More

    ನೌಕಾಪಡೆ ಸೇರಿದ ಗ್ರಾಮೀಣ ಪ್ರತಿಭೆ

    ಕೊಡೇಕಲ್ : ಭಾರತೀಯ ಸೇನೆಯ ಅಗ್ನಿವೀರರ ನೇಮಕಾತಿಯಲ್ಲಿ ನೌಕಾ ದಳಕ್ಕೆ ಆಯ್ಕೆಯಾಗಿ ತರಬೇತಿ ಪೂರ್ಣಗೊಳಿಸಿದ ಬಳಿಕ ಸ್ವಗ್ರಾಮ ದೇವರಗಡ್ಡಿಗೆ ಮಂಗಳವಾರ ಆಗಮಿಸಿದ ಯುವಕನಿಗೆ ಪುಷ್ಪವೃಷ್ಟಿ ಮೂಲಕ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು.

    ಜಗನ್ಮಾತೆ ಗಡ್ಡಿ ಗದ್ದೆಮ್ಮ ದೇವಿ ದೇವಸ್ಥಾನದಿಂದ ಖ್ಯಾತಿ ಪಡೆದ ಗಡಿ ಗ್ರಾಮ ದೇವರಗಡ್ಡಿಯ ರೇಣುಕಾರಾಜ ವಿಠಪ್ಪ ಗುರಿಕಾರ ಬಾಲ್ಯದಲ್ಲಿ ಕಂಡ ಕನಸು ನನಸಾಗಿಸಿಕೊಳ್ಳುವ ಮೂಲಕ ಭಾರತೀಯ ನೌಕಾ ಪಡೆಯಲ್ಲಿ ಎಸ್‌ಎಸ್‌ಆರ್ ಹುದ್ದೆ ಪಡೆದು ತವರೂರಿಗೆ ಕೀರ್ತಿ ತಂದಿದ್ದಾನೆ.

    ರೈತ ವಿಠಪ್ಪ ಗುರಿಕಾರ-ದೇವಮ್ಮ ದಂಪತಿ ಎರಡನೇ ಮಗ ರೇಣುಕಾರಾಜ ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಕಲಿತ ಬಳಿಕ ರಾಯಚೂರು ಜಿಲ್ಲೆ ಲಿಂಗಸೂಗುರು ತಾಲೂಕಿನ ರೋಡಲಬಂಡಾ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ್ದಾನೆ. ನಾಗರಬೆಟ್ಟದ ಎಕ್ಸ್ಪರ್ಟ್ ಸೈನ್ಸ್ ಪ್ರಥಮ ಪಿಯುಸಿ ಹಾಗೂ ದ್ವಿತೀಯ ವರ್ಷದ ಶಿಕ್ಷಣ ಲಿಂಗಸೂಗುರು ಸರ್ ಎಂ.ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಮಾಡಿ ಶೇ.೮೨ ಅಂಕ ಪಡೆದ ಈತ ಇದೀಗ ಇಂಡಿಯನ್ ನೇವಿ ಸೇರಿ ಭಾರತ ಮಾತೆಯ ಸೇವೆಗೆ ಅಣಿಯಾಗಿದ್ದಾನೆ.

    ೨೦೨೩ರ ಮಾರ್ಚ್ನಲ್ಲಿ ಇಂಡಿಯನ್ ಆರ್ಮಿ ಅಗ್ನಿವೀರರ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿ ಲಿಖಿತ, ದೈಹಿಕ, ವೈದ್ಯಕೀಯ ಪರೀಕ್ಷೆಗಳಲ್ಲಿ ಪಾಸಾದ ರೇಣುಕಾರಾಜ ನಂತರ ಪ್ರಥಮ ಹಂತದ ತರಬೇತಿಯನ್ನು ಒಡಿಶಾ ರಾಜ್ಯದಲ್ಲಿ ಪೂರ್ಣಗೊಳಿಸಿದ ಬಳಿಕ ಇಂಡಿಯನ್ ನೇವಿಯ ಎಸ್‌ಎಸ್‌ಆರ್ ಹುದ್ದೆಯಲ್ಲಿ ಕೆಲಸ ನಿರ್ವಹಿಸಲು ಸಜ್ಜಾಗಿದ್ದಾನೆ.

    ಬಾಲ್ಯದಿಂದಲೆ ಭಾರತೀಯ ಸೇನೆ ಬಗ್ಗೆ ವಿಶೇಷ ಆಕರ್ಷಣೆ ಮತ್ತು ಅಭಿಮಾನ ಹೊಂದಿದ್ದ ರೇಣುಕಾರಾಜಗೆ ಬಿಳಿ ಸಮವಸ್ತçದಲ್ಲಿ ಆಕರ್ಷಕ ಪಥ ಸಂಚಲನ ಮಾಡುವ ನೌಕಾಪಡೆಯ ಸೈನಿಕರನ್ನು ಕಂಡರೆ ಎಲ್ಲಿಲ್ಲದ ಖುಷಿ. ಅವರಂತೆ ಆಗಬೇಕೆಂದು ಬಾಲ್ಯದಲ್ಲಿ ಕಂಡಿದ್ದ ಕನಸನ್ನು ಇದೀಗ ಈಡೇರಿಸಿಕೊಂಡಿದ್ದಾನೆ.
    ಒಡಿಶಾದಲ್ಲಿ ತರಬೇತಿ ಮುಗಿಸಿ ಮಂಗಳವಾರ ತನ್ನೂರಿಗೆ ಬಂದ ರೇಣುಕಾರಾಜನನ್ನು ಗ್ರಾಮಸ್ಥರು ವಾದ್ಯ-ಮೇಳಗಳೊಂದಿಗೆ ಪುಷ್ಪವೃಷ್ಟಿಗೈದು ಅದ್ದೂರಿ ಮೆರವಣಿಗೆ ಮೂಲಕ ಭವ್ಯ ಸ್ವಾಗತ ಕೋರಿದರು. ತಾಯಿ ಮತ್ತು ಸಹೋದರಿ ಆರತಿ ಬೆಳಗಿದ ನಂತರ ತನ್ನ ತಲೆ ಮೇಲಿದ್ದ ಇಂಡಿಯನ್ ನೇವಿ ಕ್ಯಾಪ್ ತೆಗೆದು ತಂದೆ ತಲೆಗೆ ಹಾಕಿ ನಮಸ್ಕರಿಸಿದ್ದನ್ನು ನೋಡಿದ ಗ್ರಾಮಸ್ಥರ ಕಣ್ಣಾಲಿಗಳು ತುಂಬಿ ಇದ್ದರೆ ರೇಣುಕಾರಾಜನಂತಹ ಮಗ ಇರಬೇಕು ಎಂಬ ಹೆಮ್ಮೆಯ ಮಾತುಗಳು ಕೇಳಿಸಿದವು.

    ಕೊಡೇಕಲ್ ಹೋಬಳಿಯ ವಿವಿಧ ಗ್ರಾಮಗಳ ಕೆಲ ಯುವಕರು ಭೂ ಸೇನೆಗೆ ಸೇರಿ ಭಾರತ ಮಾತೆ ಸೇವೆ ಮಾಡುತ್ತಿದ್ದಾರೆ. ಇದೀಗ ನೌಕಾ ಪಡೆಗೆ ಮೊದಲ ಬಾರಿಗೆ ಗ್ರಾಮೀಣ ಯುವನೊಬ್ಬ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದು ಹೆಮ್ಮೆಯ ವಿಷಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts