More

    ಪರಿಶಿಷ್ಟರು ಗ್ರಂಥಾಲಯ ನಿರ್ಮಾಣಕ್ಕೂ ವಹಿಸಲಿ ಆಸ್ಥೆ – ಷಡಕ್ಷರಮುನಿ ಸ್ವಾಮೀಜಿ

    ದಾವಣಗೆರೆ: ಪರಿಶಿಷ್ಟರು ದೇವಾಲಯ ನಿರ್ಮಾಣಕ್ಕೆ ತೋರುವ ಆಸಕ್ತಿಯನ್ನು ತಾವಿರುವ ಊರಿನಲ್ಲಿ ಗ್ರಂಥಾಲಯ ಸ್ಥಾಪಿಸಲು ಮುಂದಾಗಬೇಕು ಎಂದು ಹಿರಿಯೂರಿನ ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
    ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಶುಕ್ರವಾರ, ನೂತನವಾಗಿ ನಿರ್ಮಿಸಿದ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
    ವಿದ್ಯೆ ಮತ್ತು ಜ್ಞಾನದ ಬಲದಿಂದ ಮಾತ್ರ ಬದುಕು ಕಟ್ಟಿಕೊಳ್ಳಬಹುದು. ಆದರೆ ಭಾವನೆಗಳು ನಮ್ಮ ಬದುಕಿನಲ್ಲಿ ಕೆಲ ಸಂದರ್ಭಕ್ಕೆ ಮಾತ್ರ ಇರಬೇಕು ಎಂದು ಶ್ರೀಗಳು ಅಭಿಪ್ರಾಯ ಪಟ್ಟರು.
    ಇಂದು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಇದೆ. ಅದನ್ನು ಬುದ್ದಿಬಲ ಮತ್ತು ಪರಿಶ್ರಮದಿಂದ ಮಾತ್ರ ಗೆಲ್ಲಲು ಸಾಧ್ಯ. ಹಾಗಾಗಿ ಜೀವನದಲ್ಲಿ ಗೆಲ್ಲುವ ಕಡೆ ನಾವು ಹೆಚ್ಚಿನ ಆಸಕ್ತಿ ತೋರಬೇಕೆಂದು ಶ್ರೀಗಳು ಹೇಳಿದರು.
    ಗುರು ಹಿರಿಯರಲ್ಲಿ ಗೌರವವಿಟ್ಟು, ಪರಸ್ಪರ ಪ್ರೀತಿ ವಿಶ್ವಾಸ, ಶಾಂತಿ-ಸೌಹಾರ್ದ, ಸಾಮರಸ್ಯದಿಂದ ಬದುಕು ನಡೆಸಿದರೆ ನಾವು ನಂಬಿದ ದೇವರನ್ನು ಅಲ್ಲೇ ಕಾಣಬಹುದು ಎಂದು ಸ್ವಾಮೀಜಿ ತಿಳಿಸಿದರು.
    ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಹಿಂದಿನ ಕಾಲದ ದೇವಸ್ಥಾನಗಳು ಪಾಠಶಾಲೆ, ಆಸ್ಪತ್ರೆ, ನ್ಯಾಯ ಒದಗಿಸುವ ಕೇಂದ್ರ ಹಾಗೂ ಅನ್ನ ನೀಡುವ ಸ್ಥಳಗಳಾಗಿದ್ದವು ಆಸ್ತಿಕ, ನಾಸ್ತಿಕತೆಯ ತಾಕಲಾಟದ ಈ ದಿನದಲ್ಲೂ ದೇವಸ್ಥಾನಗಳು ನಿರ್ಮಾಣಗೊಳ್ಳುತ್ತಿವೆ ಎಂದು ಹೇಳಿದರು.
    ಧಾರ್ಮಿಕ ಸಂಸ್ಕಾರ-ಆಚರಣೆಗಳಿಂದಾಗಿ ಮಠ-ಮಂದಿರಗಳು ನೆಲೆ ನಿಲ್ಲಲು ಸಾಧ್ಯವಾಗಿದೆ. ಎಲ್ಲರ ಹೃದಯದಲ್ಲೂ ಭಗವಂತ ನೆಲೆಸಿದ್ದಾನೆ ಅದನ್ನು ಸಾಕ್ಷಾತ್ಕಾರಿಸಿಕೊಳ್ಳಲು, ಶ್ರದ್ಧೆ-ಪ್ರಾಮಾಣಿಕತೆಯಿಂದ, ಧಾರ್ಮಿಕ ಮಾರ್ಗದಲ್ಲಿ ಸಾಗಬೇಕೆಂದು ಶ್ರೀಗಳು ತಿಳಿಸಿದರು.
    ಸಮಾರಂಭದಲ್ಲಿ ಕೆ.ಬಿ.ಷಣ್ಮುಖಪ್ಪ, ಕೆ.ಜಿ.ಹನುಮಂತಪ್ಪ, ಹಾಲಪ್ಪ, ಗಂಗಾಧರ್, ಅಂಜಿನಪ್ಪ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts