More

    ಪಡಿತರ ವಿತರಣೆಗೂ ಕರಿನೆರಳು

    ವಿಜಯವಾಣಿ ಸುದ್ದಿಜಾಲ ಶಿರಸಿ: ಕರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ನಿರ್ಬಂಧ ಮಾಡಿರುವ ಸರ್ಕಾರವು ಪಡಿತರ ಸಾಮಗ್ರಿ ನೀಡುವ ನ್ಯಾಯಬೆಲೆ ಅಂಗಡಿಗಳನ್ನು ಇದರಿಂದ ಹೊರಗಿಟ್ಟಿದೆ. ಹೀಗಾಗಿ, ಬಡ ಪಡಿತರದಾರರು ರೋಗ ಭೀತಿಯಿಂದ ಪಡಿತರ ಪಡೆಯಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ವಣವಾಗಿದೆ.

    ಕರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾ. 6ರಿಂದ ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿತ್ತು. ಈ ವ್ಯವಸ್ಥೆಯಿಂದ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಬೇಗ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇಂದಿಗೂ ಸರ್ಕಾರಿ ನೌಕರರು ಕೈಬರಹದಲ್ಲಿ ಹಾಜರಾತಿ ಹಾಕುತ್ತಿದ್ದಾರೆ. ಆದರೆ, ಹೊಟ್ಟೆಪಾಡಿಗಾಗಿ ಸರ್ಕಾರ ನೀಡುವ ಪಡಿತರ ಸಾಮಗ್ರಿ ಪಡೆಯುವ ಫಲಾನುಭವಿಗಳಿಗೆ ಈ ಸೌಲಭ್ಯ ನೀಡಿಲ್ಲ. ಸರ್ಕಾರಿ ನಿಯಮಾವಳಿಯಂತೆ ಪಡಿತರ ಸಾಮಗ್ರಿ ಪಡೆಯಲು ಫಲಾನುಭವಿಯ ಹೆಬ್ಬೆಟ್ಟು ಗುರುತು ಕಡ್ಡಾಯವಾಗಿದೆ. ಹೀಗಾಗಿ, ಸ್ಯಾನಿಟೈಸರ್ ಹಾಗೂ ಇತರ ಮುಂಜಾಗ್ರತೆಯಿಲ್ಲದ ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳು ರೋಗ ಭೀತಿಯಲ್ಲೇ ಪಡಿತರ ಪಡೆಯುವಂತಾಗಿದೆ. ಹೀಗಾಗಿ, ಹಲವು ಫಲಾನುಭವಿಗಳು ಪಡಿತರವೇ ಬೇಡ ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ.

    ಕಾರ್ಡ್ ರದ್ದಾಗುವ ಆತಂಕ: ಪಡಿತರ ಪಡೆಯದಿದ್ದರೆ ಪಡಿತರ ಕಾರ್ಡ್ ರದ್ದಾಗುವ ಆತಂಕವಿದೆ. ಹೀಗಾಗಿ, ಕರೊನಾ ಭೀತಿಯ ನಡುವೆಯೂ ಹೆಬ್ಬೆಟ್ಟು ಗುರುತು ನೀಡಿ ಪಡಿತರ ಪಡೆಯುವ ಅನಿವಾರ್ಯತೆ ಬಿಪಿಎಲ್ ಕಾರ್ಡ್​ದಾರರದ್ದಾಗಿದೆ. ಎರಡ್ಮೂರು ದಿನಗಳಿಂದ ಜಿಲ್ಲಾದ್ಯಂತ ವಿವಿಧ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 3,00,825 ಪಡಿತರ ಕಾರ್ಡ್​ಗಳಿದ್ದು, ಇವುಗಳಲ್ಲಿ 2,78,835 ಬಿಪಿಎಲ್ ಹಾಗೂ 9992 ಅಂತ್ಯೋದಯ ಫಲಾನುಭವಿಗಳಿದ್ದಾರೆ. ಆದರೆ, ಈ ಹಿಂದಿನಂತೆ ಸರತಿಯಲ್ಲಿ ನಿಂತು ಪಡಿತರ ಪಡೆಯುವವರ ಸಂಖ್ಯೆ ಗಣನೀಯವಾಗಿ ಇಳಿದಿದೆ. ಕೇಂದ್ರ ಸರ್ಕಾರವು 6 ತಿಂಗಳ ಪಡಿತರವನ್ನು ಒಮ್ಮೆಲೇ ಕೊಂಡೊಯ್ಯುವಂತೆ ಹೇಳಿದ್ದರೂ ಪ್ರತಿ ತಿಂಗಳು ಪಡಿತರ ವಿತರಣೆಯ ಆರಂಭದ ದಿನಗಳಲ್ಲಿ ನೂಕುನುಗ್ಗಲು ಉಂಟಾಗುತ್ತಿದ್ದ ನ್ಯಾಯಬೆಲೆ ಅಂಗಡಿಗಳಲ್ಲಿ ಕೂಡ ಬಿಕೋ ಎನ್ನುವ ವಾತಾವರಣ ನಿರ್ವಣವಾಗಿದೆ. ತಿಂಗಳಾಂತ್ಯದವರೆಗೂ ಪಡಿತರ ನೀಡುವ ವ್ಯವಸ್ಥೆ ಜಾರಿಯಲ್ಲಿರಲಿದ್ದು, ರೋಗಾತಂಕದ ನಡುವೆ ಪಡಿತರ ಸಾಮಗ್ರಿ ಪಡೆಯಬೇಕೇ, ಬೇಡವೇ ಎನ್ನುವ ಗೊಂದಲದಲ್ಲಿ ಪಡಿತರದಾರರಿದ್ದಾರೆ.

    ಸಾಮಾನ್ಯರಿಗೆ ತಾರತಮ್ಯ: ಎರಡ್ಮೂರು ದಿನಗಳಿಂದ ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿಗೆ ಬರುತ್ತಿದ್ದೇನೆ. ಸರ್ವರ್ ಡೌನ್ ಸಮಸ್ಯೆಯಿಂದ ಒಬ್ಬ ಗ್ರಾಹಕ ಮತ್ತೆ ಮತ್ತೆ ಬಯೋಮೆಟ್ರಿಕ್​ಗೆ ಒಳಗಾಗಬೇಕಾಗುತ್ತಿದೆ. ಯಾವುದೇ ಮುನ್ನೆಚ್ಚರಿಕಾ ಕ್ರಮ, ಭದ್ರತೆಯಿಲ್ಲದೆ, ಹೆಬ್ಬೆಟ್ಟು ಗುರುತು ಪಡೆಯಲಾಗುತ್ತಿದೆ. ಇದರಿಂದ ನಗರ ಭಾಗ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದಲ್ಲೂ ರೋಗ ಭೀತಿ ಹೆಚ್ಚಿದೆ. ಕೆಲವರಂತೂ ಈ ಬಾರಿ ಪಡಿತರವೇ ಬೇಡ ಎನ್ನುತ್ತಿದ್ದಾರೆ. ಸರ್ಕಾರಿ ನೌಕರರಿಗೆ ನೀಡುವ ಭದ್ರತೆ ಸಾಮಾನ್ಯರು, ಬಡವರಿಗೆ ಅನ್ವಯವಾಗುವುದಿಲ್ಲವೇ? | ಶೋಭಾ ಹೆಗಡೆ ಪಡಿತರ ಫಲಾನುಭವಿ

    ಸರ್ಕಾರವೇ ಸೂಚಿಸಲಿ: ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ನಿತ್ಯ ನೂರಾರು ಫಲಾನುಭವಿಗಳು ಆಗಮಿಸುತ್ತಾರೆ. ನಿಗದಿತ ದಿನಾಂಕದೊಳಗೆ ಪಡಿತರ ಕೊಟ್ಟು ಮುಗಿಸುವುದು ವಾಡಿಕೆ. ಕಾರಣ ಕೆಲವೊಮ್ಮೆ ಜನದಟ್ಟಣೆಯೂ ಆಗುತ್ತದೆ. ಪಡಿತರ ಪಡೆಯುವವರ ಹೆಬ್ಬೆಟ್ಟು ಗುರುತು ಪಡೆಯುವುದು ಕಡ್ಡಾಯ. ಪ್ರಸ್ತುತ ಮಾರ್ಚ್ ತಿಂಗಳ ಪಡಿತರವನ್ನು ವಿತರಣೆ ಮಾಡುತ್ತಿದ್ದೇವೆ. ಆದರೆ, ಜನರು ಹೆಬ್ಬೆಟ್ಟು ಗುರುತು ನೀಡಲು ಆತಂಕ ಪಡುತ್ತಿದ್ದಾರೆ. ಕರೊನಾ ಭೀತಿಯಿಂದ ಮಾರ್ಚ್ ತಿಂಗಳಲ್ಲಿ ಈವರೆಗೆ ಅತಿ ಕಡಿಮೆ ಪಡಿತರ ವಿತರಣೆಯಾಗಿದೆ. ನ್ಯಾಯಬೆಲೆ ಅಂಗಡಿಕಾರರಿಗೆ ಸರ್ಕಾರ ಸೂಚಿಸಿದರೆ ಮಾತ್ರ ಹೆಬ್ಬೆಟ್ಟು ಗುರುತು ಪಡೆಯದೆ ಪಡಿತರ ವಿತರಿಸಲು ಸಾಧ್ಯ. | ಹೆಸರು ಹೇಳಲಿಚ್ಛಿಸದ ನ್ಯಾಯಬೆಲೆ ಅಂಗಡಿ ಮಾಲೀಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts