More

    ನ. 15ರವರೆಗೆ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ

    ಚಿತ್ರದುರ್ಗ: ದೀಪಾವಳಿ ಅಂಗವಾಗಿ ಜಿಲ್ಲೆಯ ನಗರ, ಪಟ್ಟಣಗಳ ಬಯಲು ಪ್ರದೇಶದಲ್ಲಿ ನ. 10ರಿಂದ 15ರವರೆಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಶುಕ್ರವಾರ ಆದೇಶಿಸಿದ್ದಾರೆ.

    ಸಾರ್ವಜನಿಕರ ಆಸ್ತಿ ಸುರಕ್ಷತೆಗಾಗಿ ಪರವಾನಗಿ ಹೊಂದಿದ, 2023ನೇ ಸಾಲಿಗೆ ನವೀಕರಿಸಿಕೊಂಡವರಿಗೆ ನಿಗದಿತ ಸ್ಥಳ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಪಟಾಕಿ ವ್ಯಾಪಾರ ಮಾಡುವಂತಿಲ್ಲ ಎಂದು ಸೂಚಿಸಿದ್ದಾರೆ.

    ಸ್ಥಳ ವಿವರ: ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲೆ, ಹಿರಿಯೂರು ನೆಹರು ಮೈದಾನ, ಚಳ್ಳಕೆರೆ ಬಿಸಿ ನೀರು ಮುದ್ದಪ್ಪ ಪ್ರೌಢಶಾಲೆ, ಹೊಳಲ್ಕೆರೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಕನ್ನಡ ಮತ್ತು ಉರ್ದು ಪಾಠಶಾಲೆ, ಹೊಸದುರ್ಗ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣ, ಹೊಸದುರ್ಗದ ವೀರಭದ್ರಸ್ವಾಮಿ ದೇಗುಲ ಹಾಗೂ ಪೊಲೀಸ್ ಕ್ವಾಟ್ರರ್ಸ್ ಮುಂಭಾಗ, ಮೊಳಕಾಲ್ಮುರು ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆ ಬಯಲು ಪ್ರದೇಶವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಷರತ್ತು: ಶೆಡ್ ನಿಯಮಾನುಸಾರ ನಿರ್ಮಿಸಬೇಕು. ಸುಲಭವಾಗಿ ಬೆಂಕಿ ಹತ್ತುವ ವಸ್ತುಗಳನ್ನು ಇಡಬಾರದು. ಅಡುಗೆ, ಧೂಮಪಾನ ನಿಷೇಧಿಸಿರುವ ಫಲಕ ಹಾಕಬೇಕು. ಪರವಾನಗಿ ಪತ್ರ ಕಡ್ಡಾಯ. ಅಪಘಾತ ಉಂಟಾದಲ್ಲಿ ಜೀವ ರಕ್ಷಣೆಗಾಗಿ ಮಳಿಗೆಗಳ ಮುಂಭಾಗ, ಹಿಂಭಾಗ ಸುಲಭವಾಗಿ ಪ್ರವೇಶಿಸಲು ವ್ಯವಸ್ಥೆ ಮಾಡಿಕೊಂಡಿರಬೇಕು. ಬೆಂಕಿ ತಡೆಗಟ್ಟುವ ಸಾಧನಗಳನ್ನು ನಿರ್ಮಾಣಕ್ಕೆ ಉಪಯೋಗಿಸಬೇಕು. ಅಗ್ನಿಶಮನ ವಸ್ತುಗಳನ್ನು ಶೇಖರಿಸಿ ಇಟ್ಟುಕೊಂಡಿರಬೇಕು. ರಾತ್ರಿ ಯಾರೂ ಮಲಗುವಂತಿಲ್ಲ. ಸುಪ್ರೀಂ ಕೋರ್ಟ್ ಆದೇಶ, ಸರ್ಕಾರ ಮಾರ್ಗಸೂಚಿ ಪರಿಷ್ಕೃತಗೊಳಿಸಿದಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು.

    ಮಾರಾಟಕ್ಕಾಗಿ ಸಂಗ್ರಹಿಸಲಾದ ಯಾವುದೇ ಪಟಾಕಿಗಳು ಲಿಥಿಯಂ, ಅಂಟೆಮನಿ ಪಾದರಸ, ಅರ್ಸೆನಿಕ್, ಸೀಸ, ಸ್ಟ್ರಾಂಷಿಯಂ, ಕ್ರೋಮೆಟ್ ಸಂಯುಕ್ತಗಳನ್ನು ಹೊಂದಿರಬಾರದು.

    ಹಸಿರು ಪಟಾಕಿ ಅಧಿಕೃತ ಉತ್ಪಾದಕರಿಂದ ಹಾಗೂ ಪ್ರಾಧಿಕಾರದಿಂದ ಅನುಮೋದನೆಗೊಂಡು ಉತ್ಪಾದಿಸಲಾಗಿದೆಯೇ ಎಂಬುದರ ಕುರಿತು ಅವುಗಳ ಮೇಲೆ ನಿಗದಿಪಡಿಸಿರುವ ಲೋಗೋ, ಬಾರ್‌ಕೋಡ್ ಅನ್ನು ಮೊಬೈಲ್ನಲ್ಲಿ ಡೌನ್‌ಲೋಡ್ ಮಾಡಿ ಪರಿಶೀಲಿಸಬಹುದಾಗಿದೆ. ಹಚ್ಚಲು ರಾತ್ರಿ 8ರಿಂದ 10ರವರೆಗೆ ಸಮಯ ಸೀಮಿತಗೊಳಿಸಿದ್ದು, ಈ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts