More

    ಪರಿಸರ ಸಮತೋಲನಕ್ಕಾಗಿ ಸಸಿ ನೆಡಿ

    ಹಾನಗಲ್ಲ: ಅಭಿವೃದ್ಧಿ ಹೆಸರಿನಲ್ಲಿ ಗಿಡ- ಮರ ಕಡಿದು ನಾಶಪಡಿಸುತ್ತಿದ್ದೇವೆ. ಪರಿಸರ ಸಮತೋಲನದ ದೃಷ್ಟಿಯಿಂದ ಸಸಿಗಳನ್ನು ನೆಟ್ಟು ಬೆಳೆಸುವ ಅಗತ್ಯವಿದೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಸಿ. ಅನಿತಾ ಡಿಸೋಜಾ ಹೇಳಿದರು.

    ತಾಲೂಕಿನ ದೇವರಹೊಸಪೇಟೆ ಗ್ರಾಮದಲ್ಲಿ ಜನವೇದಿಕೆ, ರೋಶನಿ ಸಮಾಜ ಸೇವಾ ಸಂಸ್ಥೆ, ಯಳವಟ್ಟಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಾನವ ಸಮಾಜ ಹೇಗಿರಬೇಕೆಂದು ನಾಡಿಗೆ ಸಂದೇಶ ನೀಡಿದ ಪಂ. ಪುಟ್ಟರಾಜ ಗವಾಯಿಗಳ ಹುಟ್ಟೂರಲ್ಲಿ ವನಮಹೋತ್ಸವ ಕಾರ್ಯಕ್ರಮ ಕೈಗೊಂಡಿರುವುದು ಅರ್ಥಪೂರ್ಣವಾಗಿದೆ. ಗಿಡ- ಮರ ಬೆಳೆಸಲು ಸರ್ಕಾರ ಹಾಕಿಕೊಂಡ ಕ್ರಿಯಾ ಯೋಜನೆಗಳು ಸಾಲುತ್ತಿಲ್ಲ. ಪರಿಸರ ರಕ್ಷಣೆಗೆ ಇನ್ನಷ್ಟು ಆದ್ಯತೆ ನೀಡಬೇಕಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಯಳವಟ್ಟಿ ಗ್ರಾಪಂ ಅಧ್ಯಕ್ಷ ಮರಿಗೌಡ್ರ ಪಾಟೀಲ ಮಾತನಾಡಿ, ಮನೆಯಲ್ಲಿ ಮಕ್ಕಳ ಪೋಷಣೆ ಮಾಡಿದಂತೆೆ ಗಿಡ- ಮರಗಳನ್ನು ಪೋಷಿಸಬೇಕು. ಕಾಡು ಬೆಳೆಸದಿದ್ದರೆ ಅತಿವೃಷ್ಟಿ- ಅನಾವೃಷ್ಟಿಯಂಥ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಸಮಾಜದ ಒಳಿತಿಗಾಗಿ ಸರ್ಕಾರ ಪ್ರತಿವರ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸುತ್ತದೆ. ಅವುಗಳನ್ನು ಉಳಿಸುವಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದರು.

    ಹಾನಗಲ್ಲ ಉಪವಲಯ ಅರಣ್ಯಾಧಿಕಾರಿ ಪೂಜಾಶ್ರೀ ಗೌಡ ಮಾತನಾಡಿ, ಪರಿಸರದ ಅವನತಿಗೆ ನಾವುಗಳೇ ಕಾರಣರಾಗಿದ್ದೇವೆ. ಅಗತ್ಯಕ್ಕೆ ಬಳಸಿದಷ್ಟು ಕಾಡನ್ನು ಮರುಸೃಷ್ಟಿಸುವತ್ತ ಮನಸ್ಸು ಮಾಡುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಎದುರಿಸಿದ್ದೇವೆ. ಹೆಚ್ಚು ಆಮ್ಲಜನಕ ಹೊರಸೂಸುವ ಅರಳಿ ಮರಗಳನ್ನು ರಕ್ಷಿಸಿದರೆ ಉಸಿರಾಟ ಸಮಸ್ಯೆ ಒಂದಷ್ಟು ನೀಗಿಸಬಹುದಾಗಿದೆ ಎಂದರು.

    ಎಪಿಎಂಸಿ ಮಾಜಿ ಅಧ್ಯಕ್ಷ ಶೇಖಪ್ಪ ಮಹಾರಾಜಪೇಟೆ, ರುದ್ರಯ್ಯ ವೆಂಕಟಾಪುರಮಠ, ಕುಮಾರ ಕ್ಯಾಬಳ್ಳಿ, ಗ್ರಾಪಂ ಸದಸ್ಯರಾದ ಹೊನ್ನಪ್ಪ ಹೊನ್ನಪ್ಪನವರ, ನಾರಾಯಣ ಬಡಿಗೇರ, ಪಿಡಿಒ ಚಂದ್ರಕಾಂತ ವಡ್ಡರ, ಅರಣ್ಯ ರಕ್ಷಕ ಧರೆಪ್ಪ ಆಳೂರ, ಸುರೇಶ ಮಹಾರಾಜಪೇಟೆ, ಜನವೇದಿಕೆ ಮುಖಂಡ ಪಾಲಾಕ್ಷಯ್ಯ ಹಿರೇಮಠ, ಮಂಗಳಾ ಬೆಣ್ಣಿ, ಮಲ್ಲಮ್ಮ ಕ್ಯಾಬಳ್ಳಿ, ನೀಲಮ್ಮ ಹರಿಜನ ಇದ್ದರು. ಬಸವರಾಜ ಕೊತಂಬ್ರಿ, ಕೆ.ಎಫ್. ನಾಯ್ಕರ್ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts