More

    ಪಪಂ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾಯಿಸಿ

    ಹೊನ್ನಾವರ: ಇಲ್ಲಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿಯ ಆಕಾಂಕ್ಷಿಗಳಲ್ಲಿ ಪೈಪೋಟಿ ನಡೆದಿದೆ. ಈ ನಡುವೆ ಅಧ್ಯಕ್ಷ ಹುದ್ದೆಗೆ ಪ್ರಕಟವಾಗಿರುವ ಹಿಂದುಳಿದ ‘ಅ’ ವರ್ಗ ಮೀಸಲಾತಿಯನ್ನೇ ಬದಲಾಯಿಸಬೇಕು ಎಂದು ಒಬ್ಬ ಸದಸ್ಯೆ ಹೈಕೋರ್ಟ್ ಮೊರೆ ಹೋಗಿರುವುದು ಕುತೂಹಲ ಮೂಡಿಸಿದೆ.

    ಪಟ್ಟಣ ಪಂಚಾಯಿತಿಯ 20 ವಾರ್ಡ್​ಗಳಲ್ಲಿ 12 ಸ್ಥಾನ ಪಡೆಯುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮತ್ತು ಹಿಂದುಳಿದ ವರ್ಗದ ಸದಸ್ಯರ ನಡುವೆ ಆಗಿನಿಂದಲೇ ಪೈಪೋಟಿ ನಡೆದಿತ್ತು. ಆದರೆ, ವಾರದ ಹಿಂದಷ್ಟೆ ಅಧ್ಯಕ್ಷ ಸ್ಥಾನ ಹಿಂದುಳಿದ ‘ಅ’ ವರ್ಗ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಎಂದು ಮೀಸಲಾತಿ ಪ್ರಕಟವಾಗಿದೆ. ಇದು ಸಾಮಾನ್ಯ ವರ್ಗದ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ, ಅಧ್ಯಕ್ಷ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದ ಹಿಂದುಳಿದ ವರ್ಗದ ಶಿವರಾಜ ಮೇಸ್ತ ಅವರ ಹೆಸರು ಮುಂಚೂಣಿಗೆ ಬಂದಿತ್ತು.

    ಪಪಂನ 12ನೇ ವಾರ್ಡ್​ನಿಂದ ಪಕ್ಷೇತರರಾಗಿ ಆಯ್ಕೆಯಾದ ಸದಸ್ಯೆ ತಾರಾ ಕುಮಾರಸ್ವಾಮಿ ಅವರು ಈಗ ಪ್ರಕಟವಾದ ಮೀಸಲಾತಿ ಬದಲಾಯಿಸಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ತರಬೇಕು ಎಂದು ಹೈಕೋರ್ಟ್​ಗೆ ಮೊರೆ ಹೋಗಿದ್ದಾರೆ. ಇದು ರಾಜಕೀಯ ಪ್ರೇರಿತವಾಗಿದೆ ಎಂದು ಹಿಂದುಳಿದ ವರ್ಗದ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಮೀನುಗಾರ ಸಮುದಾಯದವರು ಅಧ್ಯಕ್ಷ ಗಾದಿಗೆ ಹೋಗಬಾರದೆಂದು ಈ ರೀತಿ ನಾಟಕ ಮಾಡಲು ಮುಂದಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಮೂಲಕ ಅರ್ಜಿ ಹಾಕಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಂದೇಶಗಳು ಹರಿದಾಡುತ್ತಿದೆ. ಪಪಂನಲ್ಲಿ ದೀರ್ಘ ಕಾಲದ ಬಳಿಕ ಬಹುಮತ ಪಡೆದ ಬಿಜೆಪಿಯಲ್ಲಿ ಒಳಜಗಳ ಆರಂಭವಾಗಿದೆ. ಇದರಿಂದಾಗಿ ಇಬ್ಬರ ಜಗಳದಿಂದ ಮೂರನೆಯವರಿಗೆ ಲಾಭವಾಗುವುದೇ? ಎಂಬ ಪ್ರಶ್ನೆ ಮೂಡಿದೆ.

    ಪಕ್ಷೇತರ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅನುದಾನ ಹಂಚಿಕೆ ಮಾಡಲಾಗುತ್ತಿದೆ. ಬಹುಮತ ಬಂದಿದೆ ಎಂದು ಬಿಜೆಪಿ ಸದಸ್ಯರಿಗೆ ಹೆಚ್ಚಿನ ಅನುದಾನ ನೀಡುತ್ತಾರೆ. ಇದರಿಂದ ಬೇಸತ್ತು ನಾನು ಹೈಕೋರ್ಟ್​ಗೆ ಮೊರೆ ಹೋಗಿದ್ದೇನೆ.

    | ತಾರಾ ಕುಮಾರಸ್ವಾಮಿ, ಹೈಕೋರ್ಟ್ ಮೊರೆ ಹೋದ ಪಕ್ಷೇತರ ಸದಸ್ಯೆ

    ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮೀಸಲಾತಿ ಬಂದಿದೆ. ಪಕ್ಷೇತರ ಅಭ್ಯರ್ಥಿಯನ್ನು ಮುಂದೆ ಬಿಟ್ಟು ಸ್ವಹಿತಾಸಕ್ತಿಯುಳ್ಳವರು ಆಟವಾಡಲು ಮುಂದಾಗಿದ್ದಾರೆ. ಇದರಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದಂತಾಗುವುದು.

    | ಶಿವರಾಜ ಮೇಸ್ತ, ಅಧ್ಯಕ್ಷ ಹುದ್ದೆಯ ಆಕಾಂಕ್ಷಿ, ಬಿಜೆಪಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts