More

    ನೊಣಗಳ ಕಾಟಕ್ಕೆ ಗ್ರಾಮಸ್ಥರು ಕಂಗಾಲು

    ರಾಣೆಬೆನ್ನೂರ: ತಾಲೂಕಿನ ಯತ್ತಿನಹಳ್ಳಿ ಗ್ರಾಮಸ್ಥರಿಗೆ ನೊಣ ಹೊಡೆಯೊದೇ ನಿತ್ಯದ ಕಾಯಕವಾಗಿದೆ. ಹಾಗಂತ ಇವರಿಗೆ ಉದ್ಯೋಗ ಇಲ್ಲವೆಂದಲ್ಲ. ಮೈತುಂಬ ಕೆಲಸವಿದೆ. ಆದರೆ, ಇತ್ತೀಚೆಗೆ ಗ್ರಾಮದಲ್ಲಿ ನೊಣಗಳ ಕಾಟ ವಿಪರೀತವಾಗಿದೆ. ಕುಡಿಯುವ ನೀರು, ಆಹಾರ ರಕ್ಷಣೆಗಾಗಿ ನೊಣ ಹೊಡೆದೋಡಿಸುವುದೇ ದೊಡ್ಡ ಕೆಲಸವಾಗಿದೆ.

    ಇದಕ್ಕೆ ಕಾರಣ ಗ್ರಾಮದ ಅಕ್ಕಪಕ್ಕದಲ್ಲಿ ಕೆಲವರು ಅವೈಜ್ಞಾನಿಕವಾಗಿ ಕೋಳಿಫಾಮ್ರ್ ನಡೆಸುತ್ತಿರುವುದು ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

    ಕೋಳಿಫಾಮ್ರ್ ನಡೆಸಬೇಕಾದರೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಸತ್ತ ಕೋಳಿಗಳನ್ನು ಗುಂಡಿಯಲ್ಲಿ ಹಾಕಿ ಮುಚ್ಚಬೇಕು ಹೀಗೆ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ನಾನಾ ಕ್ರಮಗಳನ್ನು ಅನುಸರಿಸಬೇಕೆಂಬ ನಿಯಮವಿದೆ. ಆದರೆ, ಗ್ರಾಮದ ಬಳಿ ಫಾಮ್ರ್ ನಡೆಸುತ್ತಿರುವವರು ಮುಂಜಾಗ್ರತೆಯಿಂದ ಅನುಸರಿಸಬೇಕಾದ ಎಲ್ಲ ಕ್ರಮಗಳನ್ನು ಗಾಳಿಗೆ ತೂರಿ ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ.

    ಸತ್ತ ಕೋಳಿಗಳನ್ನು ಗುಂಡಿಯಲ್ಲಿ ಮುಚ್ಚುವ ಬದಲು ಬಿಸಾಕುತ್ತಿದ್ದಾರೆ. ಅವುಗಳನ್ನು ತಿನ್ನಲು ಬರುವ ನಾಯಿಗಳು ಮಾಂಸವನ್ನು ಚೆಲ್ಲಾಪಿಲ್ಲಿ ಮಾಡಿ ತೆಗೆದುಕೊಂಡು ಹೋಗಿ ಗ್ರಾಮದಲ್ಲಿ ಬಿಡುತ್ತಿವೆ. ಕೋಳಿಫಾಮ್ರ್ ಸ್ವಚ್ಛಗೊಳಿಸದ ಕಾರಣ ಗಬ್ಬು ನಾರುತ್ತಿದೆ. ಹೀಗಾಗಿ ಗ್ರಾಮದಲ್ಲೀಗ ನೊಣಗಳ ಕಾಟ ಹೆಚ್ಚಾಗಿದೆ.

    ಜೀವಿಸೋದೆ ಸವಾಲಿನ ಕೆಲಸ: ದಿನದಿಂದ ದಿನಕ್ಕೆ ನೊಣಗಳ ಸಂಖ್ಯೆ ಅಧಿಕವಾಗತೊಡಗಿದೆ. ಮನೆ ಅಂಗಳದಲ್ಲಿ ಏನೇ ವಸ್ತುಗಳನ್ನಿಟ್ಟರು ನೊಣಗಳು ಮುಕರಿಕೊಳ್ಳುತ್ತಿವೆ. ಊಟ ಮಾಡಬೇಕಾದರೆ ಫ್ಯಾನ್ ಹಚ್ಚಿಕೊಂಡೇ ಮಾಡಬೇಕು. ಇಲ್ಲವಾದರೆ ಊಟದ ತಟ್ಟೆ ತುಂಬ ನೊಣಗಳು ತುಂಬಿಕೊಳ್ಳುತ್ತವೆ. ಅಡುಗೆ ಮಾಡಿ ಮುಚ್ಚಿಡದಿದ್ದರೆ ಸಂಪೂರ್ಣ ನೊಣಗಳ ಪಾಲಾಗುತ್ತದೆ. ಕುಡಿಯುವ ನೀರು ಸಹ ಸಂರಕ್ಷಿಸಿಡಬೇಕಾದ ಪರಿಸ್ಥಿತಿ ಎದುರಾಗಿದೆ. ರಾತ್ರಿ ನಿದ್ರಿಸುವ ಬದಲು ನೊಣಗಳನ್ನು ಹೊಡೆದು ಓಡಿಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

    ಅನಾರೋಗ್ಯದ ಭೀತಿ: ಐದಾರು ತಿಂಗಳ ಹಿಂದೆ ಇಷ್ಟೊಂದು ನೊಣಗಳ ಸಮಸ್ಯೆಯಿರಲಿಲ್ಲ. ಆದರೀಗ ಮಕ್ಕಳನ್ನು ಆಟವಾಡಲು ಬಿಡಲು ಆಗದಂತಹ ಸ್ಥಿತಿಗೆ ತಲುಪಿದೆ. ಗ್ರಾಮದಲ್ಲಿ ನೊಣಗಳು ತುಂಬಿಕೊಂಡಿದ್ದನ್ನು ನೋಡಿದರೆ, ಎಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತೇವೆಯೋ ಎನ್ನುವ ಆತಂಕದ ಸ್ಥಿತಿ ನಿರ್ವಣವಾಗಿದೆ.

    ನೊಣಗಳ ಹಾವಳಿ ಕುರಿತು ತಾಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಿಮ್ಮ ಮನೆ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಆದ್ದರಿಂದ ತಹಸೀಲ್ದಾರರು, ತಾಲೂಕು ಆರೋಗ್ಯಾಧಿಕಾರಿಗಳು, ತಾಪಂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆಗೆ ಪರಿಹಾರ ಸೂಚಿಸಬೇಕು. ಇಲ್ಲವಾದರೆ ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

    ನೊಣಗಳ ಕಾಟದಿಂದ ಮನೆಯಲ್ಲಿ ವಾಸಿಸುವುದೇ ಕಷ್ಟವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೆ ತಾಲೂಕು ವೈದ್ಯಾಧಿಕಾರಿ, ತಾಪಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
    | ಗೋಣೆಪ್ಪ ಎಚ್, ಗ್ರಾಮಸ್ಥ

    ಯತ್ತಿನಹಳ್ಳಿಯಲ್ಲಿ ನೊಣಗಳ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿ ಸರಿಪಡಿಸಲಾಗುವುದು. ಕೋಳಿಫಾಮರ್್​ನಿಂದ ಸಮಸ್ಯೆ ಆಗುತ್ತಿದೆ ಎನ್ನುವುದಾದರೆ ಸ್ವಚ್ಛತೆ ಕ್ರಮ ಅನುಸರಿಸುವಂತೆ ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು. ಕೇಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
    | ಎಸ್.ಎಂ. ಕಾಂಬಳೆ, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts