More

    ಪಂಚಗಿರಿ ಬೋಧನಾ ಶಾಲೆ ಮುಟ್ಟುಗೋಲು, ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಕಾರ್ಯಾಚರಣೆ, ನಾಲ್ಕು ದಶಕಗಳ ವಿವಾದಕ್ಕೆ ತೆರೆ

    ಚಿಕ್ಕಬಳ್ಳಾಪುರ : ನಗರದ ಹಳೇ ಜಿಲ್ಲಾಸ್ಪತ್ರೆ ಸಮೀಪದ ಪಂಚಗಿರಿ ಬೋಧನಾ ಪ್ರೌಢಶಾಲೆಯನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನಗರಸಭೆ ವಶಪಡಿಸಿಕೊಂಡಿದ್ದು ನಾಲ್ಕು ದಶಕಗಳ ವಿವಾದಕ್ಕೆ ತೆರೆ ಬಿದ್ದಿದೆ.

    ನಗರಸಭೆಗೆ ಸೇರಿದ ಶಾಲೆಯು ಹಲವು ವರ್ಷಗಳಿಂದಲೂ ಖಾಸಗಿ ಪಂಚಗಿರಿ ಶಿಕ್ಷಣ ದತ್ತಿಯ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ನ್ಯಾಯಾಲಯದ ಆದೇಶದ ನಡುವೆಯೂ 14 ವರ್ಷಗಳಿಂದಲೂ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಜಿಲ್ಲಾಧಿಕಾರಿ ಆರ್.ಲತಾ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಪೌರಾಯುಕ್ತ ಡಿ.ಲೋಹಿತ್ ನೇತೃತ್ವದ ತಂಡವು ಬುಧವಾರ ಸುಮಾರು 15 ಕೋಟಿ ರೂ. ಗೂ ಹೆಚ್ಚಿನ ಮೌಲ್ಯದ ಸರ್ಕಾರಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

    ಬಿಗಿ ಪೊಲೀಸ್ ಭದ್ರತೆ : ರಾಜಕೀಯ ಪ್ರಭಾವದ ಹಿನ್ನೆಲೆಯಲ್ಲಿ ಶಾಲೆ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಿತ್ತು. ಇದರ ನಡುವೆ ಹಲವರ ಕುಮ್ಮಕ್ಕಿನಿಂದ ಪ್ರತಿಭಟನೆ ಇಲ್ಲವೇ ಗಲಾಟೆಗಳು ನಡೆಯುವ ಸಾಧ್ಯತೆಯ ಲೆಕ್ಕಾಚಾರದಲ್ಲಿ ಯಾರಿಗೂ ಸುಳಿವು ನೀಡದೆ ಅಧಿಕಾರಿಗಳ ತಂಡವು ಬುಧವಾರ ಬೆಳ್ಳಂಬೆಳಗ್ಗೆ ಶಾಲೆ ವಶಪಡಿಸಿಕೊಂಡಿದೆ. ಇದೇ ವೇಳೆ ಸಿಎಸ್‌ಐ ಆಸ್ಪತ್ರೆಯಿಂದ ಹಿಡಿದು ಸಿಎಸ್‌ಐ ಚರ್ಚಿನ ನಡುವಿನ ರಸ್ತೆಯಲ್ಲಿ ಬ್ಯಾರಿಕೇಡುಗಳನ್ನು ಹಾಕಿ ಸಂಚಾರ ಸ್ಥಗಿತಗೊಳಿಸಿದ್ದು ರಸ್ತೆಯ ಎರಡು ಬದಿಯಲ್ಲೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

    ದಶಕಗಳ ವಿವಾದ: 22 ವರ್ಷ ಚಿಕ್ಕಬಳ್ಳಾಪುರ ಪುರಸಭೆ ಅಧ್ಯಕ್ಷರಾಗಿದ್ದ ದಿವಂಗತ ಸಿ.ವಿ.ವೆಂಕಟರಾಯಪ್ಪ ಪುರಸಭೆಯಿಂದ ನಡೆಯುತ್ತಿದ್ದ ಮುನ್ಸಿಪಲ್ ಪ್ರ್ಯಾಕ್ಟಿಸಿಂಗ್ ಹೈಸ್ಕೂಲ್ ಹಾಗೂ ಬಿ.ಇಡಿ ಕಾಲೇಜನ್ನು ಖಾಸಗಿ ಒಡೆತನದ ಪಂಚಗಿರಿ ಶಿಕ್ಷಣ ಸಂಸ್ಥೆ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ಪಂಚಗಿರಿ ಬೋಧನಾ ಪ್ರೌಢಶಾಲೆ ಮತ್ತು ಪಂಚಗಿರಿ ಬಿ.ಇಡಿ ಕಾಲೇಜು ಎಂಬುದಾಗಿಯೂ ಹೆಸರು ಬದಲಾವಣೆಯಾಗಿತ್ತು. ಇದು ಅಕ್ರಮ ಹಾಗೂ ಕಾನೂನುಬಾಹಿರ ಎಂದು ನಗರದ ಹಲವರು ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು. 1979ರಲ್ಲಿ ವಿಚಾರಣೆ ವಿಳಂಬವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದರಿಂದ ವಾದ-ಪ್ರತಿವಾದ ಆಲಿಸಿದ್ದ ಜಿಲ್ಲಾ ನ್ಯಾಯಾಲಯವು 2002ರಲ್ಲಿ ಪುರಸಭೆ ಪರ ತೀರ್ಪು ನೀಡಿತ್ತು. ಪುರಸಭೆಯ ಆಸ್ತಿ ಸಂರಕ್ಷಿಸಬೇಕಾದವರೇ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಾನೂನುಬಾಹಿರವಾಗಿ ಖಾಸಗಿ ಟ್ರಸ್ಟ್ ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಕೂಡಲೇ ನಗರಸಭೆಯ ಸುಪರ್ದಿಗೆ ಒಪ್ಪಿಸಬೇಕು ಎಂದು ಆದೇಶಿಸಿತ್ತು. ಜತೆಗೆ ನಗರಸಭೆಗೆ ನಷ್ಟ ಉಂಟು ಮಾಡಿದ್ದಕ್ಕೆ 10 ಸಾವಿರ ರೂ. ದಂಡ ವಿಧಿಸಿತ್ತು. ಬಳಿಕ ಇದನ್ನು ಪ್ರಶ್ನಿಸಿ ಟ್ರಸ್ಟ್‌ನ ಈಗಿನ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾಗೊಂಡಿತ್ತು. ಕೊನೆಗೆ 2008ರಲ್ಲಿ ಜಿಲ್ಲಾಧಿಕಾರಿ ಸುಬೋಧ್ ಯಾದವ್ ವಶಪಡಿಸಿಕೊಳ್ಳಲು ಸೂಚಿಸಿದ್ದರೂ ರಾಜಕೀಯ ಪ್ರಭಾವದಿಂದ ಅನುಷ್ಠಾನಗೊಂಡಿರಲಿಲ್ಲ.

    ಸಿಬ್ಬಂದಿ, ಮಕ್ಕಳಿಗೆ ಸಮಸ್ಯೆ ಇಲ್ಲ: ಇದೀಗ ಪಂಚಗಿರಿ ಬೋಧನಾ ಪ್ರೌಢಶಾಲೆ ಹೆಸರು ಮುನ್ಸಿಪಲ್ ಹೈಸ್ಕೂಲ್ ಎಂಬುದಾಗಿ ಬದಲಾಗಿದೆ. ಇನ್ನು ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಆದರೆ, ಅಧಿಕಾರವು ಖಾಸಗಿ ಟ್ರಸ್ಟ್ ಬದಲಿಗೆ ನಗರಸಭೆ ಅಧೀನದಲ್ಲಿರುತ್ತದೆ ಎಂದು ಜಿಲ್ಲಾಡಳಿತ ಅಭಯ ನೀಡಿದೆ. ಮತ್ತೊಂದೆಡೆ ದಶಕಗಳ ವಿವಾದಕ್ಕೆ ತೆರೆ ಬಿದ್ದಿದೆ.

    ಅಕ್ರಮವಾಗಿ ಅಧೀನದಲ್ಲಿಟ್ಟುಕೊಂಡಿದ್ದ ನಗರಸಭೆಯ ಶಾಲೆಯನ್ನು ಟ್ರಸ್ಟ್ ನಿಂದ ವಶಪಡಿಸಿಕೊಂಡಿದ್ದರೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಯಾವುದೇ ತೊಂದರೆಯಾಗುವುದಿಲ್ಲ. ಎಂದಿನಂತೆ ಕಾರ್ಯ ನಿರ್ವಹಿಸಲಿದೆ.
    ಆರ್.ಲತಾ, ಜಿಲ್ಲಾಧಿಕಾರಿ

    ಶಾಲೆಯನ್ನು ನಗರಸಭೆ ಸುಪರ್ದಿಗೆ ತೆಗೆದುಕೊಂಡಿರುವುದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಅಂತಿಮವಾಗಿ ನಮಗೆ ಜಯ ಸಿಗುವ ವಿಶ್ವಾಸವಿದೆ.
    ಕೆವಿ.ನವೀನ್ ಕಿರಣ್, ಕೆ.ವಿ.ಶಿಕ್ಷಣ ದತ್ತಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts