More

    ಪರಿಹಾರವಿಲ್ಲದೆ ರೈತರಿಗೆ ಕಷ್ಟ

    ಕಾರವಾರ: ಜಿಲ್ಲೆಯ ಮಲೆನಾಡು ಹಾಗೂ ಕರಾವಳಿಯ ತೋಟದ ಬೆಳೆಗಳಿಗೆ ಕಾಡು ಪ್ರಾಣಿಗಳ ಕಾಟ ಹೆಚ್ಚಿದೆ. ಆದರೆ, ಇದಕ್ಕೆ ಪರಿಹಾರ ನೀಡುವಲ್ಲಿ ಮಾತ್ರ ಅರಣ್ಯ ಇಲಾಖೆ ದ್ವಂದ್ವ ನಿಲುವು ಪ್ರದರ್ಶಿಸುತ್ತಿದೆ.

    ಶಿರಸಿ, ಸಿದ್ದಾಪುರ, ಯಲ್ಲಾಪುರ, ಕುಮಟಾ, ಹೊನ್ನಾವರ ತಾಲೂಕುಗಳ ನೂರಾರು ಎಕರೆ ಅಡಕೆ,ಬಾಳೆ ತೆಂಗಿನ ತೋಟಗಳಿಗೆ ಮಂಗಗಳು ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿವೆ. ಇನ್ನೂ ಘಟ್ಟಿ ಕಾಯಿಯಾಗದ ಅಡಕೆ ಮಿಳ್ಳೆ (ಎಳೆಯ ಮಿಡಿ)ಸಿಹಿಯಾಗುವುದರಿಂದ ಅವುಗಳನ್ನು ತಿಂದು ಬಿಸಾಕುತ್ತಿವೆ. ಒಬ್ಬೊಬ್ಬರ ತೋಟದಲ್ಲಿ ದಿನಕ್ಕೆ ಹತ್ತಾರು ಕೆಜಿ ಅಡಕೆಯನ್ನು ಮಂಗಗಳ ಗುಂಪು ಕಿತ್ತು ಅರೆಬರೆ ತಿಂದು ನಾಶ ಮಾಡುತ್ತಿವೆ. ಕರಾವಳಿಯಲ್ಲಿ ತೆಂಗಿನ ಮಿಳ್ಳೆಗಳಿಗೂ ಇದೇ ಪರಿಸ್ಥಿತಿ ಇದೆ. ಇದನ್ನು ನೋಡಿ ಬೆಳೆಗಾರರು ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ವರ್ಷದ ಅಂತ್ಯಕ್ಕೆ ಕ್ವಿಂಟಾಲ್​ಗಟ್ಟಲೆ ಅಡಕೆ, ನೂರಾರು ತೆಂಗಿನ ಕಾಯಿ ಮಂಗಗಳಿಂದಲೇ ನಾಶವಾಗುತ್ತದೆ ಎಂಬುದು ಕೃಷಿಕರ ಗೋಳು.

    ರಿಹಾರ ನೀಡುವಲ್ಲಿ ಗೊಂದಲ: ಹೊನ್ನಾವರದಲ್ಲಿ ಅಡಕೆ, ತೆಂಗಿನ ಮಿಡಿ ಮಂಗಗಳಿಂದ ಹಾನಿಯಾದರೂ ಪರಿಹಾರ ನೀಡಲಾಗುತ್ತಿದೆ. ಅರಣ್ಯಾಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಹಾನಿಯ ಮೌಲ್ಯಮಾಪನ ಮಾಡುತ್ತಾರೆ. ಅಡಕೆ, ಬಾಳೆ ತೆಂಗಿನ ಸಸಿ ಹಾನಿಯಾದರೆ ಅದಕ್ಕೆ ಒಂದು ಸಸಿಗೆ ಇಂತಿಷ್ಟು ಎಂದು ಬೆಲೆ ಸರ್ಕಾರವೇ ನಿಗದಿ ಮಾಡಿದ್ದು, ಅದರಂತೆ ಪರಿಹಾರ ನೀಡಲಾಗುತ್ತಿದೆ ಎಂಬುದು ಹೊನ್ನಾವರ ಡಿಎಫ್​ಒ ಗಣಪತಿ ಅವರ ಅಭಿಪ್ರಾಯ.

    ಆದರೆ, ಶಿರಸಿ ಅರಣ್ಯ ವಿಭಾಗದಲ್ಲಿ ಅಡಕೆ ಅಥವಾ ಬೇರ್ಯಾವುದೇ ಬೆಳೆ ಮಂಗಗಳಿಂದ ಹಾನಿಯಾದರೆ ಅದಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರವೇ ಇಲ್ಲ ಎನ್ನುತ್ತಾರೆ ಶಿರಸಿ ಡಿಎಫ್​ಒ ಎಸ್.ಜಿ.ಹೆಗಡೆ. ಒಂದೇ ಜಿಲ್ಲೆಯಲ್ಲಿ ಒಂದು ಅರಣ್ಯ ವಿಭಾಗದಲ್ಲಿ ಸಿಗುತ್ತಿರುವ ಪರಿಹಾರ ಇನ್ನೊಂದೆಡೆ ಏಕಿಲ್ಲ ಎಂಬುದು ಬೆಳೆಗಾರರ ಪ್ರಶ್ನೆ.

    ಹಣದ ಕೊರತೆ?: ಕಾಡು ಪ್ರಣಿಗಳಿಂದ ಹಾನಿಯಾದ ಬಗ್ಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ ಹೊನ್ನಾವರ ಭಾಗದ ಕೆಲವು ಬೆಳೆಗಾರರು ಪರಿಹಾರಕ್ಕಾಗಿ ಕಾದು ಕುಳಿತಿದ್ದಾರೆ. ಅರ್ಜಿ ಸಲ್ಲಿಸಿ ನಾಲ್ಕು ತಿಂಗಳು ಕಳೆದಿದೆ. ಅರಣ್ಯಾಧಿಕಾರಿಗಳು ಬಂದು ಸ್ಥಳ ಮಹಜರು ಮಾಡಿಕೊಂಡು ಹೋಗಿದ್ದಾರೆ. ಆದರೆ, ಆರ್​ಎಫ್​ಒ ಕಚೇರಿಗೆ ಪರಿಹಾರ ಕೇಳಲು ಹೋದರೆ, ಹಣ ಬಂದಿಲ್ಲ ಎಂಬ ಉತ್ತರ ಬರುತ್ತದೆ ಎಂಬುದು ಕತಗಾಲದ ಕೃಷಿಕರೊಬ್ಬರ ಗೋಳು.

    ಮಂಗನ ಹಾವಳಿಯಿಂದ ಅಡಕೆ ಮಿಳ್ಳೆ ನಾಶವಾಗುತ್ತಿರುವ ಕುರಿತು ನಿತ್ಯ ಬೆಳೆಗಾರರು ದೂರುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಅದಕ್ಕೆ ಪರಿಹಾರ ನೀಡುತ್ತಿಲ್ಲ. ಗಿಡ ನಾಶವಾದರೆ ಪರಿಹಾರ ನೀಡುವಂತೆ ಬೆಳೆ ನಾಶಕ್ಕೂ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಲಾಗುವುದು.
    ನಾಗರಾಜ ನಾಯ್ಕ ಬೇಡ್ಕಣಿ ಜಿಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts