More

    ಸದಾ ಕೋಲಿ ಸಮಾಜದ ಜತೆಗಿರುವೆ

    ಕಲಬುರಗಿ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್‌ಟಿ) ಪಟ್ಟಿಗೆ ಸೇರಿಸುವ ಬೇಡಿಕೆ ಬಹಳ ವರ್ಷದಿಂದಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಎಷ್ಟೇ ಕಷ್ಟವಾದರೂ ನಾನು ನಿಮ್ಮ ಜತೆಗಿರುವೆ. ಕಾನೂನು ಪ್ರಕಾರ ಏನು ಹೇಳುತ್ತೀರೋ ಅದನ್ನು ಮಾಡುತ್ತೇನೆ. ನಾನು ರಾಜ್ಯಸಭೆ ಸದಸ್ಯನಾಗಿದ್ದು, ಇತರ ಸದಸ್ಯರಿಗೆ ಒಪ್ಪಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.

    ಎನ್‌ವಿ ಕಾಲೇಜು ಮೈದಾನದಲ್ಲಿ ಕೋಲಿ ಕಬ್ಬಲಿಗ ಸಮಾಜ ಶನಿವಾರ ಸಂಜೆ ಆಯೋಜಿಸಿದ್ದ ಬೃಹತ್ ಸಮಾವೇಶ ಉದ್ಘಾಟಿಸಿದ ಅವರು, ನಾನು ಬೇರೆಯವರಂತೆ ಸುಳ್ಳು ಹೇಳಲ್ಲ. ದೇಶದ ಸಂವಿಧಾನ ಬದಲಾಯಿಸಲು ಬಿಜೆಪಿ ಹುನ್ನಾರ ನಡೆಸುತ್ತಿದ್ದು, ಆ ಪಕ್ಷದವರಿಗೆ ಬಹುಮತ ನೀಡಿದರೆ ಸಂವಿಧಾನ ಉಳಿಯುವುದಿಲ್ಲ. ಅದಕ್ಕೆ ನೀವು ಆಸ್ಪದ ನೀಡಬಾರದು ಎಂದು ಕರೆ ನೀಡಿದರು.

    ದೇಶದ ಅಖಂಡತೆಗೆ ಧಕ್ಕೆ ತರಲು ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಪ್ರಯತ್ನಿಸುತ್ತಿದ್ದು, ಜನರು ಸಂವಿಧಾನ ರಕ್ಷಿಸುವ ದೇಶದ ಒಗ್ಗಟ್ಟು ಉಳಿಸುವ ಪಕ್ಷಕ್ಕೆ ಮತ ನೀಡಬೇಕು. ನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿವೆ. ಕಾರ್ಮಿಕರು, ರೈತರು, ಮಹಿಳೆಯರು, ಬಡವರು ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನಮ್ಮನ್ನು ಸದನದಿಂದ ಹೊರಹಾಕಿ ಕಾನೂನುಗಳನ್ನು ರೂಪಿಸುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

    ಮಾಜಿ ಸಚಿವ ಬಾಬುರಾವ ಚಿಂಚನಸೂರ್ ಮಾತನಾಡಿ, ನನಗೆ ಜೀವನದಲ್ಲಿ ಯಾವುದೇ ಆಸೆಗಳಿಲ್ಲ. ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವುದನ್ನು ನಾನು ನೋಡಬೇಕು. ಸಮಾಜ ಎಸ್‌ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದ ಜಾಧವ್‌ಗೆ ಪಾಠ ಕಲಿಸಬೇಕಿದೆ. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಆಗುವುದು ನಿಶ್ಚಿತ ಎಂದರು.

    ಎAಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದರು. ಸಚಿವರಾದ ರಾಮಲಿಂಗಾರೆಡ್ಡಿ, ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆಕೆಆರ್‌ಡಿಬಿ ಅಧ್ಯಕ್ಷ ಶಾಸಕ ಡಾ.ಅಜಯಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ. ಪಾಟೀಲ್, ಎಂಎಲ್ಸಿ ಬಿ.ಕೆ. ಮೋಹನಕುಮಾರ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲರೆಡ್ಡಿ ಮುದಿರಾಜ, ಪ್ರಮುಖರಾದ ಭೀಮಣ್ಣ ಸಾಲಿ, ಜಯಪ್ರಕಾಶ ಕಮಕನೂರ, ಶರಣಪ್ಪ ಮಾನೇಗಾರ, ಸಾಯಬಣ್ಣ ನಿಲಪ್ಪಗೋಳ, ಶರಣಪ್ಪ ಸುಣಗಾರ, ಸಂದೇಶ ಕಮಕನೂರ, ಬಿ.ಮಾಲಾ, ಸಾಯಬಣ್ಣ ಬೋರಬಂಡ, ಹುಲಿಗೆಪ್ಪ ಕನಕಗಿರಿ, ಬಸವರಾಜ ಹರವಾಳ, ರಮೇಶ ನಾಟೀಕಾರ, ಬಸವರಾಜ ಬೂದಿಹಾಳ, ಶರಣಪ್ಪ ನಾಟೀಕಾರ, ಶಿವಾನಂದ ಹೊನಗುಂಟಿ, ಗುಂಡು ಐನಾಪುರ, ಪ್ರಕಾಶ ಜಮಾದಾರ, ಲಚ್ಚಪ್ಪ ಜಮಾದಾರ, ಬಾಬುರಾವ ಜಮಾದಾರ, ವಸಂತ ನರಿಬೋಳ, ರೇವಣಸಿದ್ದ ಕಮಾನಮನಿ, ಮಲ್ಲಿಕಾರ್ಜುನ ಸಾಹು ಸೇರಿ ಸಹಸ್ರಾರು ಜನರು ಪಾಲ್ಗೊಂಡಿದ್ದರು.

    ಸಮಾಜವನ್ನು ಎಸ್‌ಟಿಗೆ ಸೇರಿಸಲು ಸದನದಲ್ಲಿ ಧ್ವನಿ ಎತ್ತುವಂತೆ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

    ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗುವ ಅವಕಾಶ ಸಿಗಲಿದೆ. ಆಗ ನಮ್ಮ ಸಮಾಜದ ಬೇಡಿಕೆ ಈಡೇರಲಿದೆ. ಎಲ್ಲರೂ ಕಾಂಗ್ರೆಸ್‌ಗೆ ಮತ ನೀಡಬೇಕು. ದಶಕಗಳ ಹೋರಾಟದ ಫಲದಿಂದ ನಮ್ಮ ಸಮುದಾಯ ಎಸ್‌ಟಿಗೆ ಸೇರ್ಪಡೆ ಆಗಲಿದೆ.
    | ತಿಪ್ಪಣ್ಣಪ್ಪ ಕಮಕನೂರ ವಿಧಾನ ಪರಿಷತ್ ಸದಸ್ಯ

    ಗುರುಮಠಕಲ್ ಜನರ ಸ್ಮರಣೆ: ಭ್ರಷ್ಟಾಚಾರ ಮಾಡಿ ದುಡ್ಡು ತಿಂದಿಲ್ಲ. ಹಾಗೆ ಮಾಡಿದ್ದರೆ ಜನರು ೫೦ ವರ್ಷಗಳಿಂದ ನನ್ನನ್ನು ರಾಜಕೀಯದಲ್ಲಿ ಇಡುತ್ತಿರಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು. ರಾಜಕೀಯವಾಗಿ ಉತ್ತಮ ಜನ್ಮ ನೀಡಿ ಭದ್ರ ಬುನಾದಿ ಹಾಕಿದ ಗುರುಮಠಕಲ್ ಜನರನ್ನು ನಾನೆಂದಿಗೂ ಮರೆಯುವುದಿಲ್ಲ. ಅವರ ಜತೆಗೆ ಕಲಬುರಗಿ ಜನರು ಕೂಡ ನಾನು ಮಹತ್ವದ ಸ್ಥಾನ ಪಡೆಯಲು ಕಾರಣ ಎಂದರು.

    ಖರ್ಗೆ ಹೊಗಳಿದ್ದ ಸೇಡಂ:೨೦೦೯ರ ಚುನಾವಣೆಯಲ್ಲಿ ಗೆದ್ದ ನಂತರ ಐದು ವರ್ಷದ ಒಳಗಾಗಿಯೇ ಎಲ್ಲ ಪಕ್ಷದ ಸಹಕಾರ ಮತ್ತು ಬೆಂಬಲದಿಂದ ಆರ್ಟಿಕಲ್ ೩೭೧(ಜೆ) ಜಾರಿಗೊಳಿಸಲಾಯಿತು. ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತ ಸಂಸದ ಬಸವರಾಜ ಪಾಟೀಲ್ ಸೇಡಂ `ಖರ್ಗೆ ಇಲ್ಲದಿದ್ದರೆ ಆರ್ಟಿಕಲ್ ೩೭೧(ಜೆ) ಜಾರಿ ಆಗುತ್ತಿರಲಿಲ್ಲ’ ಎಂದಿದ್ದರು. ಆದರೂ ನಾನು ಇದನ್ನು ಎಲ್ಲೂ ಹೇಳಿಲ್ಲ. ಇದಕ್ಕೆ ನೀವೇ ಕಾರಣ ಎಂದು ಹೇಳಿದರು. ಅಸೂಯೆ ಇದ್ದರೆ ಅಭಿವೃದ್ಧಿ ಕುಂಠಿತವಾಗಲಿದೆ. ೩೭೧(ಜೆ) ಪ್ರಕಾರ ಈ ಭಾಗದ ಎಲ್ಲರಿಗೆ ಅನುಕೂಲವಾಗಿದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲು, ಅಭಿವೃದ್ಧಿಗಾಗಿ ೫೦೦೦ ಕೋಟಿ ರೂ. ವಿಶೇಷ ಅನುದಾನ ದೊರಕಲಿದೆ. ಆದರೂ ನಮ್ಮ ಜನರು ಸಹಕಾರದಿಂದ ಇರದೆ ಪರಸ್ಪರ ಜಗಳವಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts