More

    ಪತ್ನಿ ಆಡಳಿತದಲ್ಲಿ ಮೂಗು ತೂರಿಸಿದ ಪತಿ, ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಆರೋಪ, ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲು

    ನಂದಗುಡಿ: ಗ್ರಾಪಂ ಮಹಿಳಾ ಸದಸ್ಯರ ಆಡಳಿತದಲ್ಲಿ ಪತಿ ಅಥವಾ ಕುಟುಂಬಸ್ಥರು ಮೂಗು ತೂರಿಸುವ ಪ್ರಕರಣ ಮುಂದುವರಿದಿದ್ದು, ದೊಡ್ಡನಲ್ಲೂರಿನಲ್ಲಿ ಬುಧವಾರ ಪುನರಾವರ್ತನೆಯಾಗಿದೆ.

    ಆಶಾ ಕಾರ್ಯಕರ್ತೆಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸುವ ಜತೆಗೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಚೊಕ್ಕನಹಳ್ಳಿ ಗ್ರಾಪಂ ಸದಸ್ಯೆ ಅಮೃತಾ ಅವರ ಪತಿ ಚಲಪತಿ ಎಂಬುವವರ ವಿರುದ್ಧ ಆಶಾ ಕಾರ್ಯಕರ್ತೆ ಶ್ರೀದೇವಿ ದೂರು ನೀಡಿದ್ದು, ನಂದಗುಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಇನ್ನಿತರ ಆಶಾ ಕಾರ್ಯಕರ್ತೆಯರು ನಂದಗುಡಿ ಠಾಣೆ ಎದುರು ಜಮಾಯಿಸಿ ಸದಸ್ಯೆ ಪತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ ಪ್ರಸಂಗವೂ ನಡೆದಿದೆ.

    ಏನಿದು ಪ್ರಕರಣ: ಹೊಸಕೋಟೆ ತಾಲೂಕು ಮುಗಬಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ದೊಡ್ಡನಲ್ಲೂರಹಳ್ಳಿಯಲ್ಲಿ ಕರೊನಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆಶಾ ಕಾರ್ಯಕರ್ತೆ ಶ್ರೀದೇವಿ ಕರ್ತವ್ಯ ನಿರ್ವಹಣೆಯಲ್ಲಿದ್ದರು. ಆರೋಪಿ ಲಸಿಕಾ ಕಾರ್ಯಕ್ರಮದ ಜಾಗಕ್ಕೆ ನುಗ್ಗಿ ಲಸಿಕೆ ಕಾರ್ಯಕ್ರಮದ ಬಗ್ಗೆ ನನಗೆ ಮಾಹಿತಿಯೇ ನೀಡಿಲ್ಲ ಎಂದು ಶ್ರೀದೇವಿ ಅವರನ್ನು ನಿಂದಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮಾತಿನ ಚಕಮಕಿ ನಡೆದು ಶ್ರೀದೇವಿ ಅವರ ಸೀರೆಯ ಸೆರಗು ಹರಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿಡಿಸಲು ಬಂದ ಶ್ರೀದೇವಿ ಪತಿ ತಿಮ್ಮರಾಯಪ್ಪ ಎಂಬುವವರ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

    ಅಧಿಕಾರಿಗಳಿಗೂ ದೂರು: ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಹಲ್ಲೆ ನಡೆಸಿ ಅವಮಾನಿಸಿದ ಆರೋಪ ಮೇಲೆ ಚಲಪತಿ ವಿರುದ್ಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕು ಆಡಳಿತ ವೈದ್ಯಾಧಿಕಾರಿಗೂ ಶ್ರೀದೇವಿ ದೂರು ನೀಡಿದ್ದಾರೆ.

    ಪಂಚಾಯತ್ ರಾಜ್ ಅಧಿನಿಯಮ ಉಲ್ಲಂಘನೆ: ಗ್ರಾಪಂ ಮಹಿಳಾ ಸದಸ್ಯೆಯರ ಆಡಳಿತದಲ್ಲಿ ಅವರ ಪತಿ ಅಥವಾ ಕುಟುಂಬಸ್ಥರು ಮೂಗು ತೂರಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಇತ್ತೀಚಿಗೆ ಜಿಪಂ ಸಿಇಒ ರವಿಕುಮಾರ್ ಎಚ್ಚರಿಕೆ ರವಾನಿಸಿರುವ ನಡುವೆಯೇ ಇಂಥ ಪ್ರಕರಣ ನಡೆದಿರುವುದು ಜಿಲ್ಲೆಯಲ್ಲಿ ಗಮನ ಸೆಳೆದಿದೆ. ಪಂಚಾಯತ್ ರಾಜ್ ಅಧಿನಿಯಮದ ಅನ್ವಯ ಗ್ರಾಪಂನ ಯಾವುದೇ ಮಹಿಳಾ ಪ್ರತಿನಿಧಿಗಳ ಆಡಳಿತದಲ್ಲಿ ಪತಿ ಅಥವಾ ಮತ್ಯಾರೇ ಆದರೂ ತಲೆ ಹಾಕುವಂತಿಲ್ಲ. ಒಂದು ವೇಳೆ ಇಂಥ ಪ್ರಸಂಗ ಕಂಡುಬಂದರೆ ಅಂಥ ಪ್ರತಿನಿಧಿ ಅಧಿಕಾರ ಕಳೆದುಕೊಳ್ಳುವ ಜತೆಗೆ ಕಾನೂನುಕ್ರಮ ಎದುರಿಸಬೇಕಾಗುತ್ತದೆ. ಆದರೆ ಗ್ರಾಮಾಂತರ ಜಿಲ್ಲೆಯಲ್ಲಿ ಪತ್ನಿ ಆಡಳಿತ ಮನೆಗೆ ಮಾತ್ರ, ಉಳಿದೆಲ್ಲ ಆಡಳಿತ ಗಂಡನಿಗೇ ಸೀಮಿತ ಎಂಬ ಪರಿಸ್ಥಿತಿ ಇದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts