೆಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಸಂಶೋಧನಾ ವಲಯದಲ್ಲಿರುವ ನಾವು ಜೈವಿಕವಾಗಿ ವಿಘಟನೆ ಹೊಂದುವ ಹಾಗೂ ಮರುಬಳಸಲು ಸಾಧ್ಯವಾಗುವಂತಹ ವಸ್ತುಗಳನ್ನು ಸಂಶೋಧಿಸುವಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸಂಶೋಧನೆ ಕೈಗೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿ, ನಮ್ಮ ರಾಷ್ಟ್ರದ ಭೌದ್ಧಿಕ ಶಕ್ತಿ ಅಗಾಧವಾದದ್ದು, ಜಗತ್ತಿನ ಬೇರೆ ಬೇರೆ ಭಾಗದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಭಾರತೀಯರೇ ಮೇರು ಸ್ಥಾನದಲ್ಲಿದ್ದಾರೆ. ಆದರೆ, ಭೌದ್ಧಿಕ ಶಕ್ತಿಯನ್ನು ಸುಸ್ಥಿರ ಹಾಗೂ ಸ್ವಾವಲಂಬಿ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಸದುಪಯೋಗಪಡಿಸಿಕೊಳ್ಳಬೇಕಿದೆ. ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರ ಹೊಸ ಅನ್ವೇಷಣೆ ಹಾಗೂ ಸಂಶೋಧನೆಗಳನ್ನು ಭೌದ್ಧಿಕ ಆಸ್ತಿಗಳನ್ನಾಗಿ ಪರಿವರ್ತಿಸಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡರೆ ರಾಷ್ಟ್ರದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.

    ಶಿಕ್ಷಣ ಕ್ಷೇತ್ರದಲ್ಲಿರುವ ಉತ್ಪಾದನಾ ಹಾಗೂ ಕಟ್ಟಡ ನಿರ್ಮಾಣದ ಹೊಸ ಸಂಶೋಧನೆಗಳ ಮೂಲಕ ಒತ್ತು ಕೊಟ್ಟು ಹೆಚ್ಚು ಅವಕಾಶಗಳನ್ನು ಈ ಕ್ಷೇತ್ರಗಳಲ್ಲಿ ನಿರ್ಮಾಣ ಮಾಡಬೇಕಾಗಿದೆ.

    ಇದು ಭಾರತವನ್ನು ಸೇವೆ ಒದಗಿಸುವ ರಾಷ್ಟ್ರದಿಂದ ಉತ್ಪಾದನಾ ರಾಷ್ಟ್ರವನ್ನಾಗಿ ಪರಿವರ್ತಿಸಿ ಜಾಗತಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಹೇಳಿದರು.

    ಭಾರತೀಯ ವಿಜ್ಞಾನ ಮಂದಿರ ಹಾಗೂ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಿಂದ 25ಕ್ಕೂ ಹೆಚ್ಚು ವಿಷಯ ಪರಿಣತರು ಹಾಗೂ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಇದ್ದರು. ಕುಲಸಚಿವ ಪ್ರೊ.ಆನಂದ ದೇಶಪಾಂಡೆ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts