More

    ಪತ್ರಿಕೋದ್ಯಮ ಎಷ್ಟು ಬದಲಾವಣೆ, ಮಜಲುಗಳನ್ನು ಕಂಡಿದೆಯೋ ಅಷ್ಟೇ ಟೀಕೆಗಳಿಗೂ ಗುರಿಯಾಗಿದೆ, ರಾಜ್ಯ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಭಿಮತ

    ಗೌರಿಬಿದನೂರು: ಪತ್ರಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ವೃತ್ತಿ ಪಾವಿತ್ರತೆ ಕಾಪಾಡಿಕೊಂಡು ಅನ್ಯಾಯವನ್ನು ಬೆಳಕಿಗೆ ತರಬೇಕು ಹಾಗೂ ಜವಾಬ್ದಾರಿಯುತವಾಗಿ ಪರಿಹಾರ ದೊರಕಿಸಿಕೊಡಲು ಯತ್ನಿಸಬೇಕು ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸಲಹೆ ನೀಡಿದರು.

    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನಗರದ ಡಾ.ಎಚ್.ಎನ್ ಕಲಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನ ಮತ್ತು ಕರೊನಾ ವಾರಿಯರ್ಸ್ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    1843 ಜುಲೈ 1ರಂದು ಮಂಗಳೂರು ಸಮಾಚಾರ ಪತ್ರಿಕೆ ಉಮಗವಾಯಿತು. ಅಂದಿನಿಂದ ಪತ್ರಿಕೋದ್ಯಮ ಎಷ್ಟು ಬದಲಾವಣೆ, ಮಜಲುಗಳನ್ನು ಕಂಡಿದೆಯೋ ಅಷ್ಟೇ ಟೀಕೆಗಳಿಗೂ ಗುರಿಯಾಗಿದೆ. ಮುದ್ರಣ ಮಾಧ್ಯಮ ತನ್ನದೇ ಆದ ಚೌಕಟ್ಟನ್ನು ಹೊಂದಿದ್ದರೂ ಆದರೆ ವಿದ್ಯುನ್ಮಾನ ಮಾಧ್ಯಮ ವಿಭಿನ್ನಗೊಳ್ಳುತ್ತಿದ್ದು ಸಮಸ್ಯೆಗಳನ್ನು ವೈಭವೀಕರಿಸುವ ಹಂತಕ್ಕೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಕರೊನಾ ಸಂದರ್ಭದಲ್ಲಿ ಪತ್ರಕರ್ತರು ವಾರಿಯರ್ಸ್‌ಗಳಂತೆ ಕೆಲಸ ಮಾಡಿದ್ದಾರೆ. ಹಲವರು ಸೋಂಕಿನಿಂದ ಪ್ರಾಣಬಿಟ್ಟಿದ್ದಾರೆ. ಈ ಪತ್ರಕರ್ತ ಕುಟುಂಬಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘ, ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಕೊಡಿಸುವ ಜತೆಗೆ ಆಸ್ಪತ್ರೆಯ ಖರ್ಚು ಸಹ ಭರಿಸಲಾಗಿದೆ ಎಂದು ಶಿವಾನಂದ ತಗಡೂರು ತಿಳಿಸಿದರು.

    ಭವನಕ್ಕೆ ನಿವೇಶನ ನೀಡಲು ಸೂಚನೆ: ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಪರಿಗಣಿಸಲಾಗಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದ ತಪ್ಪುಗಳನ್ನು ಆರೋಗ್ಯಕರವಾದ ಟೀಕೆ ಮೂಲಕ ಸರಿಪಡಿಸುವ ಉದ್ದೇಶ ಹೊಂದಲಾಗಿದೆ. ಆದರೆ ಹಳದಿ ಪತ್ರಿಕೋದ್ಯಮದಿಂದಾಗಿ ಮೌಲ್ಯಗಳು ಕುಸಿಯುತ್ತಿವೆೆ ಎಂದು ಶಾಸಕ ಶಿವಶಂಕರರೆಡ್ಡಿ ಬೇಸರ ವ್ಯಕ್ತಪಡಿಸಿದರು. ಪತ್ರಕರ್ತರ ಸಂಘಕ್ಕೆ ನಿವೇಶನ ನೀಡಲು ತಹಸೀಲಾರ್ ಹಾಗೂ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದು ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

    ಪತ್ರಕರ್ತರು ಕರೊನಾ ವಾರಿಯರ್ಸ್ ಆಗಿ ಫಲಾಪೇಕ್ಷೆಯಿಲ್ಲದೇ ದುಡಿಯುತ್ತಿದ್ದಾರೆ. ಹಾಗಾಗಿ ಪತ್ರಕರ್ತರ ಭವನ ನಿರ್ಮಾಣ ಮಾಡಲು ಮುಂದಾದರೆ ಅಗತ್ಯ ಸಹಾಯ ಮಾಡುವುದಾಗಿ ಜಿಪಂ ಮಾಜಿ ಸದಸ್ಯ ಕೆ.ಕೆಂಪರಾಜು ಭರವಸೆ ನೀಡಿದರು.

    ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ, ಜಿಪಂ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಜೆಡಿಎಸ್ ಮುಖಂಡ ಆರ್.ಅಶೋಕ್, ತಹಸೀಲ್ದಾರ್ ಎಚ್.ಶ್ರೀನಿವಾಸ್, ತಾಪಂ ಇಒ ಮುನಿರಾಜು, ನಗರಸಭೆ ಆಯುಕ್ತ ಸತ್ಯನಾರಾಯಣ, ತಾಲೂಕು ಆರೋಗ್ಯಾಧಿಕಾರಿ ಡಾ.ಓ.ರತ್ನಮ್ಮ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ವೆಂಕಟೇಶ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಜಯರಾಮ್, ಉಪಾಧ್ಯಕ್ಷ ದೇವಿಮಂಜುನಾಥ್, ತಾಲೂಕು ಅಧ್ಯಕ್ಷ ಪಠಾಣ್ ಸೈಫುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts