More

    ನೋಡಿ ಸ್ವಾಮಿ ನಾವಿರೋದೆ ಹೀಗೆ…

    ಧಾರವಾಡ: ಲಾಕ್​ಡೌನ್ ಹಿನ್ನೆಲೆಯಲ್ಲಿ ನಗರದ ಹೊಸ ಎಪಿಎಂಸಿ ಆವರಣದಲ್ಲಿ ಜನಸಂದಣಿ ಹತೋಟಿಗೆ ತರಲು ಆಡಳಿತ ಮಂಡಳಿ ಹಾಗೂ ಪೊಲೀಸರು ಹರಸಾಹಸಪಟ್ಟಿದ್ದರು. ಆದರೆ, ಕೆಲ ದಿನಗಳಲ್ಲೇ ಮತ್ತೆ ಯಥಾಸ್ಥಿಗೆ ಆಗಮಿಸಿದ್ದು, ಯಾರು ಏನೇ ಕ್ರಮಕೈಗೊಂಡರೂ ನಾವು ಮಾತ್ರ ಹೀಗೆ ಎಂಬುದನ್ನು ಜನರು ಹಾಗೂ ವ್ಯಾಪಾರಿಗಳು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

    ಕರೊನಾ ವೈರಸ್​ನಿಂದ ಪಾರಾಗಲು ಕೇಂದ್ರ ಸರ್ಕಾರ ನೀಡಿರುವ ಆದೇಶಕ್ಕೆ ಇಲ್ಲಿನ ಮಾತ್ರ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಹೆಚ್ಚಿನ ಜನರು ಮಾರುಕಟ್ಟೆಗೆ ಆಗಮಿಸದಿರಲಿ ಎಂಬ ಕಾರಣಕ್ಕೆ ಆವರಣದ ದ್ವಾರಗಳನ್ನು ಬಂದ್ ಮಾಡಿ ಬಂದೋಬಸ್ತ್ ಮಾಡಲಾಗಿದೆ. ಆದಾಗ್ಯೂ ಒಂದಿಲ್ಲ ಒಂದು ನೆಪದಲ್ಲಿ ಆವರಣ ಪ್ರವೇಶ ಮಾಡುವ ಜನರು ಸಾಮಾಜಿಕ ಅಂತರ ಸಹ ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಕೆಲ ದಿನಗಳ ಹಿಂದೆ ಕೈಗೊಂಡ ಕ್ರಮಗಳು ಸಂಪೂರ್ಣ ವಿಫಲವಾದಂತೆ ಕಾಣುತ್ತಿವೆ.

    ನಮ್ಮ ನಗರದಲ್ಲೂ ಕರೊನಾ ಪ್ರಕರಣ ದೃಢಪಟ್ಟಿದೆ ಎನ್ನುವುದನ್ನು ಅನೇಕರು ಮರೆತಂತಿದೆ. ಶೇ. 25ರಷ್ಟು ವ್ಯಾಪಾರಿಗಳು ಮತ್ತು ಸಾರ್ವಜನಿಕರನ್ನು ಹೊರತುಪಡಿಸಿ ಉಳಿದವರು ವ್ಯಾಪಾರ-ವಹಿವಾಟು ಸಂದರ್ಭದಲ್ಲಿ ಅನುಸರಿಸಬೇಕಾದ ಯಾವ ಸುರಕ್ಷತಾ ನಿಯಮಗಳನ್ನೂ ಪಾಲಿಸುತ್ತಿಲ್ಲ.

    ಪ್ರಾರಂಭದಲ್ಲಿ ಪೊಲೀಸರು ಜನರಿಗೆ ತಿಳಿವಳಿಕೆ ನೀಡಿದ್ದರು. ಆದರೆ, ಜನ ಅರ್ಥ ಮಾಡಿಕೊಳ್ಳದೇ ಇರುವುದರಿಂದ ಅವರು ಈಗ ಸುಮ್ಮನಾಗಿದ್ದಾರೆ. ಮುಖ್ಯ ದ್ವಾರದ ಬಳಿ ನಿಂತು ಪಾಸ್ ಹೊಂದಿರುವವರನ್ನು ಮಾತ್ರ ಒಳ ಬಿಡುತ್ತಾರೆ. ಎಪಿಎಂಸಿ ಒಳಭಾಗದಲ್ಲಿ ಜನಸಂದಣಿ ಇದ್ದರೂ ನಿಯಂತ್ರಣ ಮಾಡುವುದು ವ್ಯರ್ಥ, ಚದುರಿಸಿದರೂ ಹತ್ತು ನಿಮಿಷದಲ್ಲಿ ಮತ್ತೆ ಗುಂಪುಗೂಡುತ್ತಾರೆ ಎಂದು ಸುಮ್ಮನಾಗುವ ಹಂತಕ್ಕೆ ಬಂದಿದ್ದಾರೆ.

    ಮತ್ತಿಬ್ಬರಿಗೆ ನೋಟಿಸ್ ಜಾರಿ

    ಜನಸಂದಣಿ ಉಂಟಾಗದಂತೆ ವ್ಯಾಪಾರ ನಡೆಸಲು ಮಾರ್ಕಿಂಗ್ ಮಾಡಲಾಗಿತ್ತು. ಆದಾಗ್ಯೂ ನಿಗದಿತ ಜಾಗ ಬಿಟ್ಟು ಮನಸ್ಸಿಗೆ ಬಂದ ಕಡೆಗಳಲ್ಲಿ ವ್ಯಾಪಾರ ನಡೆಸಿದ್ದರಿಂದ ಕಳೆದ ವಾರವಷ್ಟೇ 15 ಜನರಿಗೆ ನೋಟಿಸ್ ನೀಡಲಾಗಿತ್ತು. ನಿಯಮ ಪಾಲಿಸದ ಮತ್ತಿಬ್ಬರಿಗೆ ಶನಿವಾರ ನೋಟಿಸ್ ನೀಡಲಾಗಿದೆ ಎಂದು ಎಪಿಎಂಸಿ ಅಧ್ಯಕ್ಷ ಮಹಾವೀರ್ ಜೈನ್ ತಿಳಿಸಿದ್ದಾರೆ.

    ಕಡಿಮೆಯಾಗುತ್ತಿರುವ ಜನಸ್ಪಂದನೆ

    ಹುಬ್ಬಳ್ಳಿ: ಲಾಕ್​ಡೌನ್​ಗೆ ನಗರದಲ್ಲಿ ಸಾರ್ವಜನಿಕರ ಸ್ಪಂದನೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

    ಚನ್ನಮ್ಮ ವೃತ್ತ, ಲ್ಯಾಮಿಂಗ್ಟನ್ ರಸ್ತೆ, ಸ್ಟೇಶನ್ ರಸ್ತೆ, ಕೊಪ್ಪಿಕರ ರಸ್ತೆ. ಕೋಯಿನ್ ರೋಡ್, ಗೋಕುಲ ರಸ್ತೆ, ವಿದ್ಯಾನಗರ, ಸವೋದಯ ವೃತ್ತ, ಕೇಶ್ವಾಪುರ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ಕಳೆದ 3-4 ದಿನಗಳಿಂದ ಬೈಕ್, ಆಟೊ, ಕಾರು ಸವಾರರ, ಪಾದಚಾರಿಗಳ ತಿರುಗಾಟ ಯಾವುದೇ ಅಳಕಿಲ್ಲದೇ ಮುಂದುವರಿದಿದೆ.

    ರಸ್ತೆ ಪಕ್ಕ ತರಕಾರಿ, ಹಣ್ಣುಗಳ ಮಾರಾಟ ಕಂಡರಂತೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಜವಾಬ್ದಾರಿಯನ್ನೇ ಮರೆತು ಗುಂಪುಗೂಡಿ ಖರೀದಿಸುತ್ತಿದ್ದಾರೆ.

    ತಿಂಗಳು, ವರ್ಷಗಳ ಹಿಂದೆ ವೈದ್ಯರು ಬರೆದುಕೊಟ್ಟ ಮಾತ್ರೆಗಳ ಚೀಟಿ, ಆಸ್ಪತ್ರೆಗಳ ದಾಖಲೆಗಳನ್ನು ಹಿಡಿದುಕೊಂಡು ಅನಗತ್ಯವಾಗಿ ತಿರುಗಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕರೊನಾ ಸೋಂಕು ಹರಡುವುದನ್ನು ತಡೆಯಲು ಅನಗತ್ಯವಾಗಿ ರಸ್ತೆಗೆ ಇಳಿಯದಂತೆ ಸಾಮಾಜಿಕ ತಾಲತಾಣಗಳ ಮೂಲಕ, ಮಾಧ್ಯಮಗಳ ಮೂಲಕ ತಿಳಿವಳಿಕೆ ನೀಡುತ್ತಿದ್ದರೂ ಜನರು ಕಿವಿಗೊಡುತ್ತಿಲ್ಲ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts