More

    ನೋಂದಣಿ ಕಾರ್ಯ ಸ್ಥಗಿತ

    ಕಾರವಾರ: ನಿರ್ವಹಣೆ ಕೊರತೆಯಿಂದ ಇಲ್ಲಿನ ಸಬ್ ರಜಿಸ್ಟ್ರಾರ್ ಕಚೇರಿಯ ಬ್ಯಾಟರಿಗಳು ಸ್ಪೋಟಗೊಳ್ಳುತ್ತಿದ್ದು, ಕಚೇರಿ ಅಧಿಕಾರಿಗಳು, ಜನರು ಆತಂಕದಿಂದ ಕಾಲ ಕಳೆಯುವಂತಾಗಿದೆ.

    ಕಚೇರಿಯಲ್ಲಿರುವ 8ಕ್ಕೂ ಅಧಿಕ ಬ್ಯಾಟರಿಗಳಲ್ಲಿ ಈಗಾಗಲೇ 4 ಸ್ಪೋಟಗೊಂಡು ಹಾಳಾಗಿವೆ. ಹೀಗಾಗಿ ಜ.9ರಿಂದ ನೋಂದಣಿ ಕಾರ್ಯವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಜನ ನಿತ್ಯ ಕಚೇರಿಗೆ ಬಂದು ವಾಪಸಾಗುತ್ತಿದ್ದಾರೆ.

    ಮೊದಲಿನಿಂದಲೂ ಸಮಸ್ಯೆ: ಉಪ ನೋಂದಣಿ ಕಚೇರಿಯಲ್ಲಿನ ಕಂಪ್ಯೂಟರ್​ಗಳ ನಿರ್ವಹಣೆಗೆ ರಾಜ್ಯಮಟ್ಟದಲ್ಲಿ ಗುತ್ತಿಗೆ ಪಡೆದ ಕಂಪನಿಯ ಅವಧಿ ಮುಕ್ತಾಯವಾಗಿದೆ. ಇದುವರೆಗೂ ಹೊಸ ಟೆಂಡರ್ ಆಗಿಲ್ಲ. ಇದರಿಂದ ಕಳೆದ ಕೆಲ ತಿಂಗಳಿಂದ ಉಪ ನೋಂದಣಿ ಕಚೇರಿಯ ಕಂಪ್ಯೂಟರ್​ಗಳು ಕೈಕೊಡುತ್ತಿದ್ದವು. ಸರ್ವರ್ ಸಮಸ್ಯೆ ಸದಾ ಉಂಟಾಗುತ್ತಿತ್ತು. ಈಗ ಬ್ಯಾಟರಿಗಳು ಕೈಕೊಟ್ಟು ನೋಂದಣಿಯೇ ಸ್ಥಗಿತಗೊಳ್ಳುವಂತಾಗಿದೆ.

    ಸಿಬ್ಬಂದಿ ಇಲ್ಲ: ಕಚೇರಿಯಲ್ಲಿ ಉಪ ನೋಂದಣಾಧಿಕಾರಿ ಬಿಟ್ಟರೆ ಬೇರೆ ಸಿಬ್ಬಂದಿಯೇ ಇಲ್ಲ. ಜಿಲ್ಲಾ ನೋಂದಣಾಧಿಕಾರಿ ಕಚೇರಿಯ ಅಧಿಕಾರಿಗಳು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದ ಕಂಪ್ಯೂಟರ್ ಆಪರೇಟರ್​ಗಳು, ಏಜೆಂಟರೇ ಕಾರ್ಯ ನಿರ್ವಹಿಸುವಂತಾಗಿದೆ. ಕಸ ಗುಡಿಸಲೂ ಅಲ್ಲಿ ಜನರಿಲ್ಲ.

    ನಷ್ಟ: ಕಾರವಾರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಜಮೀನು ಪರಭಾರೆ, ವಿವಾಹ ನೋಂದಣಿ ಹಾಗೂ ಇತರ ವ್ಯವಹಾರಗಳ ನೋಂದಣಿ ಸೇರಿ ದಿನಕ್ಕೆ ಕನಿಷ್ಠ 1 ಲಕ್ಷ ರೂ. ಶುಲ್ಕ ಸಂಗ್ರಹವಾಗುತ್ತದೆ. ಆದರೆ, ಕಳೆದ 10 ದಿನಗಳಿಂದ ಕೆಲಸ ಸ್ಥಗಿತವಾಗಿದ್ದರಿಂದ ಸರ್ಕಾರಕ್ಕೆ ಲಕ್ಷಾಂತರ ರೂ. ನಷ್ಟವಾಗಿದೆ.

    ಈ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು. | ತ್ರಿಲೋಕಚಂದ್ರ ಇನ್ಸ್​ಪೆಕ್ಟರ್ ಜನರಲ್ ಆಫ್ ರಜಿಸ್ಟ್ರಾರ್

    ಈ ಕಚೇರಿಗೆ ಜನ ಬರಲೂ ಭಯ ಪಡುವಂತಾಗಿದೆ. ಸರ್ಕಾರಕ್ಕೆ ಆದಾಯ ತಂದುಕೊಡುವ ಇಲಾಖೆಯೇ ತೀರ ದುಸ್ಥಿತಿಯಲ್ಲಿದೆ. ಶೀಘ್ರ ವ್ಯವಸ್ಥೆ ಸರಿ ಮಾಡದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು. | ಮಾಧವ ನಾಯ್ಕ ಜನಶಕ್ತಿ ವೇದಿಕೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts