More

    ಪಪಂ ಗದ್ದುಗೆಗೆ ಪೈಪೋಟಿ

    ನರೇಗಲ್ಲ: ಒಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಗುರುವಾರ ಬಿಡುಗಡೆಯಾಗಿದೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

    17 ಸದಸ್ಯರ ಬಲ ಇರುವ ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿ 12 ಬಿಜೆಪಿ, 2 ಪಕ್ಷೇತರ, 3 ಕಾಂಗ್ರೆಸ್ ಸದಸ್ಯರಿದ್ದು ಬಿಜೆಪಿ ಸ್ಪಷ್ಟ ಬಹುಮತ ಹೊಂದಿದೆ. 18 ತಿಂಗಳು ಹಿಂದೆಯೇ ಚುಣಾವಣೆ ನಡೆದರೂ ಯಾವುದೇ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು ವಾರ್ಡ್​ನ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗುತ್ತಿಲ್ಲ ಎಂದು ದೂರುತ್ತಿದ್ದ ಸದಸ್ಯರಿಗೆ ಮೀಸಲಾತಿ ಹೊಸ ಹುರುಪು ಮೂಡಿಸಿದೆ.

    ಈ ಹಿಂದೆ ಪ್ರಕಟವಾಗಿದ್ದ ಮೀಸಲಾತಿ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಇದನ್ನು ತಿದ್ದುಪಡಿ ಮಾಡಿ ಈಗ ಹೊಸದಾಗಿ ಪಟ್ಟಿ ಬಿಡುಗಡೆಯಾಗಿದೆ. ಹೊಸ ಮೀಸಲಾತಿ ಪಟ್ಟಿ ಅನುಸಾರ ಕೆಲವರು ತಮಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಕಾಯಂ ಎಂಬ ಕನಸು ಕಾಣುತ್ತಿದ್ದಾರೆ.

    ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಬಹುಮತ ಹೊಂದಿದ್ದು, ಸಾಮಾನ್ಯ ಮಹಿಳಾ ಮೀಸಲಾತಿಯಲ್ಲಿ ಚುನಾಯಿತರಾದ 8ನೇ ವಾರ್ಡ್​ನ ವಿಶಾಲಾಕ್ಷಿ ಹೊಸಮನಿ, 9ನೇ ವಾರ್ಡ್​ನ ಜ್ಯೋತಿ ಪಾಯಪ್ಪಗೌಡ್ರ, 10ನೇ ವಾರ್ಡ್​ನ ಸುಮಿತ್ರಾ ಕಮಲಾಪೂರ, 11ನೇ ವಾರ್ಡ್​ನ ಪಕ್ಷೇತರ ಅಭ್ಯರ್ಥಿ (ಬಿಜೆಪಿ ಸೇರಿದ್ದಾರೆ) ಮಂಜುಳಾ ಹುರಳಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಆಯ್ಕೆಯಾಗಿರುವ 16ನೇ ವಾರ್ಡ್​ನ ಸದಸ್ಯೆ ಅಕ್ಕಮ್ಮ ಮಣ್ಣೊಡ್ಡರ ಸಹ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

    ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮಲ್ಲಿಕಾರ್ಜುನ ಬೂಮನಗೌಡ್ರ, ಶ್ರೀಶೈಲಪ್ಪ ಬಂಡಿಹಾಳ, ಮಲಿಕ್​ಸಾಬ್ ರೋಣದ, ಫಕೀರಪ್ಪ ಮಳ್ಳಿ, ಕುಮಾರಸ್ವಾಮಿ ಕೋರಧಾನ್ಯಮಠ ತೆರೆ ಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

    ಈ ಹಿಂದೆ ಇದ್ದ ಮೀಸಲಾತಿಯನ್ನು ಬದಲಾಯಿಸಿರುವುದು ಕೆಲ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದ್ದು, ಮೀಸಲಾತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ಚರ್ಚೆ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts