More

    ಉಳ್ಳವರು, ಇಲ್ಲದವರು ಒಂದಾಗಿ ಬಾಳಲು ಸಂವಿಧಾನ ಅವಕಾಶ

    ಹುಣಸೂರು: ಡಾ.ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನ ದೇಶದ ಉಳ್ಳವರು ಮತ್ತು ಇಲ್ಲದವರು ಒಂದಾಗಿ ಬಾಳಲು ಅವಕಾಶ ನೀಡಿದೆ ಎಂದು ತಾಲೂಕು ಪಂಚಾಯಿತಿ ಇಒ ಶಿವಕುಮಾರ್ ಅಭಿಪ್ರಾಯಪಟ್ಟರು.

    ತಾಲೂಕಿನ ಬಾಚಳ್ಳಿಯ ಅಂಬೇಡ್ಕರ್ ಕಾಲನಿಯಲ್ಲಿ ಶುಕ್ರವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

    ಅಂಬೇಡ್ಕರ್ ಜಯಂತಿ ಕೇವಲ ಭಾಷಣಗಳಾಗದೆ ಎಲ್ಲರ ಮನ-ಮನೆಗಳಲ್ಲಿ ಆಚರಣೆ ಮಾಡುವಂತಾಗಬೇಕು. ಅಂಬೇಡ್ಕರ್ ಅಸ್ಪಶ್ಯತೆ, ಅಸಮಾನತೆ, ಜಾತೀಯತೆಯ ವಿರುದ್ಧ ಹೋರಾಟ ಮಾಡಿದ ಮಹಾನ್ ಮಾನವತಾವಾದಿ. ಸಂವಿಧಾನದ ಮೂಲಕ ಎಲ್ಲ ಜಾತಿ, ಧರ್ಮ, ಭಾಷೆಯ ಜನರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಈ ಕಾಲನಿಯ ಬಡಕುಟುಂಬಗಳು ತಮ್ಮ ಮಕ್ಕಳಿಗೆ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಲು ಮುಂದಾಗಬೇಕು. ಅವರ ಆದರ್ಶಗಳನ್ನು ತಮ್ಮ ಮನೆ ಮತ್ತು ಮನಗಳಲ್ಲಿ ಪ್ರತಿನಿತ್ಯ ಪಾಲಿಸಬೇಕು. ಆಗಮಾತ್ರ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಒಂದು ಅರ್ಥ ಬರುತ್ತದೆ ಎಂದರು.

    ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ಅಂಬೇಡ್ಕರ್ ಆಶಯದಂತೆ ಅವರ ಭಾವಚಿತ್ರವನ್ನು ಹಿಡಿದುಕೊಂಡು ಹೋರಾಟ ಮಾಡಿದ ಪರಿಣಾಮವಾಗಿ ಈ ಕಾಲನಿಯ ಬಡಕುಟುಂಬಗಳಿಗೆ ನೆಲೆ ಸಿಕ್ಕುವಂತಾಯಿತು. ಇದರ ಕೃತಜ್ಞತೆಯಾಗಿ ಅಂಬೇಡ್ಕರ್ ನಗರದ ಎಲ್ಲ ಜಾತಿಯ ಗ್ರಾಮಸ್ಥರು ಅಂಬೇಡ್ಕರ್ ಜಯಂತಿಯ ಎರಡು ದಿನಗಳ ಮುಂಚೆಯೇ ಅಂಬೇಡ್ಕರ್ ಹಬ್ಬ ಆಚರಣೆ ಮಾಡಲು ನಿರ್ಧರಿಸಿ ತಮ್ಮ ಮನೆಗಳಲ್ಲಿ ಹೊಸ ಬಟ್ಟೆ ತಂದು ಸಿಹಿ ತಿಂಡಿಗಳನ್ನು ಮಾಡಿ ತಳಿರು ತೋರಣಗಳನ್ನು ಕಟ್ಟಿ ಹಬ್ಬದಂತೆ ಆಚರಣೆ ಮಾಡಿದ್ದಾರೆ. ದಲಿತರು ವಾಸಿಸುವ ಎಲ್ಲ ಗ್ರಾಮಗಳಲ್ಲೂ ಪ್ರತಿವರ್ಷ ಜಯಂತಿ ಆಚರಣೆ ಮಾಡುವಂತಾಗಬೇಕು ಎಂದರು.

    ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಬಿಇಒ ಎಸ್.ರೇವಣ್ಣ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು ಮಾತನಾಡಿದರು. ನಗರಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್, ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರಾಜ್‌ಕುಮಾರ್, ಕಾರ್ಯದರ್ಶಿ ಲೋಕೇಶ, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ದಲಿತ ಮುಖಂಡ ಕೆ.ನಂಜಪ್ಪ ಬಸವನಗುಡಿ, ಬಲ್ಲೇನಹಳ್ಳಿ ಕೆಂಪರಾಜು, ಸತ್ಯ ಎಂಎಎಸ್ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ, ರಾಜು ಚಿಕ್ಕಹುಣಸೂರು, ಅಂಬೇಡ್ಕರ್ ನಗರ ಗ್ರಾಮಸ್ಥರಾದ ಶೇಖರ, ಹರೀಶ, ಶಿವಲಿಂಗ, ಮುರುಗೇಶ, ಮಾದು, ಗೋಪಾಲ, ವಸಂತ, ಶೋಭಾ, ಮುತ್ತುರಾಜು, ಗಜೇಂದ್ರ, ದಲಿತ ಮಹಿಳಾ ಒಕ್ಕೂಟದ ಲಕ್ಷ್ಮೀ, ರೇಣುಕಾ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಕಾಲನಿಯ ಬೀದಿಗಳಲ್ಲಿ ಮಂಗಳ ವಾದ್ಯದೊಂದಿಗೆ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts