More

    ಪರಿಸ್ಥಿತಿ ಸೂಕ್ಷ್ಮವಾಗಿ ನಿಭಾಯಿಸಿ

    ಹಾವೇರಿ: ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೇರೆಯರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಅಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಲು ಸಿದ್ಧರಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

    ಬೆಂಗಳೂರಿನ ತಮ್ಮ ನಿವಾಸದಿಂದ ಮಂಗಳವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಜಿಲ್ಲೆಯ ಕರೊನಾ ಸ್ಥಿತಿಗತಿ ಹಾಗೂ ಲಾಕ್​ಡೌನ್ ಸಡಿಲಿಕೆ ನಂತರದ ವಿವರ ಪಡೆದುಕೊಂಡರು.

    ಜಿಲ್ಲಾಸ್ಪತ್ರೆಯಲ್ಲಿ ಆಂತರಿಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಿ. ಅಗತ್ಯ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಸೌಲಭ್ಯ ಬಲಪಡಿಸಿಕೊಳ್ಳಬೇಕು. ಕನಿಷ್ಠ 3 ಸಾವಿರ ಪಿಪಿಇ ಕಿಟ್​ಗಳನ್ನು ತರಿಸಿಕೊಳ್ಳಲು ಇಂದೇ ಪ್ರಸ್ತಾವನೆ ಸಲ್ಲಿಸಿ. ತಕ್ಷಣಕ್ಕೆ 1ಸಾವಿರ ಗುಣಮಟ್ಟದ ಪಿಪಿಇ ಕಿಟ್​ಗಳನ್ನು ಖರೀದಿಸಿ. ಮಾಸ್ಕ್, ಸ್ಯಾನಿಟೈಸರ್ ಸೇರಿ ಯಾವುದೇ ಕೊರತೆಯಾಗಬಾರದು. ಜಿಲ್ಲಾಸ್ಪತ್ರೆಯಲ್ಲಿ ಈಗಿರುವ ಕೇಂದ್ರೀಕೃತ ಆಕ್ಸಿಜನ್ ಪೂರೈಕೆಯನ್ನು 30 ಬೆಡ್​ಗಳಿಂದ 50ಬೆಡ್​ಗಳಿಗೆ ಹೆಚ್ಚಿಸಬೇಕು. ಈ ಬಗ್ಗೆ ತಕ್ಷಣ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ತಾಲೂಕು ಆಸ್ಪತ್ರೆಗಳಿಗೂ ಮಾಸ್ಕ್, ಸ್ಯಾನಿಟೈಸರ್, ಕರೊನಾ ಸುರಕ್ಷಾ ಕಿಟ್​ಗಳನ್ನು ಹೆಚ್ಚುವರಿಯಾಗಿ ಪೂರೈಸಿ ಎಂದು ಡಿಎಚ್​ಒಗೆ ತಿಳಿಸಿದರು.

    ‘ಶಿಗ್ಗಾಂವಿ ಹಾಗೂ ಸವಣೂರ ತಾಲೂಕಿನಲ್ಲಿ ವೈದ್ಯಾಧಿಕಾರಿಗಳೇ ಖುದ್ದಾಗಿ ಮನೆ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಬೇಕು. ಸವಣೂರಿನಲ್ಲಿ ಫಿವರ್ ಕ್ಲಿನಿಕ್ ಸ್ಥಾಪಿಸಿ, ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ. ಕನಿಷ್ಠ 20ಬೆಡ್​ಗಳ ಕೇಂದ್ರೀಕೃತ ಆಕ್ಸಿಜನ್ ವ್ಯವಸ್ಥೆಯ ವಾರ್ಡ್​ಗಳನ್ನು ಸಿದ್ಧಮಾಡಿಕೊಳ್ಳಬೇಕು. ಸೀಲ್​ಡೌನ್ ಪ್ರದೇಶದಲ್ಲಿ ನಿಯಮಿತವಾಗಿ ಚರಂಡಿಗಳ ಸ್ವಚ್ಛತೆ, ಔಷಧ ಸಿಂಪಡಣೆ, ಅಗತ್ಯವಿದ್ದರೆ ಅಗ್ನಿಶಾಮಕ ವಾಹನ ಬಳಿಸಿ ಔಷಧ ಸಿಂಪಡಣೆಗೆ ಕ್ರಮವಹಿಸಿ. ಈ ಪ್ರದೇಶವನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಿ. ಸೋಂಕು ಹೆಚ್ಚಾಗದಂತೆ ಗರಿಷ್ಠ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ, ಸಮನ್ವಯತೆಯಿಂದ ಪರಿಸ್ಥಿತಿಯನ್ನು ಎದುರಿಸಿ. ಯಾವುದೇ ಸೌಕರ್ಯಗಳು ಬೇಕಾದರೂ ನೇರವಾಗಿ ನನ್ನೊಂದಿಗೆ ಮಾತನಾಡಿ’ ಎಂದರು.

    ಜಿಲ್ಲೆಯ ಚೆಕ್​ಪೋಸ್ಟ್​ಗಳನ್ನು ಬಿಗಿಗೊಳಿಸಿ, ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಿ. ಯಾವುದೇ ದೂರುಗಳಿಗೂ ತಲೆಕೆಡಿಸಿಕೊಳ್ಳಬೇಡಿ. ಪಾಸ್ ಇದ್ದವರಿಗೆ ಮಾತ್ರ ಗಡಿಯೊಳಗೆ ಪ್ರವೇಶ ನೀಡಿ. ಪ್ರತಿ ವಾಹನದ ಚಲನವಲನಗಳು ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಬೇಕು. ಜಿಲ್ಲೆಯಲ್ಲಿ ಸ್ಥಾಪಿಸಲಾದ ಎಲ್ಲ 24ಚೆಕ್​ಪೋಸ್ಟ್​ಗಳಲ್ಲಿ ತಪಾಸಣೆ ಬಿಗಿಗೊಳಿಸಬೇಕು. ಪ್ರತಿ ವಾಹನದ ವಿವರ, ವಾಹನ ಚಾಲಕನ ಹೆಸರು, ಕ್ಲೀನರ್ ಹೆಸರು, ವಾಹನ ಮಾಲೀಕನ ಹೆಸರು, ವಿಳಾಸ ಮತ್ತು ಮೊಬೈಲ್ ಸಂಖ್ಯೆಗಳನ್ನು ಪಡೆದು ದಾಖಲು ಮಾಡಿಕೊಳ್ಳಬೇಕು ಎಂದರು.

    ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ.ಜಿ. ದೇವರಾಜ್, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿ ಅನ್ನಪೂರ್ಣ ಮುದಕಮ್ಮನವರ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts