More

    ನೈಜ ಭಾರತದ ಪ್ರತಿಬಿಂಬವಾಗದ ಉನ್ನತ ನ್ಯಾಯಾಂಗ  – ನಾಗಮೋಹನದಾಸ್ ಬೇಸರ 

    ದಾವಣಗೆರೆ: ದೇಶದ ಉನ್ನತ ನ್ಯಾಯಾಂಗ ನೈಜ ಭಾರತದ ಪ್ರತಿಬಿಂಬವಾಗಿಲ್ಲ. ನ್ಯಾಯಿಕ ವ್ಯವಸ್ಥೆಯಲ್ಲೂ ಎಲ್ಲ ವರ್ಗಕ್ಕೂ ಪ್ರಾತಿನಿಧ್ಯ ಕಲ್ಪಿಸುವ ವಿಚಾರ ಕೂಡ ಚರ್ಚೆಯಾಗುತ್ತಿಲ್ಲ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ‘ಯುವ ವಕೀಲರ ಮುಂದಿರುವ ಸವಾಲುಗಳು’ ಎಂಬ ವಿಷಯ ಕುರಿತು ನಗರದ ವಕೀಲರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    2018ರಿಂದ 2023ರ ಮಾರ್ಚ್‌ವರೆಗಿನ ಐದು ವರ್ಷದ ಅವಧಿಯಲ್ಲಿ ದೇಶದ ವಿವಿಧ ಹೈಕೋರ್ಟ್‌ಗಳಿಗೆ 604 ನ್ಯಾಯಮೂರ್ತಿಗಳು ನೇಮಕಗೊಂಡಿದ್ದರೆ. ಇದರಲ್ಲಿ 458 ಮೇಲ್ಜಾತಿಯ ನ್ಯಾಯಮೂರ್ತಿಗಳಿದ್ದಾರೆ. ಉಳಿದಂತೆ 18 ಎಸ್ಸಿ, 9 ಎಸ್ಟಿ, 72 ಹಿಂದುಳಿದ ವರ್ಗ ಹಾಗೂ ಕೇವಲ 34 ಮಂದಿ ಅಲ್ಪಸಂಖ್ಯಾತ ಸಮುದಾಯದವರಿದ್ದಾರೆ. ಇದು ನಿಜವಾದ ಭಾರತದ ಪ್ರತಿಬಿಂಬ ಹೇಗಾದೀತು ಎಂದು ಪ್ರಶ್ನಿಸಿದರು.
    ನ್ಯಾಯಾಂಗದ ಎಲ್ಲ ಹಂತದಲ್ಲೂ ಪ್ರತಿ ವರ್ಗಗಳಿಗೂ ಪ್ರಾತಿನಿಧ್ಯ ನೀಡಿ ವ್ಯವಸ್ಥೆ ಸರಿಪಡಿಸುವ ವಿಚಾರ ಚರ್ಚೆಯಾಗುತ್ತಿಲ್ಲ. ನ್ಯಾಯಾಂಗದ ಮೇಲಿನ ಹಿಡಿತ ಸಾಧಿಸಲು ಈ ಹಿಂದೆಯೂ ಪ್ರಯತ್ನಗಳು ನಡೆಯುತ್ತಿದ್ದವು. ಈಗವು ಹೆಚ್ಚಾಗಿವೆ. ನ್ಯಾಯಮೂರ್ತಿಗಳನ್ನು ರಾಜ್ಯಸಭಾ ಸದಸ್ಯರನ್ನಾಗಿ ಹಾಗೂ ಆಯೋಗಗಳಿಗೆ ನೇಮಕ ಮಾಡುವ ಮೂಲಕ ರಾಜಕೀಯ ಪ್ರಭಾವ ಬೀರುವ ಪ್ರಯತ್ನಗಳು ನಡೆದಿವೆ. ಈ ಬಗ್ಗೆಯೂ ಚರ್ಚೆ ಆಗಬೇಕಿದೆ ಎಂದು ಆಶಿಸಿದರು.
    ಪ್ರಕರಣ ವಿಲೇಯಲ್ಲಿ ಮೊದಲು
    ಭಾರತದಲ್ಲಿ 1 ವರ್ಷದಲ್ಲಿ ಸುಪ್ರೀಂ ಕೋರ್ಟ್ 70 ಸಾವಿರ, ಹೈಕೋರ್ಟ್‌ಗಳು 20 ಲಕ್ಷ ಹಾಗೂ ಕೆಳ ಹಂತದ ನ್ಯಾಯಾಲಯಗಳು 1.80 ಕೋಟಿ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತಿವೆ. ಪ್ರಕರಣಗಳ ವಿಲೇವಾರಿಯಲ್ಲಿ ಭಾರತ ಇತರೆ ರಾಷ್ಟ್ರಗಳಿಗಿಂತ ಮುಂದಿದೆ ಎಂದು ಶ್ಲಾಘಿಸಿದರು.
    ಐರೋಪ್ಯ ದೇಶಗಳಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ 120 ನ್ಯಾಯಮೂರ್ತಿಗಳಿದ್ದಾರೆ. ಭಾರತದಲ್ಲಿ ಹತ್ತು ಲಕ್ಷ ಜನರಿಗೆ ಕೇವಲ 21 ನ್ಯಾಯಮೂರ್ತಿಗಳಿದ್ದಾರೆ. ಪ್ರಕರಣಗಳು ಬಾಕಿ ಉಳಿಯಲು ಇದು ಪ್ರಮುಖ ಕಾರಣವಾಗಿದೆ ಎಂದೂ ಹೇಳಿದರು.
    ಅಲ್ಲದೆ, ನ್ಯಾಯಾಂಗದಲ್ಲಿ ಮೂಲ ಸೌಲಭ್ಯಗಳ ಕೊರತೆ, ಪ್ರಕ್ರಿಯಾತ್ಮಕ ವಿಳಂಬ, ನ್ಯಾಯದಾನಕ್ಕೆ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳದೇ ಇರುವುದು, ಕಕ್ಷಿದಾರರ ಮನೋಭಾವದಿಂದಲೂ ಬಾಕಿ ಪ್ರಕರಣಗಳು ಹೆಚ್ಚುತ್ತಿವೆ ಎಂದೂ ಅಭಿಪ್ರಾಯ ಪಟ್ಟರು.
    ಜಿಲ್ಲಾ ವಕೀಲರ ಸಂಘ, ಆರ್.ಎಲ್. ಕಾನೂನು ಕಾಲೇಜಿನ ಸಹಯೋಗದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ್ ಪ್ರಾಸ್ತಾವಿಕ ಮಾತನಾಡಿದರು.
    ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ರಾಜೇಶ್ವರಿ ಎನ್.ಹೆಗಡೆ, ಆರ್.ಎಲ್. ಕಾನೂನು ಕಾಲೇಜಿನ ಪ್ರಾಚಾರ್ಯ ಜಿ.ಎಸ್. ಯತೀಶ್, ಸಂವಿಧಾನ ಓದು ಅಭಿಯಾನದ ಸಂಯೋಜಕ ಕೆ.ಎಚ್. ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts