More

    ಪಟ್ಟಣದ ಮಧ್ಯೆ ಕ್ವಾರಂಟೈನ್​ಗೆ ವಿರೋಧ

    ಭಟ್ಕಳ: ಪಟ್ಟಣದ ಹೃದಯಭಾಗದಲ್ಲಿ ದುಬೈನಿಂದ ಬಂದವರಿಗೆ ಹೋಟೆಲ್ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ತಹಸೀಲ್ದಾರ್ ಮತ್ತು ಸಿಪಿಐ ಭೇಟಿ ನೀಡಿ ಸಮಾಧಾನ ಪಡಿಸಿದರು.

    ಶನಿವಾರ ದುಬೈನಿಂದ ಆಗಮಿಸಿದ 184 ಜನರಲ್ಲಿ ಸುಮಾರು 67 ಜನರಿಗೆ ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿರುವ ಖಾಸಗಿ ಹೋಟೆಲೊಂದರಲ್ಲಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಿದ್ದರು. ಇದರಿಂದ ಅಲ್ಲಿಯ ಸಂಪರ್ಕ ರಸ್ತೆಯನ್ನು ಬಂದ್ ಮಾಡಿದ್ದರು. ಅಲ್ಲೆ ಸುತ್ತಮುತ್ತ ಹಲವು ಸಂಸ್ಥೆ, ಅಂಗಡಿ, ಮನೆಗಳು ಇದ್ದು ಅದರಿಂದ ಸ್ಥಳೀಯರಿಗೆ ಪೊಲೀಸರು ಸಂಚಾರ ನಿರ್ಬಂಧಿಸಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ತಾಲೂಕು ಆಡಳಿತದ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಈಗಾಗಲೆ 3 ತಿಂಗಳಿಂದ ವ್ಯವಹಾರ ಇಲ್ಲದೆ ಮನೆಯಲ್ಲೆ ಕಳೆದಿದ್ದೇವೆ. ಇನ್ನೂ ಮುಂದಿನ 14 ದಿನಗಳು ಹೀಗೆ ಆದರೆ ನಮ್ಮ ಗತಿ ಏನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿರುವಂತೆ ಸ್ಥಳಕ್ಕೆ ತಹಸೀಲ್ದಾರ್ ಎಸ್. ರವಿಚಂದ್ರ, ಸಿಪಿಐ ದಿನಕರ ಪಿ. ದೌಡಾಯಿಸಿ ಸ್ಥಳೀಯರನ್ನು ಸಮಾಧಾನ ಪಡಿಸಿದ್ದಾರೆ. ಸ್ಥಳೀಯರು ಹಾಗೂ ಶಾಸಕರು ಸೇರಿ ಜಿಲ್ಲಾಡಳಿತಕ್ಕೆ ಕ್ವಾರಂಟೈನ್ ಸ್ಥಳವನ್ನು ಸ್ಥಳಾಂತರಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.

    ಸುರಕ್ಷತೆ ಮರೆತ ಸ್ವಯಂ ಸೇವಕರು: ಲಾಕ್​ಡೌನ್ ಸಮಯದಲ್ಲಿ ದುಬೈನಲ್ಲಿ ಸಿಲುಕಿದ್ದ 184 ಮಂದಿ ಭಟ್ಕಳಕ್ಕೆ ಆಗಮಿಸಿದ್ದಾರೆ. ಆದರೆ, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೇ ಅವರ ಸಂಪರ್ಕಕ್ಕೆ ಬಂದ ಸ್ವಯಂ ಸೇವಕರಿಂದ ಪಟ್ಟಣದಲ್ಲಿ ಮತ್ತೆ ಸಂಕಟ ಶುರುವಾಗುವುದೋ ಎಂಬ ಆತಂಕ ಜನರನ್ನು ಕಾಡುತ್ತಿದೆ. ದುಬೈನಿಂದ ಭಟ್ಕಳಕ್ಕೆ ಬಂದವರಿಗೆ ಸ್ವಯಂ ಸೇವಕರು ಅವರ ಸಾಮಾನು ಸರಂಜಾಮುಗಳನ್ನು ಇಳಿಸಲು ಸಹಾಯ ಮಾಡಿದ್ದಾರೆ. ಹಾಗೇ ಅವರಿಗೆ ಬಸ್​ನಿಂದ ಇಳಿಯಲು ತಮ್ಮ ಹಸ್ತ ನೀಡಿದ್ದಾರೆ. ನಿಯಮದ ಪ್ರಕಾರ ಪಿಪಿಇ ಕಿಟ್ ಬಳಸಿ ಅವರಿಗೆ ಸಹಾಯ ಮಾಡಬೇಕಿತ್ತು. ಆದರೆ, ಇದ್ಯಾವುದನ್ನು ಮಾಡದೆ ಅವರ ಸಂಪರ್ಕಕ್ಕೆ ಹೋಗಿದ್ದಾರೆ. ತಾಲೂಕು ಆಡಳಿತವೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಸ್ಥಳೀಯರ ಆರೋಪಕ್ಕೆ ಕಾರಣವಾಗಿದೆ.

    ಸರ್ಕಾರದ ಗೈಡ್​ಲೈನ್ ಪ್ರಕಾರ ಕ್ವಾರಂಟೈನ್​ನ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಾಂಸ್ಥಿಕ ಕ್ವಾರಂಟೈನ್ ನೀಡಿದ ಸ್ಥಳದಲ್ಲಿ ಸಾರ್ವಜನಿಕರಿಗೆ ಪ್ರವೇಶವಿಲ್ಲ. ಅಲ್ಲದೆ, ಅಲ್ಲಿ ಪೊಲೀಸ್ ಸಿಬ್ಬಂದಿ 3 ಪಾಳಿಯ ಪ್ರಕಾರ ಕರ್ತವ್ಯ ನಿರ್ವಹಿಸಲಿದ್ದಾರೆ. ಯಾರೂ ಭೀತಿ ಪಡುವ ಅಗತ್ಯವಿಲ್ಲ. | ಭರತ್ ಎಸ್. ಉಪವಿಭಾಗಾಧಿಕಾರಿ ಭಟ್ಕಳ

    5 ಅಥವಾ 7ನೇ ದಿನ ಪರೀಕ್ಷೆ: ದುಬೈನಿಂದ ಭಟ್ಕಳಕ್ಕೆ ಒಟ್ಟು 184 ಮಂದಿ ಆಗಮಿಸಿದ್ದು, ಇದರಲ್ಲಿ 10 ಶಿಶು, 20 ಮಕ್ಕಳು ಹಾಗೂ ಗರ್ಭಿಣಿಯರು, ವೃದ್ಧರು ಸೇರಿದ್ದಾರೆ. ಅವರಿಗೆ ಸ್ಥಳೀಯ ಕಾಲೇಜ್​ನ ಹಾಸ್ಟೆಲ್ ಮತ್ತು ಪಟ್ಟಣದ ಎರಡು ಖಾಸಗಿ ಹೋಟೆಲ್​ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. 60, 63, 61 ಜನರಂತೆ ವಿಂಗಡಿಸಲಾಗಿದೆ. ಪ್ರೋಟೋಕಾಲ್ ಪ್ರಕಾರ ಅವರ ಗಂಟಲ ದ್ರವವನ್ನು 5 ಅಥವಾ 7ನೇ ದಿನ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts