More

    ನ್ಯಾಯಾಲಯದಲ್ಲಿ ಥರ್ಮಲ್ ಸ್ಕ್ಯಾನಿಂಗ್

    ಶಿವಮೊಗ್ಗ: ದಿನೇದಿನೆ ಜಿಲ್ಲೆಯಲ್ಲಿ ಕರೊನಾ ವಿರುದ್ಧದ ಜಾಗೃತಿ ಹೆಚ್ಚುತ್ತಿದೆ. ಇದರ ನಡುವೆ ಜಿಲ್ಲೆಯಲ್ಲಿ ಕರೊನಾ ವೈರಸ್ ಪ್ರಕರಣ ಪತ್ತೆಯಾಗದಿದ್ದರೂ ಸಾರ್ವಜನಿಕರಲ್ಲಿ ಭೀತಿಯೂ ಆವರಿಸಿದೆ. ಜನನಿಬಿಡ ಸ್ಥಳಗಳಲ್ಲೂ ಜನರ ಸಂಚಾರ ವಿರಳವಾಗಿದೆ.

    ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಥರ್ಮಲ್ ಸ್ಕ್ಯಾನಿಂಗ್ ನಡೆಸಲಾಯಿತು. ನ್ಯಾಯಾಲಯದ ಪ್ರವೇಶ ದ್ವಾರದಲ್ಲಿ ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರನ್ನು ತಪಾಸಣೆ ಮಾಡಿ ಒಳಗೆ ಬಿಡಲಾಯಿತು.

    ಕೇವಲ ಒಂದು ಕಡೆ ಮಾತ್ರ ಥರ್ಮಲ್ ಸ್ಕ್ಯಾನಿಂಗ್ ಇದ್ದುದ್ದರಿಂದ ಪ್ರತಿಯೊಬ್ಬರ ದೇಹದ ಉಷ್ಣಾಂಶ ತಪಾಸಣೆ ಮಾಡುವುದು ವಿಳಂಬವಾಯಿತು. ಹೀಗಾಗಿ ನೂರಾರು ಮಂದಿ ಸರದಿಯಲ್ಲಿ ಸುಮಾರು ಒಂದು ತಾಸು ಕಾಯಬೇಕಾಯಿತು. ಮೂರ್ನಾಲ್ಕು ಕಡೆ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದರೆ ಉತ್ತಮವಾಗುತ್ತಿತ್ತು ಎಂದು ಕೆಲವರು ಅಭಿಪ್ರಾಯಪಟ್ಟರು.

    ನ್ಯಾಯಾಲಯದ ಕಲಾಪಕ್ಕೆ ಕಕ್ಷಿದಾರರನ್ನು ನಿರ್ಬಂಧಿಸಿ, ವಕೀಲರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು. ತುರ್ತು ಪ್ರಕರಣಗಳನ್ನು ಬಿಟ್ಟು ಉಳಿದವುಗಳ ವಿಚಾರಣೆ ಮುಂದೂಡಲಾಯಿತು. ನ್ಯಾಯಾಲಯ ಆವರಣದಲ್ಲಿ ಅನಗತ್ಯವಾಗಿ ನಿಂತಿದ್ದವರನ್ನು ಹೊರಗೆ ಕಳುಹಿಸಲಾಯಿತು. ವಕೀಲರ ಭವನದ ಪ್ರವೇಶ ದ್ವಾರದಲ್ಲಿ ವಕೀಲರಿಗೆ ಮಾತ್ರ ಪ್ರವೇಶ, ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂಬ ನಾಮಫಲಕ ಅಳವಡಿಸಲಾಗಿತ್ತು.

    ಕೈದಿಗಳಿಗೂ ಸ್ಕ್ಯಾನಿಂಗ್: ವಿಚಾರಣೆಗೆಂದು ನ್ಯಾಯಾಲಯಕ್ಕೆ ಆಗಮಿಸಿದ್ದ ವಿಚಾರಣಾಧೀನ ಕೈದಿಗಳಿಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಿದ ಬಳಿಕವೇ ವಿಚಾರಣೆಗೆ ಕರೆದೊಯ್ಯಲಾಯಿತು. ಆರೋಗ್ಯ ಇಲಾಖೆ ಮೂಲಕ ನ್ಯಾಯಾಲಯದಲ್ಲಿ ಕಲ್ಪಿಸಿದ್ದ ಈ ವ್ಯವಸ್ಥೆ ಬಗ್ಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಅಧಿಕ ಉಷ್ಣತೆ ಇದ್ದರೆ ತಪಾಸಣೆ: ಥರ್ಮಲ್ ಸ್ಕ್ಯಾನಿಂಗ್ ವೇಳೆ ದೇಹದ ಸಾಮಾನ್ಯ ಉಷ್ಣತೆಗಿಂತಲೂ ಅಧಿಕ ಉಷ್ಣತೆ ಕಂಡುಬಂದ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸುವುದು ಪರೀಕ್ಷೆಯ ಉದ್ದೇಶವಾಗಿತ್ತು. ಆ ವ್ಯಕ್ತಿ ಕಳೆದೊಂದು ತಿಂಗಳಿನಿಂದ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾನೆ. ಕರೊನಾ ವೈರಸ್ ಹೊಂದಿದವರ ಸಂಪರ್ಕಕ್ಕೆ ಎಲ್ಲಾದರೂ ಬಂದಿದ್ದನೇ ಎಂಬುದನ್ನು ತಿಳಿಯುವುದು ಪ್ರಮುಖ ಉದ್ದೇಶ. ಮುಂದಿನ ದಿನಗಳಲ್ಲಿ ಕರೊನಾ ಹತೋಟಿಗೆ ಬಾರದಿದ್ದರೆ ಬೇರೆ ಕಚೇರಿಗಳಲ್ಲಿ, ಜನರು ಹೆಚ್ಚು ಭೇಟಿ ನೀಡುವ ಪ್ರದೇಶದಲ್ಲೂ ಈ ವ್ಯವಸ್ಥೆ ಅಳವಡಿಸಲು ಆರೋಗ್ಯ ಇಲಾಖೆ ತೀರ್ವನಿಸಿದೆ ಎನ್ನಲಾಗಿದೆ.

    ಶರಣ ಸಂಗಮ ಮುಂದಕ್ಕೆ: ಶಿವಮೊಗ್ಗ ಬಸವಕೇಂದ್ರದಲ್ಲಿ ಮಾ.20ರಂದು ಹಾಗೂ ಭದ್ರಾವತಿಯ ಅಕ್ಕಮಹಾದೇವಿ ಬಳಗದಿಂದ ಮಾ.21ರಂದು ನಡೆಯಬೇಕಿದ್ದ ಶರಣ ಸಂಗಮವನ್ನು ಕರೊನಾ ಕಾರಣದಿಂದ ಮುಂದೂಡಲಾಗಿದೆ ಎಂದು ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವಮರುಳಸಿದ್ಧ ಸ್ವಾಮೀಜಿ ತಿಳಿಸಿದ್ದಾರೆ. ವೈರಸ್ ಹರಡುವ ಭೀತಿ ಇರುವುದರಿಂದ, ಪ್ರಜೆಗಳ ಆರೋಗ್ಯದ ಬಗ್ಗೆ ಕಾಳಜಿಯಿಂದ ಯಾವುದೇ ಸಭೆ ಸಮಾರಂಭ, ಮದುವೆ, ಜಾತ್ರೆಗಳನ್ನು ನಡೆಸದಂತೆ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿರುವುದಾಗಿ ಶ್ರೀಗಳು ಮಾಹಿತಿ ನೀಡಿದ್ದಾರೆ.

    ಹೆಚ್ಚಿದ ಕೈಗವಸು ಬಳಕೆ: ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ಬ್ಯಾಂಕ್, ಗ್ಯಾಸ್ ಏಜೆನ್ಸಿಗಳಲ್ಲಿ, ಹೆಚ್ಚಿನ ವಹಿವಾಟು ಇರುವ ವಾಣಿಜ್ಯ ಸಂಸ್ಥೆಗಳಲ್ಲಿ ಕ್ಯಾಷಿಯರ್​ಗಳು ಕೈಗವಸು ಬಳಸುತ್ತಿದ್ದಾರೆ. ನೋಟಿನ ಮೂಲಕ ವೈರಸ್ ಹರಡುತ್ತದೆ ಎಂಬ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕರೊಂದಿಗೆ ಸಂಪರ್ಕ ಹೊಂದಿರುವ ಬ್ಯಾಂಕ್ ಹಾಗೂ ವಾಣಿಜ್ಯ ಸಂಸ್ಥೆಗಳ ಸಿಬ್ಬಂದಿ ಮಾಸ್ಕ್ ತೊಟ್ಟು ಮುಂಜಾಗ್ರತೆ ವಹಿಸುತ್ತಿದ್ದಾರೆ.

    ಮಂದಿರದಲ್ಲಿ ಪೂಜೆ, ದರ್ಗಾದಲ್ಲಿ ಪ್ರಾರ್ಥನೆ: ಕರೊನಾ ವೈರಸ್ ಕೂಡಲೇ ತನ್ನ ಪ್ರಭಾವ ಕಳೆದುಕೊಳ್ಳಲಿ, ಎಲ್ಲರಿಗೂ ಆರೋಗ್ಯ ಲಭಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ದೇವರ ಮೊರೆ ಹೋಗಿದ್ದಾರೆ. ಮಂಗಳವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ನೇತೃತ್ವದಲ್ಲಿ ಮುಖಂಡರು ಕೋಟೆ ಮಾರಿಕಾಂಬೆಗೆ 101 ಕಾಯಿ ಒಡೆದು ಪೂಜೆ ಸಲ್ಲಿಸಿದರು. ನಂತರ ಮಹಾವೀರ ವೃತ್ತದ ಬಳಿ ಇರುವ ಹಜ್ರತ್ ಸೈಯದ್ ಷಾ ಅಲೀಂ ದಿವಾನ್ ಷಾ ಖಾದ್ರಿ ದರ್ಗಾದಲ್ಲಿ ಹೂವಿನ ಚಾದರ ಹೊದಿಸಿ ಪ್ರಾರ್ಥನೆ ಸಲ್ಲಿಸಿದರು.

    ಎಚ್.ಎಸ್.ಸುಂದರೇಶ್ ಮಾತನಾಡಿ, ಜಗನ್ಮಾತೆ ಕೋಟೆ ಮಾರಿಕಾಂಬೆ ನಮ್ಮೆಲ್ಲರನ್ನೂ ಕರೊನಾದಿಂದ ರಕ್ಷಿಸು ಎಂದು ಪ್ರಾರ್ಥಿಸಿದ್ದೇವೆ. ಚೀನಾದಲ್ಲಿ ಉಂಟಾದ ಅನಾಹುತ ಇಲ್ಲಿ ಆಗಬಾರದು. ಕೇಂದ್ರ ಸರ್ಕಾರ ತಡವಾಗಿ ಎಚ್ಚೆತ್ತುಕೊಂಡಿದ್ದರಿಂದ ಪರಿಸ್ಥಿತಿ ಕೊಂಚ ಆತಂಕಕ್ಕೆ ಕಾರಣವಾಗಿದೆ. ಆದರೂ ಪ್ರಧಾನಿ ಸಾರ್ಕ್ ರಾಷ್ಟ್ರಗಳ ಪ್ರಮುಖರೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ದೂರಿದರು.

    ಸಂತೆಯಿದ್ದರೂ ಜನರಿಲ್ಲ: ಶಿವಮೊಗ್ಗದಲ್ಲಿ ಮಂಗಳವಾರ ಎಂದಿನಂತೆಯೇ ವಾರದ ಸಂತೆ ನಡೆಯಿತು. ವ್ಯಾಪಾರಿಗಳು ಪ್ರತಿ ಸಂತೆಯಂತೆಯೇ ತರಕಾರಿ, ದಿನಸಿ ಪದಾರ್ಥಗಳನ್ನು ಮಾರಾಟಕ್ಕೆ ತಂದಿದ್ದರು. ಆದರೆ ಕರೊನಾ ಭೀತಿಯಿಂದ ಜನರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಪ್ರತಿ ಸಂತೆ ಸಂದರ್ಭದಲ್ಲಿ ಮಿಳಘಟ್ಟ ಮುಖ್ಯ ರಸ್ತೆಯಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆ ಮಂಗಳವಾರ ಕಂಡುಬರಲಿಲ್ಲ.

    ಕಚೇರಿಗಳು ಖಾಲಿ ಖಾಲಿ: ಜಿಲ್ಲಾ ಕೇಂದ್ರದ ಇತರೆ ಕಚೇರಿಗಳಲ್ಲಿ ಪ್ರತಿದಿನ ಜನಸಂದಣಿ ಇಲ್ಲದಿದ್ದರೂ ಜಿಲ್ಲಾಧಿಕಾರಿ ಕಚೇರಿಯಲ್ಲಂತೂ ಪ್ರತಿದಿನ ನೂರಾರು ಮಂದಿ ಕಂಡುಬರುತ್ತಿದ್ದರು. ಆದರೆ ಮಂಗಳವಾರ ಡಿಸಿ ಕಚೇರಿಯಲ್ಲಿ ಪ್ರತಿದಿನಕ್ಕಿಂತ ಅರ್ಧದಷ್ಟು ಮಂದಿ ಮಾತ್ರ ಇದ್ದರು. ಸಾರಿಗೆ ಇಲಾಖೆ, ಸಬ್​ರಿಜಿಸ್ಟ್ರಾರ್, ತಹಸೀಲ್ದಾರ್ ಕಚೇರಿಗಳಲ್ಲಿ ತಕ್ಕ ಮಟ್ಟಿಗೆ ನಾಗರಿಕರು ಆಗಮಿಸಿದ್ದರು.

    ಕಳೆಗುಂದಿದ ಮಾರಿ ಹಬ್ಬ: ಶಿವಮೊಗ್ಗದ ವಿದ್ಯಾನಗರ, ಹರಿಗೆ, ಎಂಆರ್​ಎಸ್, ಇಸ್ಲಾಪುರ ಭಾಗದಲ್ಲಿ ಮಂಗಳವಾರದಿಂದ ಆರಂಭವಾಗಬೇಕಿದ್ದ ಮಾರಿ ಹಬ್ಬ ಕರೊನಾ ಪರಿಣಾಮವಾಗಿ ಕಳೆಗುಂದಿದೆ. ಜಾತ್ರೆ ನಡೆಸದಂತೆ ರಾಜ್ಯ ಸರ್ಕಾರ ಆದೇಶಿಸಿದ್ದರೂ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಸಂಪ್ರದಾಯದಂತೆ, ಸರಳವಾಗಿ ಹಬ್ಬದ ಆಚರಣೆಗೆ ನಿರ್ಧರಿಸಲಾಗಿತ್ತು. ತುಂಗಾನದಿಯಲ್ಲಿ ನಡೆಯುವ ಗಂಗಾ ಪೂಜೆ ಹಾಗೂ ರಾಜಬೀದಿ ಉತ್ಸವ ಆಚರಿಸದಿರಲು ತೀರ್ವನಿಸಲಾಗಿದೆ.

    ನಗರಪಾಲಿಕೆ ವಿಪಕ್ಷ ನಾಯಕ ಎಚ್.ಸಿ.ಯೋಗೀಶ್, ಪ್ರಮುಖರಾದ ವಿಶ್ವನಾಥ ಕಾಶಿ, ಕೆ.ರಂಗನಾಥ್, ಉಮಾಪತಿ, ರಾಮೇಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts