More

    ನ್ಯಾಯವಾದಿಗಳಿಗಿರಲಿ ಅರ್ಪಣಾ ಮನೋಭಾವ -ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿಕೆ – ವಕೀಲರ ದಿನಾಚರಣೆ 

    ದಾವಣಗೆರೆ: ವಕೀಲ ವೃತ್ತಿಯಲ್ಲಿ ಅನೇಕ ಸವಾಲುಗಳಿದ್ದು, ನಿಯಮ ಪಾಲನೆ ಜತೆಗೆ ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
    ಜಿಲ್ಲಾ ವಕೀಲರ ಸಂಘದಿಂದ ನಗರದ ವಕೀಲರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
    ವಕೀಲರು ಸಮಾಜದಲ್ಲಿ ನಿರ್ವಹಿಸಬಹುದಾದ ಕಾರ್ಯಗಳಿಗೆ ಮಿತಿಯಿಲ್ಲ. ವಕೀಲರ ಶ್ರಮ ಮತ್ತು ತ್ಯಾಗ ಸಮಾಜ ಗುರುತಿಸುತ್ತದೆ. ಪರಿಶ್ರಮದಿಂದ ಮಾತ್ರ ವಕೀಲ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.
    ಜಿಲ್ಲಾ ಮಕ್ಕಳಸ್ನೇಹಿ ನ್ಯಾಯಾಲಯದ ನ್ಯಾಯಾಧೀಶ ಶ್ರೀಪಾದ ಮಾತನಾಡಿ, ರಷ್ಯಾ, ಫ್ರಾನ್ಸ್ ಹಾಗೂ ಅಮೆರಿಕ ಮುಂತಾದ ದೇಶಗಳಲ್ಲಿ ನಡೆದ ಕ್ರಾಂತಿಯಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
    ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್ ಮಾತನಾಡಿ, ಇಂದು ರಾಜಕಾರಣಿಗಳಿಗೆ ಕಾನೂನಿನ ಅರಿವು ಹೆಚ್ಚಾಗಿ ಇಲ್ಲದಿರುವ ಕಾರಣ ಶಾಸನ ರೂಪಿಸುವಾಗ ಹಿರಿಯ ವಕೀಲರ ಸಲಹೆ ಪಡೆಯುವುದು ಸೂಕ್ತ. ವಕೀಲರ ದಿನಾಚರಣೆ ಸಂದರ್ಭದಲ್ಲಿ ವಕೀಲರು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ವೃತ್ತಿ ಘನತೆ ಹೆಚ್ಚಿಸಬೇಕು ಎಂದರು.
    ಹಿರಿಯ ವಕೀಲ ಎಂ.ಬಿ. ಶಿವಾನಂದಪ್ಪ ಮಾತನಾಡಿ, ಕೊನೆಯಿಲ್ಲದ ವಕೀಲರ ವೃತ್ತಿಯಲ್ಲಿ ತಮ್ಮನ್ನು ಬದಿಗಿರಿಸಿ ಕಕ್ಷಿದಾರರ ನೋವನ್ನು ಸರಿಯಾಗಿ ಅರ್ಥೈಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೊಡಿಸಲು ಮುಂದಾಗಬೇಕು ಎಂದು ತಿಳಿಸಿದರು.
    ಹಿರಿಯ ನ್ಯಾಯವಾದಿ ಎಚ್.ಎನ್. ರಾಜಶೇಖರಪ್ಪ ಮಾತನಾಡಿ, ವಕೀಲರು ಭಾಷೆಯ ಮೇಲೆ ಪ್ರೌಢಿಮೆ ಸಾಧಿಸುವುದು ಅಗತ್ಯ, ಕಕ್ಷಿದಾರನಿಗೆ ಅನ್ಯಾಯವಾಗಿರುವ ಅಂಶ ಹುಡುಕಿ ತೆಗೆದು ನ್ಯಾಯಾಲಯದ ಮುಂದೆ ಸಮರ್ಥವಾಗಿ ಮಂಡಿಸಿ ನ್ಯಾಯ ಒದಗಿಸಬೇಕು ಎಂದು ಹೇಳಿದರು.
    ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮರ್ಪಕವಾಗಿ ಕೆಲಸ ಮಾಡುವಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದರು.
    ಹಿರಿಯ ವಕೀಲರಾದ ಎಚ್.ಎನ್. ರಾಜಶೇಖರಪ್ಪ, ಎಂ.ಬಿ. ಶಿವಾನಂದಪ್ಪ ಹಾಗೂ ರಾಮಚಂದ್ರ ಕಲಾಲ್ ಅವರನ್ನು ಸನ್ಮಾನಿಸಲಾಯಿತು. 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಆರ್. ಪ್ರಸನ್ನಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್, ಕಾರ್ಯದರ್ಶಿ ಎಸ್. ಬಸವರಾಜ್, ಸಹಕಾರ್ಯದರ್ಶಿ ಎ.ಎಸ್. ಮಂಜುನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಾಗೀಶ್ ಕಟಿಗೆಹಳ್ಳಿಮಠ್, ಬಿ. ಅಜ್ಜಯ್ಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts