More

    ನೊಂದ ರೈತರ ನೆರವಿಗೆ ಬಾರದ ಕಾಂಗ್ರೆಸ್ ಸರ್ಕಾರ

    ತಾಳಿಕೋಟೆ: ಮಳೆಯ ಅಭಾವದಿಂದ ರಾಜ್ಯದಲ್ಲಿ ಎಲ್ಲಿಯೂ ಬಿತ್ತನೆಯ ಕಾರ್ಯ ಆರಂಭಗೊಂಡಿಲ್ಲ. ರಾಜ್ಯ ಬರದಿಂದ ತತ್ತರಿಸುತ್ತಿದೆ. ಇದರಿಂದ ರೈತ ಸಮುದಾಯ ಸಂಕಷ್ಟಕ್ಕೆ ಜಾರಿದ್ದರೂ ಕಾಂಗ್ರೆಸ್ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ(ಕೂಚಬಾಳ) ಹೇಳಿದರು.

    ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮಾಡಿಕೊಂಡಿರುವ ರೈತರು ಮಳೆಯ ಕೊರತೆಯಿಂದ ದಿಕ್ಕು ತೋಚದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೂಡಲೇ ಸರ್ಕಾರ ಬರಗಾಲ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಬೇಕು. ರೈತರು ಸಂಕಷ್ಟದಲ್ಲಿದ್ದರೂ ಕಾಂಗ್ರೆಸ್ ಸರ್ಕಾರದ ದುರಾಡಳಿತ ಹೆಚ್ಚುತ್ತಿದೆ. ವರ್ಗಾವಣೆಯ ದಂಧೆಯಲ್ಲಿಯೇ ತೊಡಗಿಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹತ್ಯೆಗಳು ಆರಂಭಗೊಂಡಿವೆ. ಜೈನಮುನಿಗಳ ಹಾಗೂ ವೇಣುಗೋಪಾಲ ಹತ್ಯೆ ಜನರಲ್ಲಿ ಭೀತಿ ಮೂಡಿಸಿದೆ ಎಂದು ದೂರಿದರು.

    ಬೆಂಗಳೂರಲ್ಲಿ ಮಹಾ ಘಟಬಂದನ್ ಹೆಸರಿನಲ್ಲಿ ದೇಶದಲ್ಲಿಯ ಎಲ್ಲ ವಿರೋಧ ಪಕ್ಷಗಳನ್ನು ಕಟ್ಟಿಕೊಂಡು ಸಭೆಯನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಸಭೆ ಮಾಡಲು ಯಾರೂ ಬೇಡವೆನ್ನುವುದಿಲ್ಲ. ಆದರೆ ಸಭೆಯಲ್ಲಿ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿರುವುದು ಆಡಳಿತ ವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ವಿಧಾನಸೌಧದಲ್ಲಿ ಅಧಿವೇಶನ ನಡೆದಿದೆ. ಇಲ್ಲಿ ರೈತರ ಬಗೆಗೆ ಚರ್ಚೆ ನಡೆಸದೇ ಸರ್ಕಾರ ಕಳೆದೊಂದು ವಾರದದಿಂದ ತಮ್ಮೆಲ್ಲ ಸಚಿವರನ್ನು ಕರೆದುಕೊಂಡು ಘಟಬಂದನ್ ಸಭೆಯ ತಯಾರಿಯಲ್ಲಿ ತೊಡಗಿದೆ. ಈ ಸಭೆಯ ಉದ್ದೇಶವೇನು ಎಂಬುದನ್ನು ಸಿಎಂ ಸಿದ್ದರಾಮಯ್ಯ ಜನರ ಮುಂದೆ ಬಿಚ್ಚಿಡಬೇಕು. ಈ ಮಹಾ ಘಟಬಂದನ್ ಪ್ರಧಾನಿ ಮೋದಿಯವರಿಗೆ ಯಾವ ಸಾಟಿಯೂ ಅಲ್ಲ ಎಂದರು.

    ಎಲ್ಲ ವಿರೋಧ ಪಕ್ಷಗಳನ್ನು ಕಟ್ಟಿಕೊಂಡು ಹೇಗಾದರೂ ಮಾಡಿ ಮೋದಿ ಅವರನ್ನು ಎದುರಿಸಿ, ಅಧಿಕಾರಕ್ಕೆ ಬರಬೇಕೆಂದು ಕಾಂಗ್ರೆಸ್ ತಿರುಕನ ಕನಸ್ಸು ಕಾಣುತ್ತಿದೆ. ಸ್ವಾರ್ಥಕ್ಕಾಗಿ ನಡೆಯುತ್ತಿರುವ ಈ ಸಭೆಯ ಬಗ್ಗೆ ಜನರಿಗೂ ಗೊತ್ತಿದೆ. ಪ್ರಧಾನಿಗಳು 9 ವರ್ಷದ ಅವಧಿಯಲ್ಲಿ ಮಾಡಿರುವ ಯೋಜನೆಗಳಿಂದ ಜನಮನ ಸೂರೆಗೊಂಡಿದ್ದಾರೆ. ಜಗತ್ತಿನ ಉನ್ನತ ಪ್ರಶಸ್ತಿಗಳು ಪ್ರಧಾನಿಗಳಿಗೆ ಲಭಿಸಿವೆ. ಕಾಂಗ್ರೆಸ್‌ನವರಿಗೆ ಕುಟುಂಬ ರಕ್ಷಣೆಯ ಉದ್ದೇಶವಿದೆ. ಯುಪಿಎ ಸರ್ಕಾರವಿದ್ದಾಗ ದೇಶವನ್ನು ಲೂಟಿ ಹೊಡೆದರು. ಹಗರಣಗಳ ಮೇಲೆ ಹಗರಣಗಳನ್ನು ಮಾಡಿದರು. ಈಗ ಜಾಮೀನಿನ ಮೇಲೆ ಕಾಂಗ್ರೆಸ್ ನಾಯಕರು ಓಡಾಡುತ್ತಿದ್ದಾರೆ. ಈ ಸಾರಿಯೂ ಮೋದಿ ಅವರ ನೇತೃತ್ವದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಿಜೆಪಿ ಬರಲಿದೆ ಎಂದರು.

    ರಾಜ್ಯದಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಈಗ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೋದಿ ಬೆನ್ನಿಗೆ ನಿಲ್ಲಲು ಜನರು ನಿರ್ಧರಿಸಿದ್ದಾರೆ. ಯುಪಿಎನಂತಹ ಕಳ್ಳಕಾಕರಿಗೆ ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts