More

    *ಪಟ್ಟಣದಾದ್ಯಂತ ಅಪಾರ ಹಾನಿ

    ಹುಣಸೂರು: ಮೂರು ದಿನಗಳಿಂದ ಬೀಳುತ್ತಿರುವ ಧಾರಾಕಾರ ಮಳೆಗೆ ಹುಣಸೂರು ಭಾಗಶಃ ತತ್ತರಿಸಿದೆ.

    ತಾಲೂಕು ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚು ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದರೆ, 50ಕ್ಕೂ ಹೆಚ್ಚು ಮನೆ ಗೋಡೆಗಳು ಕುಸಿದಿವೆ. ಹುಣಸೂರು ನಗರ, ಹನಗೋಡು ಹೋಬಳಿ ವ್ಯಾಪ್ತಿಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದರೆ, ಹನಗೋಡು ಮತ್ತು ಗಾವಡಗೆರೆ ಹೋಬಳಿ ವ್ಯಾಪ್ತಿಯಲ್ಲಿ ಜಮೀನಿನಲ್ಲಿ ಪ್ರವಾಹೋಪಾದಿಯಲ್ಲಿ ನೀರು ಹರಿದ ಪರಿಣಾಮ ಭತ್ತದ ಬೆಳೆ ನಾಶವಾಗಿದೆ.

    ಶನಿವಾರ ತಡರಾತ್ರಿ 9ಗಂಟೆಗೆ ಆರಂಭಗೊಂಡ ಮಳೆ ಬೆಳಗಿನ ಜಾವ 3 ಗಂಟೆವರೆಗೂ ಸುರಿದಿದೆ. ನಗರದ ಮಂಜುನಾಥ ಬಡಾವಣೆ ವಾರದಲ್ಲಿ ನಾಲ್ಕನೇ ಬಾರಿ ಮುಳುಗಿದೆ. ನಗರದ ಕಲ್ಕುಣಿಕೆ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲನಿ, ಮೇದರ ಬೀದಿ, ಸಾಕೇತ ಬಡಾವಣೆ, ಶಬ್ಬೀರ್ ನಗರ, ಹೊಸ ಮಾರುತಿ ಬಡಾವಣೆ ಮುಂತಾದ ಕಡೆಗಳಲ್ಲಿ ಮಳೆನೀರು ನುಗ್ಗಿ ನಾಗರಿಕರು ಕಣ್ಣೀರಿಡುವ ಪರಿಸ್ಥಿತಿ ಎದುರಾಗಿತ್ತು. ಮನೆಯೊಳಗಿನ ಸಾಮಾನು ಸರಂಜಾಮು ಬೀದಿಗೆ ಬಂದಿದ್ದವು.

    ಮಂಜುನಾಥ ಬಡಾವಣೆಯಲ್ಲಿ ವಾರವೊಂದರಲ್ಲಿ ನಾಲ್ಕನೇ ಬಾರಿ ನೀರು ಮನೆಗಳಿಗೆ ನುಗ್ಗಿದ್ದು, ದಿನವಿಡೀ ಮನೆ ಶುಚಿಗೊಳಿಸುವ ಕಾರ್ಯದಲ್ಲಿ ಮನೆಮಂದಿಯೆಲ್ಲ ತೊಡಗಿದ್ದರು. ಇಡೀ ಬಡಾವಣೆ ದ್ವೀಪದಂತಾಗಿತ್ತು. ಶಬ್ಬೀರ್ ನಗರದ ಮುಖ್ಯರಸ್ತೆಗಳಲ್ಲಿ ನೀರು ತುಂಬಿಕೊಂಡಿತು. ರಾಷ್ಟ್ರೀಯ ಹೆದ್ದಾರಿ 275ರ ಹುಣಸೂರು ಬೈಪಾಸ್ ರಸ್ತೆಗೆ ಮಂಜುನಾಥ ಬಡಾವಣೆಯಿಂದ ತೋಟಗಾರಿಕಾ ಇಲಾಖೆ ಕಚೇರಿ ಬಳಿಯಿಂದ ನೀರು ನುಗ್ಗಿ ರಾತ್ರಿಯಿಡೀ ಸಂಚಾರ ಅಸ್ತವ್ಯಸ್ತಗೊಂಡಿತ್ತು.

    ಹೊರಗೆ ಮಳೆ, ನೀರು ಮನೆಯೊಳಗೆ: ನಗರದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಎದೆಯ ಮಟ್ಟಕ್ಕೆ ನೀರು ರಸ್ತೆಯಲ್ಲಿ ಹರಿದು ಮನೆಯೊಳಗೆ ಅವಾಂತರ ಸೃಷ್ಡಿಸಿದೆ. ಬಡಾವಣೆಯ ವಿನಯ್, ಧನಲಕ್ಷ್ಮೀ, ಅನುಪಮಾ, ಗಣೇಶ್, ವಿಶ್ವ, ವೀಣಾ, ಶಾಂತಾ, ಮಹದೇವ, ಸ್ವಾಮಿ, ರಾಧಾ, ಭಾಗ್ಯಮ್ಮ, ಚಂದ್ರ, ನಾಗೇಶ್, ಮುತ್ತುರಾಜ್, ಗಣೇಶ್ ಅವರ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು.
    ಭಾನುವಾರ ಬೆಳಗ್ಗೆ ನೀರಿನಿಂದಾಗಿ ನೆನೆದಿರುವ ಹಾಸಿಗೆ, ಚಾಪೆ, ಪಡಿತರ, ಟೀವಿ, ಫ್ರಿಜ್ಡ್, ಬೆಂಚು, ಕುರ್ಚಿಗಳನ್ನು ಬೀದಿಯಲ್ಲಿ ಹಾಕಿ ಮನೆ ಶುಚಿಗೊಳಿಸುವ ಕಾರ್ಯವನ್ನು ನಾಗರಿಕರು ನಡೆಸಿದರು. ಬಡಾವಣೆಯಲ್ಲಿ ಗುರುಗಳ ಕಟ್ಟೆಯಲ್ಲಿ ನೀರು ಪ್ರವಾಹೋಪಾದಿಯಲ್ಲಿ ಹರಿದಿದೆ. ಅಲ್ಲದೇ ಅಯ್ಯಪ್ಪಸ್ವಾಮಿ ತಪ್ಪಲಿನ ಈ ಪ್ರದೇಶಕ್ಕೆ ಬೆಟ್ಟದಿಂದ ನೀರು ಹರಿದು ಬಂದಿದೆ. ಎರಡೂ ಕಡೆಯಿಂದ ಬಂದ ನೀರು ರಾಘವೇಂದ್ರಸ್ವಾಮಿ ಮಠದ ಮುಂಭಾಗವಿರುವ ಡೆಕ್‌ನಲ್ಲಿ ನುಗ್ಗಲಾಗದೆ ಇಡೀ ಬಡಾವಣೆಯನ್ನು ಆವರಿಸಿದೆ. ಹೆದ್ದಾರಿಯಲ್ಲಿರುವ ಮತ್ತೊಂದು ಡೆಕ್ ಸುಸ್ಥಿತಿಯಲ್ಲಿಲ್ಲದ ಕಾರಣ ಈ ಅನಾಹುತವಾಗಿದೆ. ಅಲ್ಲದೆ, ಗುರುಗಳ ಕಟ್ಟೆಯ ಸುತ್ತ ಒತ್ತುವರಿ ಮತ್ತು ನೀರು ಸರಾಗವಾಗಿ ಹರಿಯುವಂತೆ ಮಾಡಲು ನಗರಸಭೆ ವಿಫಲವಾದ ಕಾರಣದಿಂದಲೇ ನಾಗರಿಕರು ಅವಸ್ಥೆ ಪಡುತ್ತಿದ್ದಾರೆ ಎಂದು ನಿವಾಸಿ ಮಯೂರ ಆರೋಪಿಸುತ್ತಾರೆ.

    ಸುತ್ತಾಡಿದ ಶಾಸಕ: ಶಾಸಕ ಎಚ್.ಪಿ. ಮಂಜುನಾಥ್ ಮಳೆಯಿಂದ ಆಗಿರುವ ಅವ್ಯವಸ್ಥೆ ಪರಿಶೀಲನೆ ನಡೆಸಿದರು. ಭಾನುವಾರ ಬೆಳಗಿನ ಜಾವ ಮಂಜುನಾಥ ಬಡಾವಣೆ, ಹೌಸಿಂಗ್ ಬೋರ್ಡ್ ಕಾಲನಿ, ಶಬ್ಬೀರ್ ನಗರ, ಸಾಕೇತ ಬಡಾವಣೆ, ನಿಲುವಾಗಿಲು, ಹನಗೋಡು ಹೀಗೆ ಎಲ್ಲೆಡೆ ಅಧಿಕಾರಿಗಳೊಂದಿಗೆ ಸುತ್ತಾಡಿ ಎಲ್ಲೆಡೆಯಿಂದ ಮಾಹಿತಿ ಕಲೆಹಾಕಿದರು. ಮಧ್ಯಾಹ್ನದ ವೇಳೆಗೆ ಜಿಲ್ಲಾಧಿಕಾರಿಗಳು ಹುಣಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಒತ್ತಾಯಿಸಿದ್ದು, ಶೀಘ್ರ ಪರಿಹಾರಕ್ಕಾಗಿ ಒತ್ತಾಯಿಸಿರುವುದಾಗಿ ತಿಳಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts