More

    ಪಠ್ಯಗಳಲ್ಲಿ ಜೈನ ಸಾಹಿತ್ಯಕ್ಕೆ ಕತ್ತರಿ  -ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ವಿಷಾದ – ಮಹಾವೀರ ಸಂಘದ ಸುವರ್ಣ ಮಹೋತ್ಸವ

    ದಾವಣಗೆರೆ: ಪಠ್ಯಪುಸ್ತಕಗಳಲ್ಲಿ ಮೊದಲಿದ್ದ ಹಳಗನ್ನಡ ಕಾವ್ಯಗಳನ್ನು ಧರ್ಮದ ಕಾರಣಕ್ಕೆ ಕೈಬಿಡಲಾಗಿದೆ. ಜೈನರು ನೀಡಿದ್ದ ಸಾಹಿತ್ಯಕ ಕೊಡುಗೆ ಈಗ ಕೆಲವರಿಗೆ ಬೇಡವಾಗಿವೆ ಎಂದು ಹೊಂಬುಜ ಕ್ಷೇತ್ರದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ವಿಷಾದಿಸಿದರು.
    ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಗವಾನ್ ಶ್ರೀ ಕಲ್ಪದ್ರುಮ ಆದಿನಾಥ ಜಿನಮಂದಿರದ ದಶಮಾನೋತ್ಸವ ಹಾಗೂ ಶ್ರೀ ಮಹಾವೀರ ಸಂಘದ ಸುವರ್ಣ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಜೈನ ಕವಿಗಳು ಕನ್ನಡ ಸಾಹಿತ್ಯವನ್ನು ಅಭಿವೃದ್ಧಿಪಡಿಸಿದರು. ಮೊದಲೆಲ್ಲ ಕನ್ನಡ ಪಠ್ಯದಲ್ಲಿದ್ದ ಆದಿಪುರಾಣ, ಅಜಿತ ಪುರಾಣ, ಯಶೋದರ ಚರಿತೆ ಮೊದಲಾದ ಹಳಗನ್ನಡದ ಕಾವ್ಯಗಳು ಈಗಿಲ್ಲ. ಹೋರಾಡಲು ನಮ್ಮಲ್ಲಿ ರಾಜಕೀಯ ಶಕ್ತಿ ಇಲ್ಲ. ಹೀಗಾಗಿ ನಮ್ಮ ಶಾಸ್ತ್ರಗಳಿಗೆ ಬಸದಿಗಳಲ್ಲಿ ಜೀವ ನೀಡಬೇಕಿದೆ ಎಂದು ಮನವಿ ಮಾಡಿದರು.
    ಡಿಎನ್‌ಎ ಪರೀಕ್ಷಿಸಿದರೆ ಜೈನರೇ ಅಧಿಕ!
    ಮಹಾವೀರರ ಕಾಲದಲ್ಲಿ ದೇಶದಲ್ಲಿ 10 ಕೋಟಿ ಜೈನರಿದ್ದರು. ಅವರೆಲ್ಲ ಎಲ್ಲಿ ಹೋದರು? ವೈಜ್ಞಾನಿಕವಾಗಿ ಇಂದು ಎಲ್ಲರ ಡಿಎನ್‌ಎ ಪರೀಕ್ಷೆ ನಡೆದರೆ ಬಹುತೇಕರು ಜೈನರೇ ಇರಲಿದ್ದಾರೆ. ಜೀವದಯೆ, ಅಹಿಂಸೆ ಮತ್ತು ಜಿನತ್ವದ ಬಗ್ಗೆ ನಂಬಿಕೆ ಇರಿಸಿ ಪಾಲಿಸುವವರೆಲ್ಲರೂ ಜೈನರೇ. ಇದಕ್ಕೆ ಪ್ರತ್ಯೇಕವಾಗಿ ಪ್ರಮಾಣಪತ್ರ ನೀಡಬೇಕಿಲ್ಲ ಎಂದು ವಿಶ್ಲೇಷಿಸಿದರು.
    ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಸಾದರ ಸಮಾಜದವರು, ಕೇರಳ ಮೈಸೂರು ಗಡಿಭಾಗದ ನಾಮಧಾರಿ ಗೌಡರು, ಮಲೆನಾಡಲ್ಲಿ ಒಕ್ಕಲಿಗರು, ದೇಸಾಯಿ, ದೇಶಪಾಂಡೆ, ಪಾಟೀಲರು ಧರ್ಮ ಪರಿವರ್ತನೆಯಾಗಿದ್ದಾರೆ. ಅವರೆಲ್ಲರೂ ಮೂಲತಃ ಜೈನರೇ.
    ಪಶ್ಚಿಮ ಬಂಗಾಳದಲ್ಲಿ ಸಡಾಕ್ ಹೆಸರಿನ ಆದಿವಾಸಿಗಳು ಕಾಡಲ್ಲಿದ್ದರೂ ಇಂದಿಗೂ ಅಹಿಂಸಾ ಧರ್ಮ ಪಾಲಿಸುತ್ತಿದ್ದಾರೆ. ಕೆಲವರು ಪ್ರಮಾಣಪತ್ರ, ಸೌಲಭ್ಯಗಳಿಗಾಗಿ ಬೇರೆ ಧರ್ಮಕ್ಕೆ ಹೋಗಿದ್ದಾರೆ. ನಮ್ಮದು ಅಸ್ಪಶ್ಯ ಧರ್ಮವಲ್ಲ. ಮಾತು-ಕೃತಿ ಎರಡರಲ್ಲೂ ಅಹಿಂಸೆ ಆಚರಿಸುವವರೆಲ್ಲ ಜೈನ ಧರ್ಮದ ಅನುಯಾಯಿಗಳು. ಈ ವಿಚಾರದಲ್ಲಿ ಜಾಗೃತಿ ಮೂಡಿಸಲು ಶ್ರಾವಕರಲ್ಲಿ ಸಂಕೋಚ ಬೇಡ ಎಂದು ಮನವಿ ಮಾಡಿದರು.
    ಕರ್ನಾಟಕದಲ್ಲಿ ಜೈನರ ಸಂಖ್ಯೆ 3ರಿಂದ 4 ಲಕ್ಷ ಇದೆ. ಅಹಿಂಸೆ ಕುರಿತು ಪ್ರಚಾರ ಮಾಡಿದರೆ 25 ಲಕ್ಷ ಜನಸಂಖ್ಯೆ ಮುಟ್ಟಬಹುದು. ಆಮಿಷವೊಡ್ಡಿ ಧರ್ಮದ ಪರಿವರ್ತನೆ ಮಾಡುವುದು ಜೈನ ಸಂಸ್ಕೃತಿಯಲ್ಲ. ಹೃದಯ ಪರಿವರ್ತನೆ ಮಾಡಿ ಧರ್ಮಾಚರಣೆಯ ಜಾಗೃತಿ ಮೂಡಿಸಬೇಕಿದೆ ಎಂದರು.
    ವೈಯಕ್ತಿಕ ಅಭಿಪ್ರಾಯ ಬದಲಾಯಿಸಿಕೊಳ್ಳುವುದೇ ಮತಾಂತರವಾದರೆ, ಸಿದ್ಧಾಂತವನ್ನೇ ಬದಲಾವಣೆ ಮಾಡಿಕೊಳ್ಳುವುದೇ ಧರ್ಮಾಂತರವಾಗಿದೆ. ಅನೇಕ ರಾಜಮಹಾರಾಜರು ಧರ್ಮವನ್ನು ಬದಲಾಯಿಸಿಕೊಂಡರು. ಪ್ರಜೆಗಳೂ ರಾಜಧರ್ಮ ಪಾಲಿಸಿದರು. ಇಂದು ಮತಾಂತರ ನಿಷೇದ ಕಾಯ್ದೆ ಜಾರಿಯಾಗಿದ್ದು ಬಲವಂತದ ಧರ್ಮ-ಮತ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಿದರು.
    ಹರಿಹರ ಶಾಸಕ ಬಿ.ಪಿ.ಹರೀಶ್ ಮಾತನಾಡಿ ನಮ್ಮ ದೇಶದಲ್ಲಿ ಮುಸ್ಲಿಮರು, ಕ್ರೈಸ್ತರು ಬಹಳ ಹಿಂದೆ ಮತಾಂತರಗೊಂಡವರು ಎಂಬುದರಲ್ಲಿ ಅನುಮಾನವಿಲ್ಲ. ದಾವಣಗೆರೆ ಸುತ್ತಮುತ್ತ ಸಾದರ ಲಿಂಗಾಯತರಿರುವ ಗ್ರಾಮಗಳಲ್ಲೇ ಹೆಚ್ಚಿನ ಜಿನ ಮಂದಿರಗಳಿವೆ. ಒಂದು ಕಾಲದಲ್ಲಿ ಇಲ್ಲಿನ ಸಾದರ ಸಮಾಜದವರು ಜೈನಧರ್ಮದಿಂದ ಮತಾಂತರ ಆಗಿರಬಹುದು. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದೂ ಹೇಳಿಕೊಂಡರು.
    ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ಕೊಡುಗೈ ದಾನಿಯಂತೆ ಕೆಲಸ ಮಾಡುವುದೇ ಜೈನ ಸಮಾಜವಾಗಿದೆ. ಇದೊಂದು ಕಟ್ಟುನಿಟ್ಟಿನ, ಶಿಸ್ತಿನ ಹಾಗೂ ಎಲ್ಲರ ಒಳಿತು ಬಯಸುವ, ಗೌರವದ ಜೀವನ ಕಲ್ಪಿಸುವ ಸಮಾಜವಾಗಿದೆ. ನಿಮ್ಮ ಮಕ್ಕಳಿಗೆ ಶಿಕ್ಷಣ ಕಲ್ಪಿಸಿದರೆ ನಿಮ್ಮ ವೃತ್ತಿ, ಕೃಷಿ, ವ್ಯಾಪಾರ ಇನ್ನಷ್ಟು ಉತ್ತೇಜನಗೊಳ್ಳಲಿದೆ ಎಂದರು.
    ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷ ಬಿ. ಪ್ರಸನ್ನಯ್ಯ ಮಾತನಾಡಿ ರಾಜ್ಯದ ಜೈನ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅಸೋಸಿಯೇಷನ್‌ನಿಂದ ಬೆಂಗಳೂರಲ್ಲಿ ಸೂಕ್ತ ಸೌಕರ್ಯಗಳನ್ನು ಒದಗಿಸಿಕೊಡಲಿದೆ ಎಂದು ಪ್ರಕಟಿಸಿದರು.
    ಮಹಾವೀರ ಸಂಘದ ಕಾರ್ಯದರ್ಶಿ ಡಿ. ಸುನೀಲ್‌ಕುಮಾರ್ ಮಾತನಾಡಿ ಸಮಾಜದ ಸಮುದಾಯ ಭವನಕ್ಕೆ ಶಾಸಕರ ನಿಧಿಯಿಂದ ಅನುದಾನ ಕಲ್ಪಿಸಬೇಕೆಂದು ಕೋರಿದರು.
    ಕಾರ್ಯಕ್ರಮದಲ್ಲಿ ಮಹಾವೀರ ಸಂಘದ ಅಧ್ಯಕ್ಷ ಬಿ.ಎ. ಅಜಿತ್‌ಕುಮಾರ್, ಗೌರವಾಧ್ಯಕ್ಷ ಎಂ.ಎ.ಸುದರ್ಶನಕುಮಾರ್, ಕೋಮಲ್ ಕುಂದಪ್ಪ ಇತರರಿದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts