More

    ಸ್ವಾಮೀಜಿಗಳಿಗೆ ಅಭ್ಯರ್ಥಿಗಳ ಮೊರೆ

    ಕಿರುವಾರ ಎಸ್.ಸುದರ್ಶನ್ ಕೋಲಾರ
    ಲೋಕಸಭಾ ಚುನಾವಣೆಗಳಿಗೆ ಕೆಲವೇ ದಿನಗಳು ಬಾಕಿ ಇದ್ದು, ಕಣದಲ್ಲಿರುವ ಅಭ್ಯರ್ಥಿಗಳು ಗೆಲುವಿಗಾಗಿ ನಾನಾ ಕಸರತ್ತು ನಡೆಸುತ್ತಿದ್ದು, ವಿವಿಧ ಸಮುದಾಯಗಳ ಸ್ವಾಮೀಜಿಗಳ ಮೊರೆಹೋಗಿದ್ದಾರೆ.

    ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವುದು, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿ ಪ್ರಾರ್ಥನೆ ನಡೆಸುವುದರ ಜತೆಗೆ ವಿವಿಧ ಸಮುದಾಯಗಳ ಸ್ವಾಮೀಜಿ, ಧರ್ಮಗುರುಗಳನ್ನು ಭೇಟಿ ಮಾಡುತ್ತಿದ್ದಾರೆ. ಸ್ವಾಮೀಜಿಗಳನ್ನು ಭೇಟಿ ಸಮುದಾಯದ ಬೆಂಬಲ ಕೋರುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಹಾಗೂ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ನಾಮಪತ್ರ ಸಲ್ಲಿಸುವ ಮುಂಚೆ ನಗರ ಹೊರವಲಯದ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯ, ಕ್ಲಾಕ್ ಟವರ್ ಮಸೀದಿ, ಮೆಥೋಡಿಸ್ಟ್ ಚರ್ಚೆ, ಕೋಲಾರಮ್ಮ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

    ಕೆ.ವಿ.ಗೌತಮ್ ಅಭ್ಯರ್ಥಿ ಎಂದು ಹೆಸರು ಪ್ರಕಟಗೊಂಡ ಮರುದಿನವೇ ಜಿಲ್ಲೆಯ ಕುರುಡಮಲೆ ಗ್ರಾಮದ ವಿನಾಯಕ ದೇವಾಲಯಕ್ಕೆ ಸಚಿವರಾದ ಬೈರತಿ ಸುರೇಶ್, ಡಾ.ಎಂ.ಸಿ.ಸುಧಾಕರ್, ಶಾಸಕರಾದ ಕೊತ್ತೂರು ಜಿ.ಮಂಜುನಾಥ್, ಎಸ್.ಎನ್.ನಾರಾಯಣಸ್ವಾಮಿ ಅವರೊಂದಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭಿಸಿದರು. ನಾಮಪತ್ರ ಸಲ್ಲಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಇತರ ನಾಯಕರೊಂದಿಗೆ ಭೇಟಿ ನೀಡಿ, ಪೂಜೆ, ಅರ್ಚನೆ ಮಾಡಿ ಗೆಲುವಿಗಾಗಿ ಪ್ರಾರ್ಥಿಸಿದ್ದರು.

    ಅದೇ ರೀತಿ ಮಲ್ಲೇಶ್ ಬಾಬು ಅವರು ನಿವಾಸದಲ್ಲೇ ಮನೆ ದೇವರಿಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು. ಅಲ್ಲದೆ ಸಮುದಾಯದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಪ್ರಚಾರಕ್ಕೆ ಇಳಿದಿದ್ದಾರೆ. ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಶಾಸಕರಾದ ಶ್ರೀನಿವಾಸಪುರ ಜಿ.ಕೆ.ವೆಂಕಟಶಿವಾರೆಡ್ಡಿ, ಮುಳಬಾಗಿಲು ಸಮೃದ್ಧಿ ಮಂಜುನಾಥ್, ಶಿಡ್ಲಘಟ್ಟ ರವಿಕುಮಾರ್, ಎಂಎಲ್ಸಿ ಇಂಚರ ಗೋವಿಂದರಾಜು ಹಾಗೂ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಜಿಲ್ಲಾಧ್ಯಕ್ಷೆ ಗಾಯಿತ್ರಿ ಮುತ್ತಪ್ಪ, ಮುಖಂಡರಾದ ರಾಮೇಗೌಡ, ಸಿಎಂಆರ್ ಶ್ರೀನಾಥ್, ವಕ್ಕಲೇರಿ ರಾಮು ಮುಂತಾದವರು ಸಾಥ್ ನೀಡುತ್ತಿದ್ದಾರೆ.

    ಇದೀಗ ಯಾವುದೇ ಚುನಾವಣೆಗಳು ಬಂದರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮತ್ತು ಪ್ರಚಾರ ಪ್ರಾರಂಭಿಸುವ ಮುನ್ನ ದೇವಾಲಯಗಳಿಗೆ ಭೇಟಿ ಪೂಜೆ ಸಲ್ಲಿಸುವುದು ಸಾಮಾನ್ಯವಾಗಿತ್ತು. ಆದರೆ ಈಗ ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳನ್ನು ಭೇಟಿ ಮಾಡುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಸ್ಥಳೀಯ ಮುಖಂಡರ ಸಾಥ್
    ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಬುಧವಾರ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಅಶೀರ್ವಾದ ಪಡೆದಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಆರ್.ಅಶೋಕ, ಮಾಜಿ ಸಚಿವರಾದ ಡಾ.ಕೆ.ಸುಧಾಕರ್, ವಿ.ಸೋಮಣ್ಣ ಇದ್ದರು. ಇವರೊಂದಿಗೆ ವಿವಿಧ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿಗಳು ಸಹ ಇದ್ದರು. ಕೋಲಾರ ಕ್ಷೇತ್ರದ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಅವರ ಜತೆಗೆ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಚೌಡರೆಡ್ಡಿ ಭೇಟಿ ನೀಡಿದ್ದು, ಸಮುದಾಯದ ಮತಗಳನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಚರ್ಚೆ ಆಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

    ಒಕ್ಕಲಿಗರ ಮತಗಳಿಸಲು ಚರ್ಚೆ
    ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಒಕ್ಕಲಿಗ ಸಮುದಾಯದ ಸ್ವಾಮೀಜಿ ಆಗಿದ್ದು, ರಾಜ್ಯದ ವಿವಿಧ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿಗಳು ಬುಧವಾರ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

    ಬಲಗೈ ಮುಖಂಡರ ಸಭೆಗೆ ಸಿದ್ಧತೆ
    ಎಂ.ಮಲ್ಲೇಶ್‌ ಬಾಬು ಅವರು ಭೋವಿ ಸಮುದಾಯಕ್ಕೆ ಸೇರಿದವರಾಗಿದ್ದು, ಅತಿ ಹೆಚ್ಚು ಮತದಾರರು ಇರುವ ಒಕ್ಕಲಿಗ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಮತದಾರರನ್ನು ಸೆಳೆಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
    ಪ್ರತಿದಿನ ಪ್ರಚಾರ ಸಭೆಗಳು ಮುಗಿದ ನಂತರ ಸಂಜೆ ವಿವಿಧ ಸಮುದಾಯದಗಳ ಮುಖಂಡರನ್ನು ಅಭ್ಯರ್ಥಿ ಮಲ್ಲೇಶ್ ಬಾಬು ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗೆ ಲೋಕಸಭೆ ವ್ಯಾಪ್ತಿಯ ಉಭಯ ಪಕ್ಷಗಳ ಮುಖಂಡರ ಚರ್ಚೆ ನಡೆಸಿ ಬಲಗೈ ಸಮುದಾಯದ ಮುಖಂಡರ ಸಮ್ಮೇಳನ ನಡೆಸಲು ತೀರ್ಮಾನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts